ಶ್ರೀನಿವಾಸ ಕಲ್ಯಾಣೋತ್ಸವ ವೈಭವ

ಬೇತಮಂಗಲ: ಕೆಜಿಎಫ್ ಕ್ಷೇತ್ರ ವ್ಯಾಪ್ತಿಯ ಬೇತಮಂಗಲ ಹೊರವಲಯದ ಬಂಗಾರುತಿರುಪತಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಸಮೀಪದ ವಿ.ಕೋಟೆ ಕ್ರಾಸ್​ನಲ್ಲಿ ಗುರುವಾರ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.

ಕ್ಷೇತ್ರ ಶಾಸಕಿ ರೂಪಕಲಾ, ತಿರುಮಲ ತಿರುಪತಿ ದೇವಾಲಯ ಮತ್ತು ಕೆ.ಸಿ.ರೆಡ್ಡಿ ಟ್ರಸ್ಟ್ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಹತ್ತು ಎಕರೆ ಪ್ರದೇಶದಲ್ಲಿ ವಿಶಾಲ ಪೆಂಡಾಲ್ ಮತ್ತು ಸುಂದರ ವೇದಿಕೆ ನಿರ್ಮಾಣ ಮಾಡಲಾಗಿತ್ತು. ತಿರುಪತಿಯಿಂದ ವೆಂಕಟರಮಣ ಸ್ವಾಮಿ ವಿಗ್ರಹಗಳನ್ನು ಬುಧವಾರ ರಾತ್ರಿ ರೂಪಕಲಾ ಹಾಗೂ ಭಕ್ತರು ಪೂಜೆ ಸಲ್ಲಿಸಿ ಸ್ವಾಗತಿಸಿದರು.

ಬೆಳಗ್ಗೆ 25 ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸಲಾಯಿತು. ವಧುವಿಗೆ ಸೀರೆ, ತಾಳಿ, ಕಾಲುಂಗುರ, ವರನಿಗೆ ಬಟ್ಟೆಯನ್ನುಉಚಿತವಾಗಿ ನೀಡಲಾಗಿತ್ತು. ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸಾಮೂಹಿಕ ವಿವಾಹಗಳ ಸಮಿತಿಯ ನೂರಾರು ಸದಸ್ಯರು, ಭಕ್ತರು ಪಾಲ್ಗೊಂಡರು.

ಪೊಲೀಸ್ ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​ಕುಮಾರ್ ನೇತೃತ್ವದಲ್ಲಿ ಒಬ್ಬ ಡಿವೈಎಸ್​ಪಿ, ಮೂವರು ಸರ್ಕಲ್ ಇನ್​ಸ್ಪೆಕ್ಟರ್, ಮೂವರು ಪಿಎಸ್​ಐಗಳು ಸೇರಿ ನೂರಕ್ಕೂ ಹೆಚ್ಚು ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

ಕಣ್ತುಂಬಿಕೊಂಡ ಭಕ್ತರು: 9ರಿಂದ 10.30ರವರೆಗೆ ಟಿಟಿಡಿ ವತಿಯಿಂದ ಅನ್ನಮಯ್ಯ ಮತ್ತು ದೇವರ ನಾಮಗಳ ಸಂಗೀತ ಕಾರ್ಯಕ್ರಮ ನಡೆಯಿತು. 10.30ರಿಂದ 1ರವರೆಗೆ ಪುರೋಹಿತರ ನೇತೃತ್ವದಲ್ಲಿ ಶ್ರೀ ಪದ್ಮಾವತಿ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿತು. ಶಾಸಕಿ ರೂಪಕಲಾ ಮತ್ತು ಶಶಿಧರ್ ದಂಪತಿ, ಕೆ.ಸಿ.ರೆಡ್ಡಿ ಕುಟುಂಬದ ಕೆ.ಸಿ ವೆಂಕಟಕೃಷ್ಣಾರೆಡ್ಡಿ, ಕೆ.ಸಿ.ರೆಡ್ಡಿ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಬಾಲಕೃಷ್ಣ, ಅ.ಮು.ಲಕ್ಷ್ಮೀನಾರಾಯಣ್ ದಂಪತಿ ಕಲ್ಯಾಣೋತ್ಸವ ವೇದಿಕೆಯಲ್ಲಿದ್ದರು.

15 ಸಾವಿರ ಮಂದಿಗೆ ಊಟ: ಕಲ್ಯಾಣೋತ್ಸವ ಮತ್ತು ಸಾಮೂಹಿಕ ವಿವಾಹಗಳಿಗೆ ಆಗಮಿಸಿದ್ದ 15 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ರೀತಿಯ ಪಲ್ಯ, ಪೂರಿ-ಸಾಗು, ಫಲಾವ್, ಪಕೋಡ, ಅನ್ನ-ಸಾಂಬಾರ್​ನೊಂದಿಗೆ ಬಾಳೆಎಲೆ ಊಟ ಬಡಿಸಲಾಯಿತು. ನೂಕು ನುಗ್ಗಲು ಇಲ್ಲದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಆಹ್ವಾನಿತರಾಗಿ ನ್ಯಾಯಾಧೀಶರು: ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಜಗದೀಶ್ವರ, ಸಿವಿಲ್ ಮತ್ತು ಪ್ರಧಾನ ಜೆಎಂಎಫ್​ಸಿ ನ್ಯಾಯಾಧೀಶ ದಯಾನಂದ.ವಿ.ಹಿರೇಮಠ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ರೂಪಾ, ಅಪರ ಸಿವಿಲ್ ನ್ಯಾಯಾಧೀಶ ಲೋಕೇಶ್ ಸಿ.ಎನ್., ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ನಾಗರಾಜ್ ಭಾಗವಹಿಸಿ ಸಹಭೋಜನ ಮಾಡಿದರು.