ಶ್ರೀಗಳ ಜೀವನಶೈಲಿ ರಾಷ್ಟ್ರಕ್ಕೆ ಸಮರ್ಪಿತ

ಶಿವಮೊಗ್ಗ: ಸಿದ್ಧಗಂಗಾ ಮಠ ಹಾಗೂ ಶ್ರೀಗಳ ಜೀವನಶೈಲಿ ರಾಷ್ಟ್ರಕ್ಕೆ ಸಮರ್ಪಿತವಾಗಿದೆ. ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿ ಎಲ್ಲ ಜಾತಿ, ಮತ, ಪಂಥದ ಜನರಿಗೂ ದಾಸೋಹ ಸೇವೆ ಸಲ್ಲಿಸಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಹೇಳಿದರು.

ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಸಿದ್ಧಗಂಗಾ ಕ್ಷೇತ್ರ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಜೀವನ ರೂಪಿಸಿಕೊಳ್ಳಲು ನೆರವಾಗಿದೆ. ದೇವರ ದರ್ಶನ ಮಾಡದಿದ್ದರೂ ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದಿದ್ದ ಶ್ರೀಗಳ ದರ್ಶನ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.

ಉಪಮೇಯರ್ ಚನ್ನಬಸಪ್ಪ ಮಾತನಾಡಿ, ಪೆಸಿಟ್ ಕಾಲೇಜಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಶ್ರೀಗಳ ಆಶೀರ್ವಾದ ಪಡೆಯುವ ಪುಣ್ಯ ಲಭಿಸಿತ್ತು. ಸನ್ಮಾರ್ಗದಲ್ಲಿ ನಡೆಯಲು ಶ್ರೀಗಳು ಪ್ರೇರಕ ಶಕ್ತಿ ಆಗಿದ್ದಾರೆ ಎಂದರು.

ಮುಖಂಡ ಪದ್ಮನಾಭ್ ಭಟ್ ಮಾತನಾಡಿ, ಶ್ರೀಗಳು ಜಾತಿಗೆ ಮಣೆಹಾಕದೆ ಎಲ್ಲ ಜಾತಿ, ವರ್ಗದ ಬಡ ಮಕ್ಕಳಿಗೂ ಶಿಕ್ಷಣ ನೀಡುವ ಮಹತ್ಕಾರ್ಯ ಮಾಡಿದ್ದಾರೆ. ಮಠಕ್ಕೆ ಯಾರೇ ಭೇಟಿ ನೀಡಿದರೂ ಮೊದಲು ಊಟ ಸ್ವೀಕರಿಸುವಂತೆ ಹೇಳುತ್ತಿದ್ದರು ಎಂದು ಹೇಳಿದರು.

ಮೇಯರ್ ಲತಾ ಗಣೇಶ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಎನ್.ಜೆ.ರಾಜಶೇಖರ್, ಡಿ.ಎಸ್.ಅರುಣ್, ಎನ್.ಜಿ.ನಾಗರಾಜ್ ಉಪಸ್ಥಿತರಿದ್ದರು.