ಶ್ರುತಿ ಬೆಳ್ಳಕ್ಕಿಗೆ ಷರತ್ತು ಬದ್ಧ ಜಾಮೀನು

ಧಾರವಾಡ:ಚುನಾವಣೆ ಸಂದರ್ಭದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಪೊಲೀಸರು ಬಂಧಿಸಿದ್ದ ಶ್ರುತಿ ಎಸ್. ಬೆಳ್ಳಕ್ಕಿ ಅವರಿಗೆ ಗುರುವಾರ ಇಲ್ಲಿನ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಬಿಜೆಪಿ ಕಾರ್ಯಕರ್ತೆ ಶ್ರುತಿ ಬೆಳ್ಳಕ್ಕಿ ಅವರು ಸಮಾಜದಲ್ಲಿ ವಿವಿಧ ಸಮುದಾಯ ಮತ್ತು ಧರ್ಮಗಳ ನಡುವೆ ವೈರತ್ವ, ವೈಮನಸ್ಸು ಸೃಷ್ಟಿಸುವ ರೀತಿಯಲ್ಲಿ ಅವಹೇಳನಕಾರಿ ಶಬ್ದ ಬಳಸಿ ಏ. 16ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಮುಮ್ಮಿಗಟ್ಟಿ ಗ್ರಾಮದ ದಶರಥ ದೇಸಾಯಿ ಎಂಬುವರು ಗರಗ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಐಪಿಸಿ ಮತ್ತು ಆರ್​ಪಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು, ಗರಗ ಗ್ರಾಮದ ಶ್ರುತಿ ಬೆಳ್ಳಕ್ಕಿ ಅವರನ್ನು ಏ. 24ರಂದು ಬಂಧಿಸಿದ್ದರು.

ಶ್ರುತಿ ಬೆಳ್ಳಕ್ಕಿ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಕರಾರು ಸಿದ್ಧಪಡಿಸಲಾಗುತ್ತಿದೆ. ಅಲ್ಲದೇ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲಾಗುತ್ತಿದೆ. ಹೀಗಾಗಿ ಏ. 27ರವರೆಗೆ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ಅದಕ್ಕೆ ಶ್ರುತಿ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿ, ಅರ್ಜಿದಾರಳು ವಿದ್ಯಾರ್ಥಿನಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವಳ ಅಭ್ಯಾಸಕ್ಕೆ ತೊಂದರೆಯಾಗುತ್ತದೆ. ಅಲ್ಲದೇ ಪೊಲೀಸರ ತನಿಖೆಗೆ ಸಹಕರಿಸುತ್ತಾರೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಆಚಪ್ಪ ದೊಡ್ಡಬಸವರಾಜ ಅವರು, ಅರ್ಜಿದಾರರು ಒಬ್ಬರ ಶ್ಯುರಿಟಿ, 50 ಸಾವಿರ ರೂ. ಬಾಂಡ್ ನೀಡಬೇಕು ಹಾಗೂ ಪೊಲೀಸರ ತನಿಖೆಗೆ ಸಹಕರಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದರು.

ವಿಶೇಷ ಅಭಿಯೋಜಕರಿಗೆ ಪ್ರಸ್ತಾವನೆ:ಗೃಹ ಸಚಿವ ಎಂ.ಬಿ. ಪಾಟೀಲ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎನ್ನಲಾದ ಪ್ರಕರಣದಲ್ಲಿ, ಸರ್ಕಾರದ ಪರವಾಗಿ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರನ್ನು ನೇಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಅಭಿಯೋಗ ಮತ್ತು ಸರ್ಕಾರಿ ವಾಜ್ಯಗಳ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗಾಗಿ ನ್ಯಾಯಾಲಯದಲ್ಲಿ ಏ. 27ರವರೆಗೆ ಕಾಲಾವಕಾಶ ಕೇಳುವಂತೆ ಸರ್ಕಾರಿ ವಕೀಲರಿಗೆ ಅಭಿಯೋಗದ ನಿರ್ದೇಶಕರು ಪತ್ರ ಬರೆದಿದ್ದಾರೆ.

ಧರ್ಮ ಒಡೆಯಲು ಬಿಡುವುದಿಲ್ಲ :ಹಿಂದು ಧರ್ಮವನ್ನು ಒಡೆಯಲು ನಾನು ಬಿಡುವುದಿಲ್ಲ. ನಾನು ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿಯೇ ಸಾಯುತ್ತೇನೆ. ಆದರೆ ನನ್ನ ಮೇಲೆ ರಾಜಕೀಯ ಪ್ರೇರಿತವಾಗಿ ದೂರು ದಾಖಲಿಸಿರುವುದು ಖಂಡನೀಯ ಎಂದು ಬಿಜೆಪಿ ಕಾರ್ಯಕರ್ತೆ ಶ್ರುತಿ ಬೆಳ್ಳಕ್ಕಿ ಹೇಳಿದರು.

ನಗರದ ಕೇಂದ್ರ ಕಾರಾಗೃಹದಿಂದ ಗುರುವಾರ ಸಂಜೆ ಬಿಡುಗಡೆಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವ ಎಂ.ಬಿ. ಪಾಟೀಲ, ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ವಿರುದ್ಧ ನಾನು ಯಾವುದೇ ಹೇಳಿಕೆ ನೀಡಿಲ್ಲ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆದಿದೆ. ನಾನು ಧರ್ಮ ಒಡೆಯುವುದಕ್ಕೆ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಆದರೆ ಪೊಲೀಸರು ವಿಚಾರಣೆ ನೆಪದಲ್ಲಿ ನನ್ನ ಹಾಗೂ ನನ್ನ ಪತಿಯ ಮೊಬೈಲ್ ಪಡೆದುಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು. ನಾನು ಕಾನೂನು ವಿದ್ಯಾರ್ಥಿಯಾಗಿದ್ದು ನ್ಯಾಯಾಲಯಕ್ಕೆ ಗೌರವ ಕೊಡುತ್ತೇನೆ ಎಂದರು.

Leave a Reply

Your email address will not be published. Required fields are marked *