ಶ್ರಾವಣಕ್ಕೆ ಸಿಹಿತಿನಿಸು

ಕೇಸರಿ ದೂಧ್ ಪೇಡ

ಬೇಕಾಗುವ ಸಾಮಗ್ರಿ: ಹಾಲಿನ ಪುಡಿ ಒಂದೂವರೆ ಕಪ್, ತುಪ್ಪ ಎರಡು ಟೀ ಚಮಚ, ಮಿಲ್ಕ್ ಮೇಡ್ ಒಂದು ಟಿನ್, ಏಲಕ್ಕಿ ಪುಡಿ ಒಂದು ಟೀ ಚಮಚ, ಬಿಸಿ ಹಾಲು ಸ್ವಲ್ಪ/ ಕೇಸರಿ ದಳವನ್ನು ನೆನಸಿಕೊಳ್ಳಲು. ಕೇಸರಿ ದಳ ಒಂದು ಟೀ ಚಮಚ, ಒಣ ಪಿಸ್ತಾ/ಗೋಡಂಬಿ/ಬಾದಾಮಿ ಅಲಂಕರಿಸಲು.

ಮಾಡುವ ವಿಧಾನ: ಮೊದಲು ಕೇಸರಿಯನ್ನು ಹಾಲಿನಲ್ಲಿ ನೆನಸಿಡಿ. ಒಂದು ಬಾಣಲೆಯಲ್ಲಿ ಒಂದು ಟೀ ಚಮಚ ತುಪ್ಪ ಹಾಕಿ. ಅದಕ್ಕೆ ಮಿಲ್ಕ್ ಮೇಡ್, ಹಾಲಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ತಳ ಹತ್ತದಂತೆ ಕೈಯಾಡಿಸುತ್ತ ಇರಿ. ಗಟ್ಟಿಯಾಗುತ್ತ ಬರುವಾಗ ಕೇಸರಿಮಿಶ್ರಿತ ಹಾಲನ್ನು ಹಾಕಿ. ಏಲಕ್ಕಿ ಪುಡಿ ಮತ್ತು ಒಂದು ಟೀ ಚಮಚ ತುಪ್ಪ ಹಾಕಿ ಚೆನ್ನಾಗಿ ಕೈಯಾಡಿಸಿ. ಮಿಶ್ರಣ ಬಾಣಲೆ ಬಿಟ್ಟು ಬರುವಾಗ ಒಲೆಯಿಂದ ಕೆಳಗಿಳಿಸಿ. ಆರಿದ ನಂತರ ಕೈಗೆ ತುಪ್ಪ ಮುಟ್ಟಿಸಿಕೊಂಡು ಪೇಡಗಳನ್ನು ತಯಾರಿಸಿ. ಗೋಡಂಬಿ/ ಬಾದಾಮಿ / ಪಿಸ್ತಾದಿಂದ ಅಲಂಕರಿಸಿ.

ಮಾಲ್ಪುವಾ

ಬೇಕಾಗುವ ಸಾಮಗ್ರಿ: ಒಂದು ಲೀಟರ್ ಹಾಲು, ಹಾಲಿನ ಪುಡಿ ಹಾಗೂ ಮೈದಾ ಹಿಟ್ಟು ಒಂದು ಕಪ್, ಎರಡು ಕಪ್ ಸಕ್ಕರೆ, ಒಂದು ಕಪ್ ತುಪ್ಪ, ಏಲಕ್ಕಿ ಪೌಡರ್ ಒಂದು ಟೀ ಚಮಚ, ಕೇಸರಿ ದಳಗಳು ಸ್ವಲ್ಪ, ಪಿಸ್ತಾ ಸ್ವಲ್ಪ.

