ಬಾಗೂರು: ಹೋಬಳಿಯ ನಾಗರ ನವಿಲೇ ಗ್ರಾಮದ ಪುರಾಣ ಪ್ರಸಿದ್ಧ ಶ್ರೀನಾಗೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಮೂಲ ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು.
ಉತ್ಸವ ಮೂರ್ತಿ ಮೂಲ ದೇವಾಲಯದಿಂದ ಮೆರವಣಿಗೆ ಮೂಲಕ ಸಾಗಿ ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿ ನಂತರ ಭಕ್ತರು ಜಯ ಘೋಷದೊಂದಿಗೆ ರಥವನ್ನು ಎಳೆದರು.
ಗ್ರಾಮಸ್ಥರು ಸೇರಿದಂತೆ ಭಕ್ತರಹಳ್ಳಿ, ಚವೇನಹಳ್ಳಿ, ಅಧಿಹಳ್ಳಿ, ರೆಚಿಹಳ್ಳಿ, ಹೊಸೂರು, ಭೋವಿ ಕಾಲನಿ, ಅಪ್ಪೆನಹಳ್ಳಿ, ನಾಗೇನಹಳ್ಳಿ, ಬೈರಾಪುರ, ಚಟ್ನಹಳ್ಳಿ, ಕಾಮನಾಯಕನಹಳ್ಳಿ, ಮರಿಶೆಟ್ಟಿಹಳ್ಳಿ, ಅಂಬ್ರಳ್ಳಿ ಹಾಗೂ ಇನ್ನಿತರ ದೂರದ ಊರುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕೆ ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸಿದರು.
ಭಕ್ತರಿಗೆ ಪಾನಕ, ಫಲಾಹಾರ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್.ಲತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಡಾ. ದಿವ್ಯಾ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ಪರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗೀತಾ ನಾಗೇಂದ್ರ, ಪಿಡಿಒ ಮಲ್ಲೇಶ್, ಮುಖಂಡರಾದ ನವಿಲೇ ಅಣ್ಣಪ್ಪ, ಎನ್.ಕೆ.ನಾಗರಾಜ್ ದೇವರಾಜ್, ಎನ್. ಬಿ.ನಾಗರಾಜ್, ಎನ್.ಎಸ್.ಗಿರೀಶ್, ದಿನೇಶ್, ದೀಪು, ರವಿ ಮತ್ತಿತರರು ಹಾಜರಿದ್ದರು.