ಶ್ರುತಿ-ರಾಮ್ ಪ್ರೇಮಗೀತೆ

ಬೆಂಗಳೂರು: ನೃತ್ಯ ನಿರ್ದೇಶಕ ರಾಮ್‌ಕುಮಾರ್ ಮತ್ತು ನಟಿ ಶ್ರುತಿ ಹರಿಹರನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈಗ ಅವರ ಖುಷಿಯನ್ನು ಇಮ್ಮಡಿಗೊಳಿಸುವ ಮಾಹಿತಿ ಕೇಳಿಬಂದಿದೆ. ನಿಜಜೀವನದಲ್ಲಿ ಪ್ರೇಮಿಗಳಾಗಿರುವ ಶ್ರುತಿ-ರಾಮ್ ಜತೆಯಾಗಿ ನಟಿಸುತ್ತಿದ್ದಾರೆ. ಹಾಗಂತ ಅವರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಬರುತ್ತಿದೆ ಎಂದುಕೊಳ್ಳುವಂತಿಲ್ಲ. ಅವರಿಬ್ಬರೂ ಜತೆಯಾಗಿ ತೆರೆ ಹಂಚಿಕೊಂಡಿರುವುದು ಮ್ಯೂಸಿಕ್ ವಿಡಿಯೋ ಸಲುವಾಗಿ. ‘ಪ್ರೇಮ’ ಶೀರ್ಷಿಕೆಯ ಈ ಗೀತೆಗೆ ಗೊಮ್ಮಟೇಶ್ ಉಪಾಧ್ಯ ಆಕ್ಷನ್-ಕಟ್ ಹೇಳಿದ್ದಾರೆ. ‘ನಾನು ಲೂಸಿಯಾ ಸಿನಿಮಾ ಮಾಡುವ ಸಮಯದಿಂದಲೂ ಗೊಮ್ಮಟೇಶ್ ಪರಿಚಯ. ಈ ಹಿಂದೆ ಅವರು ‘ನೀನೇ..’ ಎಂಬ ಮ್ಯೂಸಿಕ್ ವಿಡಿಯೋ ಮಾಡಿದ್ದರು. ಅವರ ಜತೆ ಕೆಲಸ ಮಾಡುವ ಹಂಬಲ ಮೊದಲಿನಿಂದಲೂ ಇತ್ತು. ‘ಪ್ರೇಮ’ ಮೂಲಕ ಅದಕ್ಕೆ ಕಾಲ ಕೂಡಿಬಂತು’ ಎನ್ನುತ್ತಾರೆ ಶ್ರುತಿ. ಈ ಗೀತೆಗೆ ಫಣಿ ಕಲ್ಯಾಣ್ ಸಂಗೀತ ನೀಡಿದ್ದಾರೆ. ಕೆಲವು ಕಿರುಚಿತ್ರಗಳಲ್ಲಿ ಕ್ಯಾಮರಾ ಎದುರಿಸಿ ಅನುಭವ ಪಡೆದುಕೊಂಡಿದ್ದ ರಾಮ್ ಕುಮಾರ್ ಅವರೇ ‘ಪ್ರೇಮ’ ಹಾಡಿನಲ್ಲಿ ಶ್ರುತಿಗೆ ಜೋಡಿಯಾದರೆ ಉತ್ತಮ ಎಂಬ ಅಭಿಪ್ರಾಯ ತಂಡದ ಸದಸ್ಯರಿಂದ ಕೇಳಿಬಂತು.

ಪರಿಣಾಮ, ಇದೇ ಮೊದಲ ಬಾರಿಗೆ ಅವರಿಬ್ಬರು ಒಟ್ಟಿಗೆ ನಟಿಸಿದ್ದಾರೆ. ರಿಯಲ್ ಲೈಫ್ ಪ್ರೇಮಿಗಳಾದ ಇಬ್ಬರೂ ಈ ಮ್ಯೂಸಿಕ್ ವಿಡಿಯೋನಲ್ಲಿ ದಂಪತಿಯಾಗಿ ಕಾಣಿಸಿಕೊಂಡಿರುವುದು ವಿಶೇಷ.

ಕೆಲ ದಿನಗಳ ಹಿಂದೆ ಚೆನ್ನೈನಲ್ಲಿ ಇದರ ಚಿತ್ರೀಕರಣ ಮುಗಿದಿದೆ. ಒಟ್ಟು ಎರಡು ದಿನಗಳ ಕಾಲ ಶೂಟ್ ಮಾಡಲಾಗಿದ್ದು, ಯಾಮಿನಿ ಯಜ್ಞಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಹಾಡು ಮೂಡಿಬರಲಿದೆ. ಕನ್ನಡದಲ್ಲಿ ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್​ನಲ್ಲಿ ‘ಪ್ರೇಮ’ ರಿಲೀಸ್ ಆಗಲಿದೆ.

ಕಳೆದ 8 ವರ್ಷಗಳಿಂದ ರಾಮ್ ಮತ್ತು ನಾನು ಪ್ರೀತಿಸುತ್ತಿದ್ದೇವೆ. ಅದಕ್ಕೂ ಮುನ್ನ ಅವರ ಡಾನ್ಸ್ ಕ್ಲಾಸ್​ಗಳಲ್ಲಿ ನಾನು ಭಾಗಿಯಾಗಿದ್ದೆ. ಹಾಗಾಗಿ ಈ ಮ್ಯೂಸಿಕ್ ವಿಡಿಯೋನಲ್ಲಿ ಜತೆಯಾಗಿ ನಟಿಸುವುದು ಸುಲಭ ಎನಿಸಿತು. ಈ ಅವಕಾಶ ನನ್ನ ಪಾಲಿಗೆ ತುಂಬ ವಿಶೇಷ.

| ಶ್ರುತಿ ಹರಿಹರನ್ ನಟಿ

Leave a Reply

Your email address will not be published. Required fields are marked *