ಶ್ರೀಗಂಧ ಕಳ್ಳಸಾಗಣೆ ಮಾಡಿದ ಆರೋಪಿಗಳಿಗೆ 5 ವರ್ಷ ಶಿಕ್ಷೆ

ಆರೋಪಿಗಳಿಗೆ ತಲಾ 1.50ಲಕ್ಷ ರೂ. ದಂಡ ವಿಧಿಸಿದ ಬೆಳಗಾವಿ ನ್ಯಾಯಾಲಯ

ಬೆಳಗಾವಿ: ಶ್ರೀಗಂಧದ ಕಟ್ಟಿಗೆ ಕಡಿದು, ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿರುವ ಮೂವರು ಆರೋಪಿಗಳಿಗೆ ನಗರದ 11ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗಳಿಗೆ ಐದು ವರ್ಷ ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿ ಇತ್ತೀಚೆಗೆ ತೀರ್ಪು ನೀಡಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಗ್ರಾಮದ ಆರೋಪಿಗಳಾದ ಶಿವಪ್ಪ ಪುತನಪ್ಪ ಹರಣಶಿಕಾರಿ(32) ಕಾಶಪ್ಪ ಬಸಪ್ಪ ಹರಣಶಿಕಾರಿ(29) ಹಾಗೂ ತಮ್ಮಣ್ಣ ಬಸಪ್ಪ ಹರಣಶಿಕಾರಿ(21) ಎಂಬುವರೇ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳು.
ಆರೋಪಿಗಳು ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದಲ್ಲಿ ಬೆಳೆದು ನಿಂತಿದ್ದ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುವುದಕ್ಕಾಗಿ ಕಳ್ಳಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಮದುರ್ಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು.
ಪ್ರಕರಣದ ದಾಖಲಿಸಿಕೊಂಡಿದ್ದ ರಾಮದುರ್ಗ ಪೊಲೀಸರು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿದ, 11ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಸಂಧ್ಯಾರಾವ್ ಪಿ.ಅವರು, ಆರೋಪಿಗಳಿಗೆ ಐದು ವರ್ಷ ಶಿಕ್ಷೆ ಹಾಗೂ ತಲಾ 1.50 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶೈಲಜಾ ಪಾಟೀಲ ಅವರು ವಕಾಲತ್ತು ವಹಿಸಿದ್ದರು. ಆರೋಪಿಗಳನ್ನು ಹಿಂಡಲಗಾ ಜೈಲಿಗೆ ರವಾನಿಸಲಾಯಿತು.