ಮಾಡುವ ವಿಧಾನ: ಬಾಣಲೆಯಲ್ಲಿ ಸಕ್ಕರೆ ಹಾಕಿ ಒಂದು ಕಪ್ ನೀರನ್ನು ಹಾಕಿ ಒಂದೆಳೆ ಪಾಕ ತಯಾರಿಸಿಕೊಳ್ಳಿ. ಈ ಪಾಕಕ್ಕೆ ಏಲಕ್ಕಿ ಪುಡಿ, ಕೇಸರಿ ದಳಗಳನ್ನು ಹಾಕಿ. ನಂತರ ಇನ್ನೊಂದು ಪಾತ್ರೆಯಲ್ಲಿ ಒಂದು ಲೀಟರ್ ಹಾಲು ಹಾಕಿ ಅರ್ಧ ಲೀಟರ್ ಆಗುವಷ್ಟು ಕುದಿಸಿ. ಹಾಲು ಆರಿದ ಬಳಿಕ ಮೊದಲು ಹಾಲಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೈದಾ ಹಿಟ್ಟನ್ನು ಹಾಕಿ ಮಸಾಲೆ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. 15 ನಿಮಿಷಗಳ ನಂತರ ಒಂದು ಬಾಣಲೆಗೆ ಒಂದು ಕಪ್ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಒಂದು ಸೌಟಿನಲ್ಲಿ ಹಿಟ್ಟನ್ನು ಬಿಸಿಯಾದ ತುಪ್ಪಕ್ಕೆ ಸ್ವಲ್ಪಸ್ವಲ್ಪವೇ ದೋಸೆ ಹಾಕುವ ಹಾಗೆ ಒಂದೇ ಬಾರಿ ಹಾಕಿ. ಹಾಕಿದ ಮೇಲೆ ಒತ್ತಬೇಡಿ. ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ಬೆಂದಾಗ ಅದರ ಬಣ್ಣ ಬದಲಾವಣೆ ಆಗುತ್ತದೆ. ಆಗ ಇನ್ನೊಂದು ಬದಿಯನ್ನು ಕೆಂಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ. ಎರಡೂ ಬದಿಯೂ ಕೆಂಬಣ್ಣ ಬರಲಿ. ನಂತರ ಬಾಣಲೆಯಿಂದ ತೆಗೆದು ಆರಿದ ಸಕ್ಕರೆಗೆ ಹಾಕಿ ಎರಡು ನಿಮಿಷಗಳ ಕಾಲ ಬಿಟ್ಟು ತೆಗೆಯಿರಿ. ಈಗ ರುಚಿಯಾದ ಮಾಲ್ಪುವಾ ತಿನ್ನಲು ರಡಿ. ಇದನ್ನು ತವಾದಲ್ಲೂ ಮಾಡಬಹುದು. ಉರಿ ಯಾವಾಗಲೂ ಚಿಕ್ಕದಾಗಿರಲಿ. ಎರಡು ಟೀ ಚಮಚ ತುಪ್ಪ ಹಾಕಿ ಮೇಲೆ ಹೇಳಿದ ರೀತಿಯಲ್ಲಿ ಹಿಟ್ಟನ್ನು ಹಾಕಿ. ಎರಡೂ ಬದಿಯನ್ನು ಕೆಂಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ. ನಂತರ ಸಕ್ಕರೆ ಪಾಕಕ್ಕೆ ಹಾಕಿ. ಕೊನೆಯಲ್ಲಿ ಪಿಸ್ತಾವನ್ನು ಚಿಕ್ಕದಾಗಿ ಕತ್ತರಿಸಿ ಅಲಂಕಾರ ಮಾಡಿ.

ಅನಾನಸ್ ಕೊಬ್ಬರಿ ಮಿಠಾಯಿ

ಬೇಕಾಗುವ ಸಾಮಗ್ರಿ: ಮೂರು ಕಪ್ ತೆಂಗಿನಕಾಯಿ ತುರಿ (ದೊಡ್ಡ ತೆಂಗಿನಕಾಯಿ), ಎರಡು ಕಪ್ ಸಕ್ಕರೆ, ಒಂದು ಅನಾನಸ್(ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಎರಡು ಕಪ್ ಅನಾನಸ್ ರಸ), ಏಲಕ್ಕಿ ಪುಡಿ ಒಂದು ಟೀ ಚಮಚ, ತುಪ್ಪ ನಾಲ್ಕು ಟೀ ಚಮಚ.

ಮಾಡುವ ವಿಧಾನ: ಒಂದು ದಪ್ಪ ತಳದ ಪಾತ್ರೆಯಲ್ಲಿ ಅನಾನಸ್ ಹಣ್ಣಿನ ರಸ, ಸಕ್ಕರೆ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಕೈಯಾಡಿಸುತ್ತ ಇರಿ. (ತೆಂಗಿನಕಾಯಿ ತುರಿಯನ್ನು ಬೇಕಿದ್ದರೆ ಮಿಕ್ಸಿ ಜಾರಿಗೆ ಹಾಕಿ ಒಂದು ಸುತ್ತು ತಿರುಗಿಸಿ). ಏಲಕ್ಕಿ ಪುಡಿ, ತುಪ್ಪ ಹಾಕಿ, ಬಾಣಲೆಗೆ ಅಂಟಿಕೊಳ್ಳುವುದಿಲ್ಲ. ಮಿಶ್ರಣ ಬಾಣಲೆಯನ್ನು ಬಿಟ್ಟು ಬರುವ ಸಮಯದಲ್ಲಿ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟು ಮಾಡಿ. ಐದು ನಿಮಿಷಗಳ ನಂತರ ಚೌಕಾಕಾರವಾಗಿ ಕತ್ತರಿಸಿ.

ಎಳನೀರು ಪಾಯಸ

ಬೇಕಾಗುವ ಸಾಮಗ್ರಿ: ಒಂದು ಲೀಟರ್ ಹಾಲು, ಒಂದು ಕಪ್ ದಪ್ಪನೆಯ ಎಳೆನೀರಿನ ಗಂಜಿ (ತಿರುಳು), ಒಂದು ಕಪ್ ಎಳನೀರು. ಒಂದು ಕಪ್ ತುರಿದ ತೆಂಗಿನಕಾಯಿ, ಒಂದು ಕಪ್ ಸಕ್ಕರೆ (ಸಿಹಿ ನೋಡಿ ಹಾಕಿ), ಕಾಲು ಚಮಚ ಏಲಕ್ಕಿ ಪುಡಿ, ಚಿಟಿಕೆ ಜಾಯಿಕಾಯಿ ಪುಡಿ, ತುಪ್ಪ ಒಂದು ಟೀ ಚಮಚ, ಗೋಡಂಬಿ ಸ್ವಲ್ಪ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಹಾಲನ್ನು ಹಾಕಿ ಒಂದು ಲೀಟರ್ ಹಾಲು ಅರ್ಧ ಆಗುವವರೆಗೆ ಕುದಿಸಿ. ನಂತರ ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತರ ಏಲಕ್ಕಿ ಪುಡಿ ಮತ್ತು ಜಾಯಿಕಾಯಿ ಹಾಕಿ. ಒಲೆಯನ್ನು ಆರಿಸಿ. ಪೂರ್ತಿ ತಣ್ಣಗೆ ಆಗಲಿ. ಮಿಕ್ಸಿಯಲ್ಲಿ ಮುಕ್ಕಾಲು ಭಾಗ ಎಳನೀರಿನ ಗಂಜಿ ಮತ್ತು ಅರ್ಧ ಎಳನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದು ಒಂದು ಕಪ್ ಇರಲಿ. ತೆಂಗಿನಕಾಯಿ ತುರಿ ಮತ್ತು ಉಳಿದ ಅರ್ಧ ಕಪ್ ಎಳನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಜರಡಿಯಲ್ಲಿ ಹಿಂಡಿ ಹಾಲನ್ನು ತೆಗೆದುಕೊಳ್ಳಿ. ಇದು ಒಂದು ಕಪ್ ಬೇಕಾಗುತ್ತದೆ. ಈ ಮೊದಲು, ಕುದಿಸಿ ಆರಿಸಿದ ಹಾಲಿಗೆ ರುಬ್ಬಿಕೊಂಡ ಎಳನೀರಿನ ಗಂಜಿ ಮತ್ತು ಕಾಯಿಹಾಲು ಹಾಕಿ ಮಿಶ್ರಣ ಮಾಡಿ. ಉಳಿದ ಕಾಲು ಭಾಗ ಗಂಜಿಯನ್ನು ಚಿಕ್ಕದಾಗಿ ಕತ್ತರಿಸಿ ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಾಣಲೆಯಲ್ಲಿ ಒಂದು ಟೀ ಚಮಚ ತುಪ್ಪ ಬಿಸಿ ಮಾಡಿ ಗೋಡಂಬಿ ಹುರಿದು ಹಾಕಿ. ರುಚಿಯಾದ ಎಳನೀರಿನ ಪಾಯಸ ರೆಡಿ.

ಹಾಲಿನ ಪುಡಿಯ ಗುಲಾಬ್ ಜಾಮೂನ್

ಬೇಕಾಗುವ ಸಾಮಗ್ರಿ: ಹಾಲಿನ ಪುಡಿ 15 ಟೀ ಚಮಚ, ಮೈದಾ ಆರು ಟೀ ಚಮಚ, ಅಡುಗೆ ಸೋಡ ಚಿಟಿಕೆ, ಮೊಸರು ಒಂದು ಟೀ ಚಮಚ, ಹಾಲು ಸ್ವಲ್ಪ, ಕರಗಿದ ತುಪ್ಪ ಒಂದೂವರೆ ಟೀ ಚಮಚ, ಎಣ್ಣೆ ಅಥವಾ ತುಪ್ಪ ಕರಿಯಲು. ಮೇಲಿನ ಎಲ್ಲವನ್ನೂ ನಿಮಗೆ ಬೇಕಾದ ಅಳತೆಗೆ ಜಾಸ್ತಿ ಮಾಡಿಕೊಳ್ಳಬಹುದು.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಮೈದಾ, ಹಾಲಿನ ಪುಡಿ, ಸೋಡಾ ಬೆರೆಸಿ. ಈ ಮಿಶ್ರಣವನ್ನು ಗಂಟುಗಳಿಲ್ಲದಂತೆ ಮೂರು ಸಲ ಜರಡಿ ಹಿಡಿದುಕೊಳ್ಳಿ. ಜರಡಿ ಹಿಡಿದ ಮಿಶ್ರಣವನ್ನು ಪಾತ್ರೆಯಲ್ಲಿ ಹಾಕಿ, ಅದಕ್ಕೆ ತುಪ್ಪ ಮತ್ತು ಮೊಸರು ಸೇರಿಸಿ ಕೈ ಬೆರಳುಗಳಿಂದ ಚೆನ್ನಾಗಿ ಕಲಸಿ. ಹಾಲನ್ನು ಮಿಶ್ರಣಕ್ಕೆ ಸ್ವಲ್ಪಸ್ವಲ್ಪವೇ ಹಾಕಿ ಕಲಸಿಕೊಳ್ಳಿ. ಹಿಟ್ಟು ಮೃದುವಾಗಿರಲಿ. ನಾದಬಾರದು. ನಂತರ ಐದು ನಿಮಿಷಗಳ ಕಾಲ ಮುಚ್ಚಿಡಿ. ಬಳಿಕ, ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿಕೊಳ್ಳಿ. ಸಣ್ಣ ಉರಿ ಇರಲಿ. ಬಿಸಿಯಾದ ಎಣ್ಣೆಗೆ ಉಂಡೆಗಳನ್ನು ಹಾಕಿ ಕೆಂಬಣ್ಣ ಬರುವರೆಗೆ ಬೇಯಿಸಿ. ಸಕ್ಕರೆ ಮತ್ತು ನೀರನ್ನು ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಿ. ಈ ಪಾಕಕ್ಕೆ ಕೇಸರಿದಳ ಮತ್ತು ರೋಸ್ ಎಸೆನ್ಸ್ ಹಾಕಿ ಬೆರೆಸಿ. ಕರಿದ ಜಾಮೂನ್​ಗಳನ್ನು ಬಿಸಿಪಾಕದಲ್ಲಿ ಹಾಕಿ. ಪಾಕದಲ್ಲಿ ಚನ್ನಾಗಿ ನೆಂದ ನಂತರ ಸವಿಯಿರಿ. ಪಾಕ ಹೀರಿಕೊಳ್ಳಲು ಒಂದು ಗಂಟೆ ಬೇಕಾಗುತ್ತದೆ. ಹೀಗೆ ಮನೆಯಲ್ಲೇ ಜಾಮೂನ್ ತಯಾರಿಸಿ ಸವಿಯಿರಿ.

|ವೇದಾವತಿ ಎಚ್. ಎಸ್.

Leave a Reply

Your email address will not be published. Required fields are marked *