ಲಿಂಗಸುಗೂರು: ಮಹರ್ಷಿ ವಾಲ್ಮೀಕಿ ಅವರ ಪೂರ್ವಾಶ್ರಮದ ಚರ್ಚೆ ಅನಗತ್ಯವಾಗಿದೆ. ಮಹರ್ಷಿ ವಾಲ್ಮೀಕಿ ಭಾರತೀಯರ ಅಸ್ಮಿತೆಯಾಗಿದ್ದಾರೆ. ರಾಮಾಯಣದಂತಹ ಮೇರು ಕೃತಿಯಲ್ಲಿನ ಜೀವನ ಮೌಲ್ಯಗಳನ್ನು ನಾವೆಲ್ಲ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗಲಿದೆ ಎಂದು ಉಪನ್ಯಾಸಕ, ಸಾಹಿತಿ ಡಾ.ಮಹಾದೇವಪ್ಪ ನಾಗರಹಾಳ ಹೇಳಿದರು.
ಆನೆಹೊಸೂರು ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಇತ್ತೀಚಿಗೆ ಮಾತನಾಡಿದರು. ರಾಮಾಯಣ ಮಹಾಕಾವ್ಯ ತ್ರೇತಾಯುಗದ ಸಂವೇದನೆಯಾಗಿದೆ. ಶ್ರೀರಾಮನ ಆದರ್ಶ ವ್ಯಕ್ತಿತ್ವ, ಸೀತಾದೇವಿಯ ಸತಿ ನಿಷ್ಠೆ, ಲಕ್ಷ್ಮಣನ ಸಹೋದರ ಸೇವೆ, ಭರತನ ತ್ಯಾಗ, ಶಬರಿಯ ಭಕ್ತಿ, ಗುಹನ ಸ್ನೇಹ ಜೀವನ, ಮಂಥರೆಯ ಕಪಟ, ಕೈಕೇಯಿಯ ಸ್ವಾರ್ಥ, ಮಹರ್ಷಿ ವಾಲ್ಮೀಕಿಯ ಗುರುತರದ ಮಹತ್ವವನ್ನು ರಾಮಾಯಣ ಮಹಾಕಾವ್ಯ ಜಗತ್ತಿಗೆ ಪರಿಚಯಿಸಿದೆ ಎಂದರು.
ಶ್ರೀರಾಮನ ಜನ್ಮ ವೃತ್ತಾಂತ, ಆದರ್ಶಮಯ ಬದುಕು ರೂಢಿಸಿಕೊಂಡರೆ ಸುಸಂಸ್ಕೃತ ಸಮಾಜ ನಿರ್ಮಾಣವಾಗಲಿದೆ. ವಾಲ್ಮೀಕಿ ನಾಯಕ ಸಮುದಾಯ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದು ಡಾ.ಮಹಾದೇವಪ್ಪ ನಾಗರಹಾಳ ಹೇಳಿದರು.