ಚಿತ್ರದುರ್ಗ: ಶ್ರೀಕೃಷ್ಣನ ಗೀತಸಾರ ಎಲ್ಲರ ಬದುಕಿಗೆ ದಾರಿ ದೀಪವಾಗಿದೆ. ಸರ್ವರೂ ಪೂಜಿಸಲ್ಪಡುವ ಭಗವಂತ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿಯಲ್ಲಿ ಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶ್ರೀಕೃಷ್ಣ ಎಲ್ಲಾ ವರ್ಗದ ಜನರನ್ನು ಪ್ರೀತಿಯಿಂದ ಕಂಡಿರುವ ಕುರಿತು ಪುರಾಣಗಳಲ್ಲಿ ಉಲ್ಲೇಖವಿದೆ. ಸಕಲ ಜೀವಾತ್ಮಗಳಿಗೂ ಲೇಸು ಬಯಸುವವರು ಭಗವಂತನಿಗೆ ಹತ್ತಿರವಾಗುತ್ತಾರೆ. ಮುಂದಿನ ವರ್ಷ ಶ್ರೀಕೃಷ್ಣ ಜಯಂತಿಯನ್ನು ವೇಷಭೂಷಣ, ಚಿತ್ರಕಲಾ, ಲೇಖನ ಸೇರಿ ವಿವಿಧ ಸ್ಪರ್ಧೆ ಆಯೋಜಿಸಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ಯಾದವ ಸಮುದಾಯ ಜಿಲ್ಲೆಯಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಬಲವಾಗಬೇಕು. ವಿಜ್ಞಾನ, ನಾಗರಿಕತೆ ಬಹಳಷ್ಟು ಮುಂದುವರೆದಿದ್ದು, ಹಳೆಯ ಮೌಢ್ಯಗಳ ಪಾಲನೆ ಬಿಡಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು. ಬಡತನದಲ್ಲಿ ಜನಿಸಿದರು ಅದನ್ನು ಮೀರಿ ಉತ್ತಮ ಸ್ಥಾನ ಗಳಿಸಬಹುದು. ಇದಕ್ಕೆ ಶಿಕ್ಷಣ ಹಾಗೂ ಕಷ್ಟಪಟ್ಟು ದುಡಿಯುವ ಮನಸ್ಸಿರಬೇಕು ಎಂದು ಸಲಹೆ ನೀಡಿದರು.
ಲೇಖಕ ಆನಂದ್ ಮಾತನಾಡಿ, ಕೃಷ್ಣ ಸದಾ ಪ್ರಕೃತಿಯೊಂದಿಗೆ ಬೆರೆಯುತ್ತಿದ್ದ. ಜಾತಿ ಸಮಾಜವನ್ನೂ ಮೀರಿ ಎಲ್ಲಾ ವರ್ಗದ ಜನರನ್ನು ಸಮಚಿತ್ತದಿಂದ ನೋಡಿದ. ಹಿಂದುಳಿದ ಜಾಂಬವಂತನ ಮಗಳನ್ನು ಮದುವೆಯಾದ. ಸರ್ವಸ್ವವನ್ನು ಕಳೆದುಕೊಂಡಿದ್ದ ಪಾಂಡವರ ಪರ ನಿಂತು ಕುರುಕ್ಷೇತ್ರದಲ್ಲಿ ಗೆಲುವು ತಂದಿತ್ತ. ಹೀಗಾಗಿ ಶ್ರೀಕೃಷ್ಣ ಜಯದ ಸಂಕೇತ ಎಂದು ಬಣ್ಣಿಸಿದರು.
ಡಿಎಚ್‌ಒ ಡಾ.ಆರ್.ರಂಗನಾಥ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಯಾದವ ಸಮುದಾಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ, ಮುಖಂಡರಾದ ಆರ್.ಕೃಷ್ಣಪ್ಪ, ಬಿ.ಪಿ.ಪ್ರಕಾಶ್, ಸಿ.ವೀರಭದ್ರಪ್ಪ, ಸುಧಾಕರ್, ಧನಂಜಯ, ಹೊನ್ನೂರು ತಿಮ್ಮಪ್ಪ, ಈಶ್ವರಪ್ಪ, ಡಿ.ಜೆ.ಗೋವಿಂದಪ್ಪ, ಟಿ.ತಿಮ್ಮಪ್ಪ, ನಾಗೇಂದ್ರಪ್ಪ ಇತರರಿದ್ದರು.