ಶ್ರೀಗಳ ಪುತ್ಥಳಿ ನಿರ್ವಿುಸಲು ಸಲಹೆ

ತುಮಕೂರು: ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳು ನಾಡಿಗೆ ಅನನ್ಯ ಸೇವೆ ಸಲ್ಲಿಸಿದ್ದು, ಗುಜರಾತ್​ನಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಪುತ್ಥಳಿ ಮಾದರಿ ಶ್ರೀಗಳ ಪುತ್ಥಳಿ ನಿರ್ವಿುಸುವಂತೆ ವಿಜಯಪುರದ ಜ್ಞಾನ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಲಹೆಯಿತ್ತರು.

ಶಿವಕುಮಾರ ಶ್ರೀಗಳ ಲಿಂಗೈಕ್ಯರಾದ ಬಳಿಕ ದರ್ಶನಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆ ಬುಧವಾರ ಶ್ರೀಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ನಮನ ಸಲ್ಲಿಸಿ ಗೌರವ ಸಮರ್ಪಿಸಿ ದರು.

ಅದಕ್ಕೂ ಮುನ್ನ ಸಿದ್ದಲಿಂಗ ಶ್ರೀಗಳ ಜತೆ ಮಾತನಾಡಿದ ಸಿದ್ದೇಶ್ವರ ಸ್ವಾಮೀಜಿ, 111 ವರ್ಷ ಸಮಾಜಕ್ಕಾಗಿ ಬದುಕಿದ ಶ್ರೀಗಳ ಕಾಯಕತತ್ವವೇ ಒಂದು ಸಂದೇಶ. ಅನ್ನ, ಅಕ್ಷರ, ವಸತಿ ದಾಸೋಹ ನೀಡಿ ಮಹಾಪುರಷರೆನಿಸಿದ್ದಾರೆ ಎಂದು ಸ್ಮರಿಸಿದರು.

ಶ್ರೀಗಳು ಧಾರ್ವಿುಕ ಕ್ಷೇತ್ರದ ಶಿಖರ ಇದ್ದಂತೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಐಕ್ಯತಾ ಪ್ರತಿಮೆಯಂತೆ ಶಿವಕುಮಾರ ಶ್ರೀಗಳ ಪುತ್ಥಳಿ ಸ್ಥಾಪಿಸುವಂತೆ ಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು. ಅದಕ್ಕೆ ಸಿದ್ದಲಿಂಗ ಶ್ರೀಗಳು ಅದು ಕಷ್ಟಸಾಧ್ಯವೆನಿಸಲಿದೆ. ಧ್ಯಾನ ಮಂದಿರ ನಿರ್ವಿುಸಬೇಕೆಂಬುದು ಶ್ರೀಗಳ ಅಪೇಕ್ಷೆಯಾಗಿತ್ತು. ಅವರ ಗದ್ದುಗೆ ಕೆಳಭಾಗದಲ್ಲೇ ಧ್ಯಾನ ಮಂದಿರ ನಿರ್ವಿುಸಲಾಗುವುದು. ಅಲ್ಲದೇ ಶ್ರೀಗಳು ಬಳಸುತ್ತಿದ್ದ ಎಲ್ಲ ವಸ್ತುಗಳ ಮ್ಯೂಸಿಯಂ ಮಾಡುವ ಉದ್ದೇಶವಿದೆ ಎಂದರು. ಸಿದ್ದೇಶ್ವರ ಸ್ವಾಮೀಜಿ ಇದಕ್ಕೆ ಸಹಮತ ವ್ಯಕ್ತಪಡಿಸಿ ಒಳ್ಳೆಯ ಕಾರ್ಯಕ್ಕೆ ನಮ್ಮ ಬೆಂಬಲವಿರಲಿದೆ ಎಂದರು.