Wednesday, 12th December 2018  

Vijayavani

Breaking News

ಶ್ರಾವಣಮಾಸದ ವ್ರತಾಚರಣೆಗಳು ಹಾಗೂ ಪುಣ್ಯಫಲ

Monday, 24.07.2017, 3:00 AM       No Comments

|ಪ್ರಸನ್ನಾಚಾರ್ಯ ಎಸ್. ಕಟ್ಟಿ

ಇಂದಿನಿಂದ ಶ್ರಾವಣಮಾಸ. ಶ್ರಾವಣವೆಂದರೆ ಹಬ್ಬ-ಹರಿದಿನಗಳ ಮಾಸ. ಈ ಮಾಸದಲ್ಲಿ ಬರುವ ಶುಕ್ರವಾರಗಳು ಸ್ತ್ರೀಯರಿಗೆ ವಿಶೇಷ. ಈ ದಿನ ಲಕ್ಷ್ಮಿಪೂಜೆಗೆ ಅದರದೇ ಆದ ಮಹತ್ವವಿದೆ. ಶ್ರಾವಣದುದ್ದಕ್ಕೂ 1.ಮಂಗಳಗೌರಿ ವ್ರತ, 2. ನಾಗರಚೌತಿ, 3, ಹೊಸ್ತಿಲ ಪೂಜೆ, 4. ನಾಗರ ಪಂಚಮಿ 5. ಗರುಡ ಪಂಚಮಿ 6. ಮಾಸ ಮಹಾಲಕ್ಷ್ಮಿ ವ್ರತ 7. ಸಿರಿಯಾಳ ಷಷ್ಟಿ 8. ಬುಧ-ಗುರು ವ್ರತಕಥಾ 9. ಜೀವಂತಿಕಾ ವ್ರತ 10, ಶನೇಶ್ವರ ವ್ರತತ್ರಯ 11. ಅಶ್ವತ್ಥ ಆಲಿಂಗನ ಪೂಜೆ, 12. ಶ್ರಾವಣ ಸೋಮವಾರ ರೋಪಿಕಾ ವ್ರತ 13. ದುರ್ಗಾ ಗಣಪತಿ ವ್ರತ 14. ಪವಿತ್ರಾರೋಪಣ. 15. ಪುತ್ರದಾ ಏಕಾದಶಿ 16. ಉಪಾಕರ್ಮ 17. ಶ್ರೀ ಮಹಾಲಕ್ಷ್ಮಿ ವ್ರತ, 18. ಹಯಗ್ರೀವ ಜಯಂತಿ 19. ನೂಲಹುಣ್ಣಿಮಯ ರಕ್ಷಾಬಂಧನ 20. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ 21. ಶ್ರಿ ಕೃಷ್ಣ ಜನ್ಮಾಷ್ಟಮಿ 22. ಮಾನಸಾ ದೇವಿಯ ಪೂಜೆ- ಹೀಗೆ ಮಾಸಪೂರ್ತಿ ಹತ್ತುಹಲವು ಹಬ್ಬ, ವ್ರತಾಚರಣೆಗಳ ಸುಗ್ಗಿ. ಈ ಬಗೆಗಿನ ಕಿರು ಪರಿಚಯ ಇಲ್ಲಿದೆ.

ಮಂಗಳಗೌರೀ ವ್ರತ: ಈ ಬಾರಿ ಶ್ರಾವಣಮಾಸದ ಮೊದಲ ಹಬ್ಬ ಮಂಗಳಗೌರಿ ವ್ರತ. ಶ್ರಾವಣದ 4 ಮಂಗಳವಾರಗಳಲ್ಲಿ ಮಾಡುವ ಗೌರಿಪೂಜೆಯನ್ನು ಮಂಗಳಗೌರಿ ಎಂದು ಕರೆಯುತ್ತಾರೆ. ಈ ವರ್ಷ ಜುಲೈ 25, ಆಗಸ್ಟ್ 1, 8 ಮತ್ತು 15ರಂದು ಈ ವ್ರತ ಮಾಡಬೇಕು. ಮಹಿಳೆಯರು ಮದುವೆಯಾದ ಮೊದಲ 5 ವರ್ಷಗಳಲ್ಲಿ ಈ ವ್ರತ ಆಚರಿಸುತ್ತಾರೆ. ಗಂಡನ ಆರೋಗ್ಯ, ಆಯುಷ್ಯ, ದೀರ್ಘ ಸೌಮಂಗಲ್ಯದ ಅಭಿವೃದ್ಧಿಗಾಗಿ ಆಚರಿಸುವ ವ್ರತವಿದು. ಇದನ್ನು ಗರ್ಭಿಣಿಯರು 7ನೇ ತಿಂಗಳ ನಂತರ ಆಚರಿಸುವಂತಿಲ್ಲ.

ನಾಗರ ಚೌತಿ, ನಾಗರ ಪಂಚಮಿ, ಗರುಡ ಪಂಚಮಿ: ಜು. 26ರಂದು ನಾಗರಚೌತಿ ಹಾಗೂ ಜು. 28ರಂದು ನಾಗರ ಪಂಚಮಿ. ದೇಶದ ಎಲ್ಲ ಭಾಗಗಳಲ್ಲೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಸರ್ಪದೋಷ, ಸರ್ಪಭೀತಿ, ವಿಷಬಾಧೆ, ಚರ್ಮರೋಗ, ನೇತ್ರರೋಗ, ಶ್ರವಣೇಂದ್ರಿಯ ದೋಷ ಮೊದಲಾದ ರೋಗಗಳ ಪರಿಹಾರ, ವಿದ್ಯಾಭ್ಯಾಸ, ಕಂಕಣಭಾಗ್ಯ, ಉದ್ಯೋಗ, ಸಂತಾನ, ಧನ ಪ್ರಾಪ್ತಿಗಾಗಿ ಆಚರಿಸುವ ವ್ರತ ಇದಾಗಿದೆ.

ಏತತ್ಸರ್ವಂ ಚ ಪಂಚಮ್ಯಾಂ ತೇಷಾಂ ಜಾತಂ ಮಹಾತ್ಮನಮ್ |

ಅತಸ್ತಿ್ವಯಂ ತಿಥಿರ್ಧನ್ಯಾ ಸರ್ವಪಾಪಹರಾ ಶುಭಾ ||

ವರಾಹ ಪುರಾಣದಲ್ಲಿ ಹೇಳಿರುವಂತೆ ನಾಗರ ಚೌತಿಯಂದು ಎಲ್ಲ ಸ್ತ್ರೀಯರು ಸೋದರರ ಶ್ರೇಯಸ್ಸಿಗಾಗಿ ಬಾಗಿಲ ಎಡ ಮತ್ತು ಬಲಭಾಗದಲ್ಲಿ ಗಂಧ-ಸಿಂಧೂರ ಗೋಮಯದಿಂದ ಸರ್ಪಾಕೃತಿಯನ್ನು ಬರೆದು ಮೊಸರು ಗರಿಕೆ ಪುಷ್ಪಗಳನ್ನು ನಿವೇದನೆ ಮಾಡಿ ಉಪ್ಪು ಖಾರಗಳಿಲ್ಲದ ಫಲಾಹಾರಗಳನ್ನು ಮಾತ್ರ ಸ್ವೀಕರಿಸಿ ಅಣ್ಣ-ತಮ್ಮಂದಿರ ಬೆನ್ನ ಹುರಿಯ ಮೇಲೆ ಗಂಧದಿಂದ ನಾಗದೇವರನ್ನು ಬರೆದು ಪೂಜಿಸುವುದು. ನಾಗದೇವತೆಗಳ ಶಿಲಾವಿಗ್ರಹ ಅಥವಾ ಲೋಹದ ವಿಗ್ರಹಕ್ಕೆ ತನಿ ಎರೆಯುವುದು. 3ನೇ ದಿನ ಜೇಡರ ಮಣ್ಣಿನಿಂದ ನಾಗಪ್ರತಿಮೆ ಮಾಡಿ ಮನೆಯಲ್ಲಿರುವ ಪುರುಷರಿಂದ ಸಹಿತವಾಗಿ ಹಾಲನ್ನು ಹಾಕುವುದು. ಈ ಹಬ್ಬದ ಸಂದರ್ಭದಲ್ಲಿನ ಜೋಕಾಲಿ ಆಟಕ್ಕೆ ವಿಶೇಷ ಮಹತ್ವವಿದೆ. ಇದೇ ಪಂಚಮಿಯಂದು ಗರುಡ ಹಾಗೂ ಆತನ ತಾಯಿ ವಿನತೆಯು ದಾಸ್ಯದಿಂದ ವಿಮುಕ್ತರಾದದ್ದು. ಗರುಡನು ದೇವಲೋಕದಿಂದ ಅಮೃತವನ್ನು ತಂದು ನಾಗಗಳಿಗಾಗಿ ಕೊಟ್ಟು ನಾಗಗಳ ಬಾಯಿಯಿಂದಲೇ ನೀನು ಹಾಗೂ ನಿನ್ನ ತಾಯಿ ವಿನತೆಯು ದಾಸ್ಯದಿಂದ ಮುಕ್ತರಾಗುವಿರಿ ಎಂದು ಹೇಳಿದ ದಿವಸವಿದು. ಗರುಡನು ಸರ್ಪದ್ವೇಷಿಯಲ್ಲ. ದುಷ್ಟಸರ್ಪಗಳನ್ನು ಮಾತ್ರ ಕೊಲ್ಲುವನು. ಒಳ್ಳೆಯ ಸರ್ಪಗಳನ್ನು ಭೂಷಣಗಳಾಗಿ ಧರಿಸುವನು.

ಫಣೀಂದ್ರ ನಿಕರೈಃ ಕೃಪ್ತಾಂಗ ಭೂಷಣಂ ಪ್ರಭುಂ

ಶೇಷ ದೇವರಿಗಂತೂ ಗರುಡನೆಂದರೆ ಅತ್ಯಂತ ಪ್ರೀತಿ. ಹೀಗಾಗಿ ಒಳ್ಳೆಯ ಸರ್ಪಗಳಿಗೂ ಹಾಗೂ ಗರುಡನಿಗೂ ಸೋದರವಾತ್ಸಲ್ಯವಿದ್ದು ನಾಗಗಳ ಪಂಚಮೀ ಗರುಡ ಪಂಚಮಿಯೂ ಹೌದು.

ಶ್ರಾವಣ ಶುಕ್ರವಾರ ಸಂಪತ್​ಲಕ್ಷ್ಮೀ ವ್ರತ: ಸಂಪತ್​ಲಕ್ಷ್ಮೀ ವ್ರತವನ್ನು ಮಾಸ ಮಹಾಲಕ್ಷ್ಮೀ ವ್ರತವೆಂದೂ ಕರೆಯುವರು. ಈ ವ್ರತದ ವೈಶಿಷ್ಟ್ಯೆಂದರೆ ಶ್ರಾವಣದ ಮೊದಲ ಶುಕ್ರವಾರದಲ್ಲಿ ಕಲಶದಲ್ಲಿ ಲಕ್ಷ್ಮೀ ನಾರಾಯಣರನ್ನು ಪ್ರತಿಷ್ಠಾಪಿಸಿ ಎಲ್ಲ ಶುಕ್ರವಾರಗಳಲ್ಲಿ ಪೂಜಿಸುವುದು. ಇದರಿಂದ ಅಖಂಡ ಶ್ರೀ ಲಕ್ಷ್ಮೀಕಟಾಕ್ಷ ಕೀರ್ತಿ, ಗೌರವ, ಧನಪ್ರಾಪ್ತಿ ಮೊದಲಾದ ಸೌಭಾಗ್ಯಗಳು ಲಭಿಸುವವು. ಈ ವ್ರತವನ್ನು ಶ್ರಾವಣ ಮಾಸದ ನಾಲ್ಕೂ ಶುಕ್ರವಾರಗಳಲ್ಲಿ ಆಚರಿಸಲಾಗುವುದು.

ಶನೈಶ್ಚರ ತ್ರಯವ್ರತ ಶ್ರಾವಣ ಶನಿವಾರ: ಶ್ರಾವಣ ಮಾಸದ (ಸಿಂಹಮಾಸದ) ಶನಿವಾರಗಳಲ್ಲಂತೂ ತಿರುಪತಿ-ತಿರುಮಲಗಿರಿವಾಸ ಶ್ರೀನಿವಾಸನಿಗೆ ಬಹಳ ವಿಶೇಷ. ಅಂದೇ ಶನೈಶ್ಚರ ಪೂಜೆಯನ್ನು ಮಾಡಬೇಕು. ಇದರಿಂದ ಪಂಚಮ ಶನಿ, ಅಷ್ಟಮ ಶನಿ, ಏಳೂವರೆ ಶನಿಕಾಟವಿರುವುದಿಲ್ಲ. ಶನಿ ಮಾತ್ರವಲ್ಲದೇ ನೃಸಿಂಹ ಹಾಗೂ ಹನುಮನ ಪೂಜೆಯ ವಿಹಿತವಾಗಿದೆ.

ಶ್ರಾವಣೇ ಮಾಸ ದೇವಾನಾಂ ತ್ರಯಾಣಾಂ ಪೂಜನಂ ಶನೌ|

ನೃಸಿಂಹಶ್ಚ ಶನೇಶ್ಚವ ಅಂಜನೀನಂದನಸ್ಯ ಚ||

ಸಿರಿಯಾಳ ಷಷ್ಟಿ: ಕನ್ಯೆಯರು ಈ ದಿನದಂದು ಮೊಸರನ್ನ ದಾನ ಮಾಡುವುದರಿಂದ ಸಕಾಲದಲ್ಲಿ ವಿವಾಹಾದಿ ಸಕಲ ಕಾರ್ಯಗಳು ನೆರವೇರುವುದು. ಇದರಿಂದ ಉತ್ತಮ ಪತಿ ಲಭಿಸುತ್ತಾನೆ ಹಾಗೂ ಕನ್ಯೆಯರ ಜೀವನ ಹಸನಾಗಿರುತ್ತದೆ. ಈ ದಿನ ಸಂಜೆ ಸ್ಕಂದನ ದರ್ಶನ ಹಾಗೂ ಕಥಾಶ್ರವಣದಿಂದ ಉತ್ತಮ ಫಲ.

·ಉರ್ತÕನೆ ಹಾಗೂ ಉಪಾಕರ್ಮ: ಈ ಬಾರಿ ನೂಲಹುಣ್ಣಿಮೆಯಂದು ಗ್ರಹಣ ಇರುವುದರಿಂದ ನಾಗರ ಪಂಚಮಿ ದಿನದಂದೇ ಉರ್ತÕನ ಉಪಾಕರ್ಮ ಆಚರಿಸಬೇಕು. ಗುರುಕುಲದ ದಿನಗಳಲ್ಲಿ ವೇದ ಶಾಸ್ತ್ರ ಮೊದಲಾದ ಎಲ್ಲ ವಿದ್ಯಾಭ್ಯಾಸವನ್ನು ಋಷಿಮುನಿಗಳಿಗೆ ಒಪ್ಪಿಸಿ ಹೊಸ ವಿದ್ಯಾಭ್ಯಾಸ ಪ್ರಾರಂಭಿಸುವುದಕ್ಕೆ ಉರ್ತÕನ ಹಾಗೂ ಉಪಾಕರ್ಮವೆಂದು ಹೆಸರು. ಇದರಿಂದ ಉತ್ತಮವಾದ ಉನ್ನತ ವ್ಯಾಸಂಗ ಮೊದಲಾದ ಸಕಲ ಸೌಭಾಗ್ಯಗಳು ಲಭಿಸುತ್ತವೆ.

ಹಯಗ್ರೀವ ಜಯಂತೀ- ಶ್ರಾವಣ ಪೂರ್ಣಿಮಾ: ಶ್ರಾವಣ ಹುಣ್ಣಿಮೆಯಂದೇ ಹಯಗ್ರೀವ-ದೇವನ ಆವಿರ್ಭಾವ, ಬಾಯಿಯಿಂದಲೂ, ಮೂಗಿನಿಂದಲೂ ವೇದ-ವಿದ್ಯೆಗಳನ್ನು ಹೊರಹಾಕಿದ ವೇದಗಳ ದೇವ ಹಯಗ್ರೀವ. ವಿದ್ಯಾಭಿಮಾನಿ ದೇವತೆಗಳಾದ ಸರಸ್ವತಿ-ಭಾರತೀ-ಶಾರದಾ ದೇವಿಯರಿಗೆ ವಿದ್ಯೆ ನೀಡಿದ ಮಹಾವಿಷ್ಣುವಿನ ರೂಪವೇ ಹಯಗ್ರೀವ ರೂಪ.

ರಕ್ಷಾಬಂಧನ: ಇಂದ್ರನ ತಂಗಿಯಾದ ಇಂದ್ರಾಣಿಯು ಇಂದ್ರನ ಸೌಖ್ಯಕ್ಕಾಗಿ ರಕ್ಷೆ ಕಟ್ಟಿದ ಪ್ರತೀತಿ ರಕ್ಷಾಬಂಧನ ಆಚರಣೆಯ ಹಿಂದಿದೆ. ಕೃಷ್ಣನ ತಂಗಿಯಾದ ಸುಭದ್ರೆಯು ಕೃಷ್ಣನಿಗೆ ರಕ್ಷಾಬಂಧನ ಕಟ್ಟಿದ ದಿನವೂ ಇದಾಗಿದೆ. ಇದು ಅಣ್ಣ-ತಂಗಿ, ಅಕ್ಕ-ತಮ್ಮ ಸಂಬಂಧವನ್ನು ಪುನರುಜ್ಜೀವನಗೊಳಿಸುವ ದಿನ.

ಖಂಡಗ್ರಾಸ ಚಂದ್ರಗ್ರಹಣ: ಹೇಮಲಂಬಿ ಸಂವತ್ಸರದ ಶ್ರಾವಣ ಶುಕ್ಲ ಪೌರ್ಣಿಮಿಯ ಸೋಮವಾರ (ಆಗಸ್ಟ್ 7ರಂದು) ಶ್ರವಣಾ ನಕ್ಷತ್ರ ಮಕರ ರಾಶಿಯಲ್ಲಿ ಖಂಡಗ್ರಾಸ ಚಂದ್ರಗ್ರಹಣವಾಗಲಿದೆ. ಗ್ರಹಣ ಸ್ಪರ್ಶ- ರಾತ್ರಿ 10 ಗಂಟೆ 53 ನಿಮಿಷ. ಗ್ರಹಣ ಮಧ್ಯ- ರಾತ್ರಿ 11 ಗಂಟೆ 50 ನಿಮಿಷ. ಗ್ರಹಣ ಮೋಕ್ಷ- ರಾತ್ರಿ 12 ಗಂಟೆ 48 ನಿಮಿಷ.

ರಾಶಿಗಳಿಗೆ ಅನುಸಾರವಾಗಿ ಗ್ರಹಣಫಲ ಹೀಗಿದೆ:

ಶುಭಫಲ – ಮೇಷ, ಸಿಂಹ, ವೃಶ್ಚಿಕ, ಮೀನ

ಮಿಶ್ರಫಲ – ವೃಷಭ, ಕರ್ಕಾಟಕ, ಕನ್ಯಾ, ಧನು

ಅಶುಭ – ತುಲಾ, ಮಿಥುನ, ಮಕರ, ಕುಂಭ

ಗ್ರಹಣದೋಷ ಹೊಂದಿರುವವರು ಚಂದ್ರಬಿಂಬ ಮತ್ತು ಅಕ್ಕಿಯನ್ನು ದಾನಮಾಡಬೇಕು.

ಈ ದಿನ ಮಧ್ಯಾಹ್ನ 1 ಗಂಟೆ 52 ನಿಮಿಷದವರೆಗೆ ಭೋಜನಕ್ಕೆ ಅವಕಾಶವಿದೆ.

ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನವು ಲಕ್ಷ ಸ್ನಾನಗಳ ಫಲವನ್ನೂ, ಗ್ರಹಣ ಮೋಕ್ಷ ನಂತರ ಮಾಡುವ ಸ್ನಾನವು ಅನಂತ ಸ್ನಾನಗಳ ಫಲವನ್ನೂ ಕೊಡುತ್ತವೆ. ಗ್ರಹಣ ಮಧ್ಯದಲ್ಲಿ ಮಾಡುವ ಹೋಮವು ಕೋಟಿ ಹೋಮಗಳ ಫಲವನ್ನು ಕೊಡುತ್ತದೆ.

ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆ: ಶ್ರಾವಣ ಮಾಸದ ಕೃಷ್ಣಪಕ್ಷ ಪ್ರತಿಪದ, ದ್ವಿತೀಯಾ, ತೃತೀಯಾ ಅಂದರೆ, ಆಗಸ್ಟ್ 8, 9, 10ರಂದು ಮಂತ್ರಾಲಯ ಶ್ರೀರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ. ಶ್ರೀ ರಾಘವೇಂದ್ರ ಗುರುಗಳು ಸಶರೀರರಾಗಿ ವೃಂದಾವನ ಪ್ರವೇಶ ಮಾಡಿದ ಪುಣ್ಯದಿನದ ಆಚರಣೆಯೇ ಆರಾಧನಾ ಮಹೋತ್ಸವ.

ಶ್ರೀಕೃಷ್ಣ ಜನ್ಮಾಷ್ಟಮಿ: ಶ್ರೀ ಕೃಷ್ಣಾವತಾರವಾದ ಪುಣ್ಯದಿನವೇ ಶ್ರೀಕೃಷ್ಣ ಜನ್ಮಾಷ್ಟಮಿ. ಈ ವರ್ಷ ಆ. 14 ಸೋಮವಾರ ಈ ಹಬ್ಬದ ಆಚರಣೆ.

ವರಮಹಾಲಕ್ಷ್ಮಿ ವ್ರತ: ಶ್ರಾವಣದ ಮಾಸದ 2ನೇ ಶುಕ್ರವಾರ (ಆ.4) ವರಮಹಾಲಕ್ಷ್ಮಿ ವ್ರತ ಆಚರಿಸಲಾಗುತ್ತದೆ. ಕಲಶವನ್ನು ಸ್ಥಾಪಿಸಿ ಆದಿಲಕ್ಷ್ಮಿ, ವಿಜಯಲಕ್ಷ್ಮಿ, ವೀರಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ಧಾನ್ಯಲಕ್ಷ್ಮಿ, ಐಶ್ವರ್ಯಲಕ್ಷ್ಮಿ, ಧನಲಕ್ಷ್ಮಿ ಮೊದಲಾದ ರೂಪಗಳನ್ನು ಧ್ಯಾನಿಸಿ ವರಪ್ರದಳಾದ, ನಾರಾಯಣನಿಂದೊಡಗೂಡಿದ ಲಕ್ಷ್ಮಿಯನ್ನು ಪೂಜಿಸಿ, ಗಂಗಾ ಯಮುನಾ ಸಹಿತ ಸಕಲ ತೀರ್ಥಗಳಿಗೆ ವಂದಿಸಿ, ತುಳಸಿ ಪೂಜಿಸಿ, ನದಿತೀರ ಅಥವಾ ಮನೆಯಲ್ಲಿ ವರಮಹಾಲಕ್ಷ್ಮಿ ವ್ರತಕಥೆಯನ್ನು ಕೇಳಬೇಕು.

(ಲೇಖಕರು ಅಧ್ಯಾತ್ಮ ಚಿಂತಕರು ಹಾಗೂ ಜ್ಯೋತಿಷಿಗಳು)

 

Leave a Reply

Your email address will not be published. Required fields are marked *

Back To Top