ಶ್ರೀಕಂಠೇಶ್ವರ ರಥೋತ್ಸವ

ನಂಜನಗೂಡು : ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಚಿಕ್ಕಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ವಿಜೃಂಭಣೆಯ ರಥೋತ್ಸವ ಜರುಗಿತು. ರಥೋತ್ಸವದ ಹಿನ್ನೆಲೆಯಲ್ಲಿ ಬೆಳಗಿನ ಜಾವ 4 ಗಂಟೆಯಿಂದಲೇ ಶ್ರೀಕಂಠೇಶ್ವರಸ್ವಾಮಿಯ ಗರ್ಭಗುಡಿ, ಪಾರ್ವತಿ ಅಮ್ಮನ ಗುಡಿ, ಗಣಪತಿ, ಸುಬ್ರಹ್ಮಣ್ಯಸ್ವಾಮಿ, ಚಂಡಿಕೇಶ್ವರ ಸ್ವಾಮಿ ಗುಡಿಗಳಲ್ಲಿ ಪೂಜಾ ಕೈಂಕರ್ಯ ನಡೆಸಲಾಯಿತು.

ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿ ಅಮ್ಮನ ಉತ್ಸವಮೂರ್ತಿಯನ್ನು ಹೊತ್ತು ತಂದು ರಥದಲ್ಲಿ ಪ್ರತಿಷ್ಠಾಪಿಸಿ ಬೆಳಗ್ಗೆ 9.47 ರಿಂದ 10.13 ನಡುವೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಶ್ರೀಮನ್ಮಹಾರಥಾರೋಹಣ ನೆರವೇರಿಸಲಾಯಿತು. ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಜಯಪ್ರಕಾಶ್ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಗಣಪತಿ ಮತ್ತು ಚಂಡಿಕೇಶ್ವರ ಮೂರ್ತಿ ಹೊತ್ತ ರಥ ಮುಂದೆ ಸಾಗಿದರೆ, ಹಿಂದೆ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿದೇವಿಯ ರಥಗಳು ಹಿಂಬಾಲಿಸಿದವು. ನವ ದಂಪತಿಗಳು ರಥಕ್ಕೆ ಹಣ್ಣು ಧವನ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಚಂಡಮಾರುತ ಹಿನ್ನೆಲೆಯಲ್ಲಿ ಉಂಟಾದ ಮಳೆ ಹಾಗೂ ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.

 

Leave a Reply

Your email address will not be published. Required fields are marked *