ಶ್ರೀರಂಗಪಟ್ಟಣದಲ್ಲಿ ಜಯಾ ಮರು ಅಂತ್ಯಸಂಸ್ಕಾರ

ಶ್ರೀರಂಗಪಟ್ಟಣ: ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ‘ಮರು ಅಂತ್ಯಸಂಸ್ಕಾರ’ ಪಶ್ಚಿಮವಾಹಿನಿಯಲ್ಲಿ ಮಂಗಳವಾರ ನಡೆಯಿತು. ಕಾವೇರಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಲಾಯಿತು. ವೈದಿಕರಾದ ರಾಮಾನುಜನ್, ರಂಗನಾಥನ್ ಅವರ ನೇತೃತ್ವದಲ್ಲಿ ಜಯಾ ಸೋದರ ಸಂಬಂಧಿ ವರದರಾಜನ್ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಿದರು.

ಕಾವೇರಿ ನದಿ ತೀರದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ವೈಷ್ಣವ ಪದ್ಧತಿಯಂತೆ ಚಿತೆ ಸಿದ್ಧಪಡಿಸಿ, ದರ್ಬೆಗೆ ಜಯಲಲಿತಾ ಅವರ ಆತ್ಮ ಆವಾಹಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಜಯಾ ಅವರಿಗೆ 68 ವರ್ಷ ತುಂಬಿದ್ದರಿಂದ 68 ದರ್ಬೆ ಹುಲ್ಲುಗಳಲ್ಲಿ ಕೂರ್ಚಾ ಮಾಡಿ ಅವರ ಆತ್ಮವನ್ನು ಆವಾಹಿಸಲಾಯಿತು. ನಂತರ ದರ್ಬೆಯನ್ನು ಬೆರಣಿಯ ಮೇಲಿಟ್ಟು, ವೇದಘೊಷ ಸಹಿತ ಶುದ್ಧೀಕರಣ, ವಾಸನ ವಿಚಿತ್ರ (ವಸ್ತ್ರಗಳನ್ನು ಹರಿಯುವುದು) ನಡೆಸಲಾಯಿತು. ಇದೇ ವೇಳೆ ತಾಲೂಕಿನ ಬಾಬುರಾಯನಕೊಪ್ಪಲು ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಹೂವುಗಳನ್ನು ತಂದು ಸ್ಥಳೀಯ ಅರ್ಚಕರು ಚಿತೆಗೆ ಅರ್ಪಿಸಿದರು.

ಅಂತ್ಯಕ್ರಿಯೆ ನೆರವೇರಿಸಿದ ಮೈಸೂರಿನ ಜೆ.ಪಿ.ನಗರ ನಿವಾಸಿ ವರದರಾಜನ್(ಜಯಲಲಿತಾ ತಂದೆ ಜಯರಾಮು ಅವರ ಮೊದಲನೇ ಹೆಂಡತಿಯ ತಂಗಿ ಮಗ) ಮಾತನಾಡಿ, ‘ತಿ.ನರಸೀಪುರ ತಾಲೂಕು ಶ್ರೀರಂಗರಾಜಪುರ ಗ್ರಾಮದಲ್ಲಿ ವಾಸವಿರುವ ಜಯಲಲಿತಾ ಅವರ ಸೋದರ ವಾಸುದೇವನ್ ಅವರ ಸೂಚನೆ ಮೇರೆಗೆ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಲಾಯಿತು. ಅನಾರೋಗ್ಯ ಕಾರಣ ವಾಸುದೇವನ್ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಜಯಾ ಮೃತಪಟ್ಟ 12ನೇ ದಿನಕ್ಕೆ ಇದೇ ಸ್ಥಳದಲ್ಲಿ ತಿಥಿ ಕಾರ್ಯ ನೆರವೇರಿಸಲಾಗುವುದು ಹಾಗೂ 13ನೇ ದಿನ ಸಾಂಪ್ರದಾಯಿಕ ಶುಭ ಆಚರಣೆ ನೆರವೇರಿಸಲಾಗುವುದು’ ಎಂದರು.

ಆತ್ಮಕ್ಕೆ ಮುಕ್ತಿ ನೀಡಲು ಕಾರ್ಯ

‘ಶೀವೈಷ್ಣವ ಪದ್ಧತಿಗೆ ಸೇರಿದವರು ಮೃತಪಟ್ಟರೆ ಅವರ ದೇಹವನ್ನು ಹೂಳುವಂತಿಲ್ಲ, ದಹಿಸಬೇಕು. ಆದರೆ ಜಯಲಲಿತಾ ಮೃತದೇಹವನ್ನು ವೈಷ್ಣವ ಧರ್ಮದ ಆಚರಣೆಗೆ ವಿರುದ್ಧವಾಗಿ ಹೂಳಲಾಗಿದೆ. ಆದ್ದರಿಂದ ಅವರ ಆತ್ಮಕ್ಕೆ ಮುಕ್ತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಪಶ್ಚಿಮವಾಹಿನಿಯಲ್ಲಿ ಮರು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ’ ಎಂದು ವೈದಿಕ ರಾಮಾನುಜನ್ ತಿಳಿಸಿದರು.

 

Leave a Reply

Your email address will not be published. Required fields are marked *