ಯರಗಟ್ಟಿ: ಕಳೆದ 50 ವರ್ಷಗಳಿಂದ ಸಮಾಜಕ್ಕೆ ಧರ್ಮ ಬೋಧನೆ ಜತೆಗೆ ಅನುಪಮ ಸೇವೆ ಸಲ್ಲಿಸಿದ ಮುರಗೋಡದ ನೀಲಕಂಠ ಸ್ವಾಮೀಜಿ ಅಮೃತ ಮಹೋತ್ಸವ ಕಾರ್ಯಕ್ರವನ್ನು ಮುಂಬರುವ ಮಾರ್ಚ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಕಂಕಣಬದ್ಧರಾಗೋಣ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಪಟ್ಟಣದ ಮಹಾಂತ ದುರದುಂಡೀಶ್ವರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೀಲಕಂಠ ಸ್ವಾಮೀಜಿ ಅವರ ಅಮೃತ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಾನ್ ತಪಸ್ವಿ ಲಿಂ. ಮಹಾಂತ ಸ್ವಾಮೀಜಿ ಭಕ್ತರ ಉದ್ಧಾರಕ್ಕಾಗಿ ನಾಡಿನಾದ್ಯಂತ ಧರ್ಮ ಪ್ರಚಾರ ಮಾಡಿ ಅಣ್ಣ ಬಸವಣ್ಣನವರ ಪರಮ ಅನುಯಾಯಿಗಳಾಗಿದ್ದರು. ಈಗಿನ ಪೀಠಾಧಿಪತಿ ನೀಲಕಂಠ ಸ್ವಾಮೀಜಿ, ವೈದಿಕ ಪಾಠಶಾಲೆ, ದಾಸೋಹ, ಶಿಕ್ಷಣ, ಗೋಶಾಲೆ ಹೀಗೆ ಹತ್ತಾರು ಸಮಾಜಮುಖಿ ಕಾರ್ಯಗಳ ಮೂಲಕ ಬಹಳಷ್ಟು ಹೆಸರುವಾಸಿಗಳಾಗಿದ್ದಾರೆ ಎಂದರು.
ಕುಂದರಗಿ ಅಡವಿಸಿದ್ದೇಶ್ವರ ಶ್ರೀ ಮಾತನಾಡಿ, ಜಾತಿ, ಮತ, ಪಂಥ ಭೇದವಿಲ್ಲದೆ ಸೇವೆ ಮಾಡಿದ ನೀಲಕಂಠ ಸ್ವಾಮೀಜಿ ಅವರ ಅಮೃತ ಮಹೋತ್ಸವ ಅಂಗವಾಗಿ 75 ಗ್ರಾಮಗಳಲ್ಲಿ ಧರ್ಮ ಜಾಗೃತ ಸಭೆ, 75 ಶ್ರೀಗಳ ತುಲಾಭಾರ, 75 ಸಾಮೂಹಿಕ ವಿವಾಹ, ಲಿಂಗದೀಕ್ಷೆ ಹೀಗೆ ಹತ್ತಾರು ಸಾಮಾಜಿಕ ಕಾರ್ಯಗಳ ಜತೆಗೆ 45 ದಿನ ಪ್ರವಚನ ನಡೆಸಿ ಮಾರ್ಚ್‌ನಲ್ಲಿ ಶ್ರದ್ಧಾ, ಭಕ್ತಿಯಿಂದ ಅಮೃತ ಮಹೋತ್ಸವ ಕಾರ್ಯವನ್ನು ಮಾಡೋಣ ಎಂದರು.
ಮುರಗೋಡದ ನೀಲಕಂಠ ಸ್ವಾಮೀಜಿ ಮಾತನಾಡಿ, ನನ್ನ 75 ಷರ್ವದ ಅಮೃತ ಮಹೋತ್ಸವದ ನೆಪದಲ್ಲಿ ‘ಅಮೃತದ ನಡೆ ಧರ್ಮದ ಹಳ್ಳಿಯ ಕಡೆ’ ಎಂಬ ಘೋಷ ವಾಕ್ಯದೊಂದಿಗೆ ಧರ್ಮ ಜಾಗೃತಿ ಕಾರ್ಯಗಳನ್ನು ಮಾಡಲಾಗುವುದು. ಈ ಕಾರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಮುನವಳ್ಳಿಯ ಮುರುಘೇಂದ್ರ ಶ್ರೀ, ಕಟಕೋಳದ ಸಚ್ಚಿದಾನಂದ ಶ್ರೀ, ಹಾವನೂರಿನ ಶಿವಕುಮಾರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಅಶೋಕ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ವೈ.ಎಂ. ಯಾಕೊಳ್ಳಿ, ಅಜಿತಕುಮಾರ ದೇಸಾಯಿ, ವಿನಯಕುಮಾರ ದೇಸಾಯಿ, ಪರ್ವತಗೌಡ ಪಾಟೀಲ, ವಿ.ಡಿ. ಜಕಾತಿ, ಎಸ್.ಟಿ. ಪಟ್ಟಣಶೆಟ್ಟಿ, ವಿಠ್ಠಲ ದೇವರಡ್ಡಿ,ಎ.ಕೆ. ಜಮಾದಾರ, ಮಹಾಂತೇಶ ಜಕಾತಿ, ರಾಜೇಂದ್ರ ವಾಲಿ, ಶಿವಾನಂದ ಪಟ್ಟಣಶೆಟ್ಟಿ, ವಿಜಯಕುಮಾರ ಮರಡಿ ಇತರರು ಇದ್ದರು.