ಶ್ರೀಗಳ ಮೌನಾನುಷ್ಠಾನ ಸಂಪನ್ನ

ಲಕ್ಷ್ಮೇಶ್ವರ: ಕಳೆದ 33 ದಿನಗಳಿಂದ ಸಮೀಪದ ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಕೈಗೊಂಡ ಮೌನಾನುಷ್ಠಾನ ಮಂಗಳವಾರ ಕಲಬುರಗಿಯ ಸಮಾಧಾನ ಆಶ್ರಮದ ಜಡೆಯ ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಮಹಾಮಂಗಲಗೊಂಡಿತು.

ದಿಂಗಾಲೇಶ್ವರ ಶ್ರೀಗಳು ಆ. 11ರಿಂದ ಸೆ.11ವರೆಗೆ ಶ್ರೀಮಠದಲ್ಲಿ ಮೌನಾನುಷ್ಠಾನ ಕೈಗೊಂಡು ತ್ರಿಕಾಲ ಪೂಜೆ, ಜಪ, ಧ್ಯಾನ, ಮಂತ್ರ ಬರಹ-ಪಠಣ, ಪ್ರಾಣಾಯಾಮ, ಯೋಗ ಹಾಗೂ ಧಾರ್ವಿುಕ ಗ್ರಂಥಗಳ ಅಧ್ಯಯನದಲ್ಲಿ ತೊಡಗಿದ್ದರು.

ಮೌನ ಮತ್ತು ಧ್ಯಾನದಿಂದ ಮನಃಶುದ್ಧಿ, ಆಹಾರ ರ್ವ್ಯಜದಿಂದ ದೇಹ ಶುದ್ಧಿಗೊಳ್ಳುವ ಮೂಲಕ ತಮ್ಮ ಅಂತಃಶಕ್ತಿ ಹೆಚ್ಚಿಸಿಕೊಳ್ಳಲು ಕಳೆದ 25 ವರ್ಷಗಳಿಂದ ಪ್ರತಿವರ್ಷ 1ರಿಂದ 2 ತಿಂಗಳ ಕಾಲ ಆಹಾರ, ನಿದ್ರೆ ತ್ಯಜಿಸಿ ಮೌನಾನುಷ್ಠಾನ ಕೈಗೊಳ್ಳುತ್ತಾರೆ. 7-8 ವರ್ಷ ಹಿಮಾಲಯ ವಿವಿಧ ಪ್ರಯಾಗಗಳಲ್ಲಿ, ಗಂಗಾವತಿ ಮಾರ್ಕಂಡೇಶ್ವರ ದೇವಸ್ಥಾನ, ಹರಪನಹಳ್ಳಿ-ಹೂವಿನ ಹಡಗಲಿ ಸೂಗಿ ಬೆಟ್ಟ, ಸೊರಬ ತಾಲೂಕು ಮೂಡಿ ಸೇರಿ ಬಾಲೇಹೊಸೂರಿನ ಶ್ರೀಮಠದಲ್ಲಿ ಹೆಚ್ಚಿನ ಸಮಯ ಅನುಷ್ಠಾನ ಕೈಗೊಂಡಿದ್ದಾರೆ.

ಮಂಗಳವಾರ ಮಠದಲ್ಲಿ ನಡೆದ ಮೌನಾನುಷ್ಠಾನ ಮಹಾಮಂಗಲದಲ್ಲಿ ಭಾಗವಹಿಸಿದ್ದ ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀಗಳು ಮಾತನಾಡಿ, ದಿಂಗಾಲೇಶ್ವರ ಶ್ರೀಗಳು ಈ ನಾಡಿನ ಅದ್ಭುತ ವಾಗ್ಮಿಗಳು, ಪ್ರವಚನಕಾರರು, ಧರ್ಮ ಸಂರಕ್ಷಣೆ, ಪ್ರಚಾರಕ್ಕಾಗಿ ತಮ್ಮನ್ನೇ ತೊಡಗಿಸಿಕೊಂಡ ನೇರ ನಿಷ್ಠುರ ನಡೆಯುಳ್ಳವರು. ಪ್ರತಿ ವರ್ಷಶ್ರೀಗಳು ಮೌನಾನುಷ್ಠಾನ ಕೈಗೊಂಡು ಲೋಕ ಕಲ್ಯಾಣ, ಭಕ್ತರ ಸಂಕಷ್ಟ ಹರಣ, ಸಮಾಜದ ಸುಧಾರಣೆ, ಧರ್ಮ ಸಂರಕ್ಷಣೆ, ಧರ್ಮ ಪ್ರಚಾರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಕ್ಕಿಆಲೂರಿನ ಶಿವಬಸವ ಶ್ರೀಗಳು, ಸದಾಶಿವಪೇಟೆಯ ಗದಗೇಶ್ವರ ಶ್ರೀಗಳು, ಗೊಗ್ಗಿಹಳ್ಳಿ ಸಂಗಮೇಶ್ವರ ಶ್ರೀಗಳು, ಜಡೆಯ ಹಿರೇಮಠದ ಅಮರೇಶ್ವರ ಶ್ರೀಗಳು, ಕುಂದಗೋಳ ಕಲ್ಲಾಣಪುರ ಮಠದ ಬಸವಣ್ಣಜ್ಜನವರು, ಕುಕನೂರ ಹಿರೇಮಠದ ಚನ್ನಮಲ್ಲ ದೇವರು, ಮುದೇನೂರು ಹಿರೇಮಠದ ಸಿದ್ಧಲಿಂಗದೇವರು, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಎಲ್.ಸಿ. ಲಿಂಬಯ್ಯಸ್ವಾಮಿಮಠ, ನಿಂಗಪ್ಪ ಮೈಲಾರ, ಚನ್ನಪ್ಪ ಮಲ್ಲಾಡದ, ಜೋಗಯ್ಯ ಹಿರೇಮಠ, ಇತರರು ಇದ್ದರು.