ಕೋಲಾರ: ಎಲ್ಲೆಲ್ಲೂ ಗೋವಿಂದ ನಾಮಸ್ಮರಣೆ, ಮುಡಿಕೊಟ್ಟು ಹರಕೆ ತೀರಿಸುವುದು, ದೇಗುಲಗಳ ಬಳಿ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದ ಭಕ್ತರು. ಮನೆಗಳಲ್ಲಿ ದೇವರಿಗೆ ಎಡೆ ಅರ್ಪಿಸಿ, ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ಹಬ್ಬದೂಟ ಸವಿದ ಜನ. ಇದು ಜಿಲ್ಲೆಯಲ್ಲಿ ಕಡೇ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ಕಂಡು ಬಂದ ದೃಶ್ಯ.
ಜಿಲ್ಲೆಯಾದ್ಯಂತ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದುಬಂದಿತ್ತು. ಪ್ರಮುಖವಾಗಿ ವೆಂಕಟರಮಣಸ್ವಾಮಿ, ಆಂಜನೇಯ, ಶನೇಶ್ಚರ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಉತ್ಸವ, ಅನ್ನದಾನ ಸೇರಿ ಹಲವು ಸೇವೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ಪ್ರಮುಖ ಯಾತ್ರಾಸ್ಥಳಗಳಾದ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ, ಗುಟ್ಟಹಳ್ಳಿ(ಬಂಗಾರು ತಿರುಪತಿ)ಯ ವೆಂಕಟರಮಣಸ್ವಾಮಿ, ಚಿಂತಾಮಣಿ ತಾಲೂಕಿನ ಕೈವಾರದ ಶ್ರೀಯೋಗಿನಾರೇಯಣ ತಾತಯ್ಯ, ಅಮರನಾರಾಯಣಸ್ವಾಮಿ, ಎಚ್.ಕ್ರಾಸ್‌ನ ಶನೇಶ್ಚರಸ್ವಾಮಿ, ವಕ್ಕಲೇರಿ ಬಿಳಿಬೆಟ್ಟದ ಆಂಜನೇಯಸ್ವಾಮಿ, ಮುಳಬಾಗಿಲು ಆಂಜನೇಯಸ್ವಾಮಿ, ಕೋಲಾರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ, ವರದರಾಜಸ್ವಾಮಿ, ವೆಂಕಟಾಪುರದ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇಗುಲಗಳು ಸೇರಿದಂತೆ ನಾನಾ ದೇವಾಲಯಗಳಿಗೆ ಭಕ್ತರು ಮುಂಜಾನೆಯಿಂದಲೇ ಕುಟುಂಬ ಸಮೇತ ಭೇಟಿ ನೀಡಿ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.
ದೇವಾಲಯಗಳನ್ನು ವಿವಿಧ ಹೂಗಳಿಂದ ಅಲಂಕರಿಸಿದ್ದು, ಮುಂಜಾನೆ ೪ ಗಂಟೆಯಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಮುಂಜಾನೆ ದೇವರ ವಿಗ್ರಹಗಳಿಗೆ ಕ್ಷೀರಾಭಿಷೇಕ, ವಿಷ್ಣು ಸಹಸ್ರನಾಮ, ಅನ್ನಮಯ್ಯ ಕೀರ್ತನೆಗಳ ಗಾಯನ, ಹರಿಕಥೆ, ಭಜನೆಯಂತಹ ಕಾಯ್ಕ್ರಮಗಳನ್ನು ಆಯೋಜಿಸಲಾಗಿತ್ತು.
ನಗರದ ಅಮ್ಮವಾರಿಪೇಟೆಯ ಶ್ರೀವರದರಾಜ ಸ್ವಾಮಿ ದೇವಾಲಯದಲ್ಲಿ ವಿಷೇಶ ಪೂಜೆ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಬೆಳಗ್ಗೆ ಪಂಜಾಮೃತ ಅಭಿಷೇಕ, ವಿಷೇಶ ಹೂವಿನ ಅಲಂಕಾರ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಶ್ರಾವಣ ಕಡೇ ಶನಿವಾರ, ದೇಗುಲಗಳಿಗೆ ಭಕ್ತಸಾಗರ
ಕೋಲಾರದ ಅಮ್ಮವಾರಿಪೇಟೆಯ ಶ್ರೀವರದರಾಜ ಸ್ವಾಮಿ ದೇವಾಲಯದಲ್ಲಿ ದೇವರ ವಿಗ್ರಹಕ್ಕೆ ವಿಷೇಶ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು.