ಷಟ್​ಸ್ಥಲಗಳು ಆತ್ಮೋನ್ನತಿಗೆ ಮಾರ್ಗದರ್ಶಕ

ಹಾವೇರಿ: ಶರಣ ಸಂಸ್ಕೃತಿಯಲ್ಲಿ ಷಟ್​ಸ್ಥಲಗಳು ಜೀವನದ ಅವಿಭಾಜ್ಯ ಅಂಗಗಗಳು. ಇವು ಆತ್ಮೋನ್ನತಿಗೆ ಮಾರ್ಗದರ್ಶಕವಾಗಿವೆ ಎಂದು ಶಿರಸಿ ಬಣ್ಣದ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿ ಮಠದಲ್ಲಿ ಶಿವಬಸವ ಸ್ವಾಮೀಜಿ, ಶಿವಲಿಂಗ ಶ್ರೀಗಳ ಪುಣ್ಯಸ್ಮರಣೋತ್ಸವದ ‘ನಮ್ಮೂರು ಜಾತ್ರೆ’ ಅಂಗವಾಗಿ ಶನಿವಾರ ಷಟ್​ಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಬಸವಾದಿ ಶಿವಶರಣರು ಲಿಂಗಾಂಗ ಸಾಮರಸ್ಯಕ್ಕೆ ಷಟ್​ಸ್ಥಲವೇ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ. ಸಾಮಾನ್ಯನು ಭಕ್ತನಾಗಿ, ಮಹೇಶನಾಗಿ, ಪ್ರಸಾದಿಯಾಗಿ, ಪ್ರಾಣಲಿಂಗಿಯಾಗಿ, ಶರಣನಾಗಿ ಐಕ್ಯನಾಗುತ್ತಾನೆ. ಇಂಥ ಕ್ರಮ ಸಮುಚ್ಛಯವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹಾಮಾನವರಾಗಬೇಕು ಎಂದರು.

ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಮಾರ ಮುದಗಲ್ಲ, ಪಿ.ಡಿ. ಶಿರೂರ, ಪ್ರಭು ಹಿಟ್ನಳ್ಳಿ, ಸೋಮಣ್ಣ ಮುಷ್ಟಿ, ಜಗದೀಶ ತುಪ್ಪದ, ನಿರಂಜನ ಹೇರೂರ, ಜಯಣ್ಣ ಸಾವಿರಮಠ, ವೀರಣ್ಣ ಅಂಗಡಿ, ಶಿವಯೋಗಿ ವಾಲಿಶೆಟ್ಟರ, ಶಿವಬಸಪ್ಪ ಹುರಳಿಕುಪ್ಪಿ, ಸಿದ್ದಣ್ಣ ಕಡೇಮನಿ, ನೀಲಪ್ಪ ಪುರದ, ಶಿವಯೋಗೆಪ್ಪ ಅರಣಿ, ಶಿವರಾಜ ವಳಸಂಗಳದ, ಮಹೇಶ ಚಿನ್ನಿಕಟ್ಟಿ, ಎಸ್.ಎಸ್. ಹಾಲಯ್ಯನವರಮಠ, ಸಾಗರ ಅಂಗಡಿ, ಬಿ. ಬಸವರಾಜ ಮತ್ತಿತರರಿದ್ದರು. ಶಿಕ್ಷಕಿ ರೇಣುಕಾ ಮಡಿವಾಳರ ಪ್ರಾರ್ಥಿಸಿದರು. ಬಿ. ಬಸವರಾಜ ಸ್ವಾಗತಿಸಿದರು. ಬಿ.ಎಂ. ಮಠ ನಿರೂಪಿಸಿದರು.