ಶಿವಮೊಗ್ಗ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಯಾವುದೇ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ನಾನು ದೆಹಲಿಗೆ ತುರ್ತಾಗಿ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿರುವುದಕ್ಕೆ ಯಾವುದೇ ರಾಜಕೀಯ ಕಾರಣಗಳಿಲ್ಲ. ಅಮಿತ್ ಷಾ ತುಮಕೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೆಹಲಿಗೆ ಬನ್ನಿ ಎಂದು ಸೂಚನೆ ನೀಡಿದ್ದರು. ಆದ್ದರಿಂದ ಹೋಗಿದ್ದೆ ಎಂದರು.
ಜ.13 ಮತ್ತು 14ರಂದು ಅಮಿತ್ ಷಾ, ಪ್ರಧಾನಿ ಮೋದಿ ನವದೆಹಲಿಯಲ್ಲಿ ಪಕ್ಷದ ಎಲ್ಲ ಶಾಸಕರು, ಪರಿಷತ್ ಸದಸ್ಯರು ಮತ್ತು ಸಂಸದರ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ನಾಳೆ-ನಾಡಿದ್ದು ರಾಷ್ಟ್ರೀಯ ಕಾರ್ಯಕಾರಿಣಿ
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಜ.11, 12ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಕರೆಯಲಾಗಿದ್ದು, ಎಲ್ಲ ಶಾಸಕರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಮೋರ್ಚಾ ಅಧ್ಯಕ್ಷರು, ಪ್ರಕೋಷ್ಠಗಳ ರಾಜ್ಯ ಸಂಚಾಲಕರು ತೆರಳಲಿದ್ದಾರೆ. ಈಗಾಗಲೆ ಅನೇಕ ಸಂಸತ್ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸಿದ್ದು, ಆಕಾಂಕ್ಷಿಗಳ ಪಟ್ಟಿಯೊಂದಿಗೆ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ.