ನಂಜನಗೂಡು: ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಭಾನುವಾರ ರಾತ್ರಿ ಅಂಧಕಾಸುರನ ವಧೆ ವಿಜೃಂಭಣೆಯಿಂದ ನೆರವೇರಿತು.
ಕಳೆದ ವರ್ಷ ಚಿತ್ರಪಟ ಕಾರಣದಿಂದ ಗೊಂದಲಕ್ಕೆ ಕಾರಣವಾಗಿತ್ತು. ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ನಗರದ ರಾಕ್ಷಸ ಮಂಟಪ ವೃತ್ತದ ಬಳಿ ಅಂಧಕಾಸುರನ ಚಿತ್ರವನ್ನು ರಂಗೋಲಿಯಲ್ಲಿ ಬರೆಯಲಾಗಿತ್ತು. ಅಲ್ಲದೆ, ಬೃಹತ್ ಗಾತ್ರದ ಅಂಧಕಾಸುರನ ಚಿತ್ರಪಟವನ್ನು ನಿರ್ಮಿಸಲಾಗಿತ್ತು. ಮೊದಲಿಗೆ ದೇವಾಲಯದ ಆಗಮಿಕ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಅಂಧಕಾಸುರನನ್ನು ರಂಗೋಲಿಯಲ್ಲಿ ಬರೆಯಲಾಗಿದ್ದ ಚಿತ್ರಕ್ಕೆ ಬಲಿ ಪೂಜೆ ನೆರವೇರಿಸಿ ಜೀವ ಕಳೆ ತುಂಬಲಾಯಿತು. ನಂತರ ಶ್ರೀಕಂಠೇಶ್ವರ ದೇವಾಲಯದಿಂದ ನಟರಾಜ ಅವತಾರದ ಉತ್ಸವ ಮೂರ್ತಿಯನ್ನು ದೇವಾಲಯದ ಅರ್ಚಕರ ತಂಡ ಹೂವಿನ ಪಲ್ಲಕ್ಕಿಯೊಡನೆ ಮೆರವಣಿಗೆ ಮೂಲಕ ಕರೆತಂದರು.
ರಾಕ್ಷಸ ಮಂಟಪದ ಬಳಿ ಬರೆಯಲಾಗಿದ್ದ ಅಂಧಕಾಸುರನ ರಂಗೋಲಿಯ ಭಾವಚಿತ್ರವನ್ನು ಉತ್ಸವ ಮೂರ್ತಿಯನ್ನು ಹೊತ್ತಿದ್ದ ಅರ್ಚಕರ ತಂಡ ತುಳಿದು ರಂಗೋಲಿಯನ್ನು ಅಳಿಸುವ ಮೂಲಕ ಸಂಹಾರ ನೆರವೇರಿಸಲಾಯಿತು. ಇದೇ ವೇಳೆ ಅಂಧಕಾಸುರನ ಬೃಹತ್ ಗಾತ್ರದ ಭಾವಚಿತ್ರವನ್ನು ಕೆಳಗೆ ಇಳಿಸುವ ಮೂಲಕ ಅಂಧಕಾಸುರನ ವಧೆಯ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಜೈಕಾರ ಮೊಳಗಿಸಿದರು. ಅಂಧಕಾಸುರನ ರಂಗೋಲಿಯ ಚಿತ್ರವನ್ನು ತುಳಿದು ಕುಣಿದು ಕುಪ್ಪಳಿಸಿದರು. ದೇವರ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡು, ಇಷ್ಟಾರ್ಥಗಳನ್ನು ನೆರವೇರಿಸುವಂತೆ ಹರಕೆ ಹೊತ್ತರು.
ನಂತರ ಅಂಧಕಾಸುರನ ವಧೆಗಾಗಿ ನಟರಾಜನ ರೌದ್ರಾವತಾರದಲ್ಲಿ ಕಾಣಿಸಿಕೊಂಡ ಶ್ರೀಕಂಠೇಶ್ವರಸ್ವಾಮಿಯನ್ನು ಪಾರ್ವತಿ ದೇವಿಯ ಉತ್ಸವ ಮೂರ್ತಿ ತಂದು ಸಮಾಧಾನಪಡಿಸಿ ಪೂಜೆ ನೆರವೇರಿಸಿ ದೇವಾಲಯದ ಕಡೆಗೆ ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ದೇವಾಲಯದಲ್ಲಿ ಧಾರ್ಮಿಕ ಪೂಜೆಗಳನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಕಳೆದ ಬಾರಿ ಅಂಧಕಾಸುರನ ಚಿತ್ರಪಟದ ಬದಲಾಗಿ ಮಹಿಷಾಸುರನ ಚಿತ್ರವನ್ನು ಅಳವಡಿಸಿದ್ದರಿಂದಾಗಿ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗೊಂದಲಕ್ಕೆ ಕಾರಣವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ ಪೂರ್ವಭಾವಿ ಸಭೆ ನಡೆಸಿ ಅಂಧಕಾಸುರನ ಭಾವಚಿತ್ರವನ್ನು ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಆಗಮಿಕರ ನೇತೃತ್ವದಲ್ಲಿ ಶಿವ ಪುರಾಣದಲ್ಲಿರುವಂತೆ ಚಿತ್ರಪಟವನ್ನು ಪ್ರದರ್ಶಿಸಿ ಒಪ್ಪಿಗೆ ಪಡೆಯಲಾಗಿತ್ತು. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ರಘು, ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಹೆಚ್ಚುವರಿ ಎಸ್.ಪಿ.ಮಲ್ಲಿಕ್, ಡಿವೈಎಸ್ಪಿ ರಘು, ಯುವ ಬ್ರಿಗೇಡ್ ದಕ್ಷಿಣ ವಲಯ ಸಂಚಾಲಕ ಚಂದ್ರಶೇಖರ್, ಮುಖಂಡರಾದ ಕೃಷ್ಣ ಜೋಯಿಸ್, ರಾಚಪ್ಪ, ಸುನೀಲ್, ಗಿರೀಶ್ ಉಪಸ್ಥಿತರಿದ್ದರು.