ಶ್ರೀ ವೀರಭದ್ರಸ್ವಾಮಿ ಕೊಂಡೋತ್ಸವ

ಬೇಲೂರು: ಶ್ರೀ ವೀರಭದ್ರಸ್ವಾಮಿಯ 20ನೇ ವರ್ಷದ ಕೊಂಡೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಹರಕೆ ಹೊತ್ತಿದ್ದ ಭಕ್ತರು, ಸುಮಂಗಲಿಯರು ಕಳಸ ಹೊತ್ತು ಕೊಂಡ ತುಳಿದು ದೇವರ ಕೃಪೆಗೆ ಪಾತ್ರರಾದರು.

ಕೊಂಡೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆಯಿಂದಲೇ ವಿಶೇಷವಾಗಿ ಗಂಗಾಪೂಜೆ, ಗಣಪತಿ ಪೂಜೆ, ಪಂಚ ಕಳಸ ನವಗ್ರಹ ಪೂಜೆ, ಮೃತ್ಯುಂಜಯ ಹೋಮ, ವೀರಭದ್ರನಿಗೆ ಮಹಾ ರುದ್ರಾಭಿಷೇಕ, ರುದ್ರಹೋಮ, ಸಹಸ್ರ ಬಿಲ್ವಾರ್ಚನೆ ನಂತರ ದೇವರಿಗೆ ಮಹಾ ಮಂಗಳಾರತಿ ಮೂಲಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಕೊಂಡೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ದೇಗುಲದಿಂದ ದಾಸೋಹ ಏರ್ಪಡಿಸಲಾಗಿತ್ತು. ದೇಗುಲ ಸಮಿತಿಯ ಯೋಗೀಶ್, ಧನಂಜಯ, ಆನಂದ, ಅಶೋಕ್, ಶಿವಮೂರ್ತಿ, ಆರಾಧ್ಯ, ಚೇತನ್ ಸೇರಿದಂತೆ ಇನ್ನಿತರರಿದ್ದರು.