ಶ್ರಮಕ್ಕೆ ತಕ್ಕ ಪ್ರತಿಫಲವೇ ಸಾಮಾಜಿಕ ನ್ಯಾಯ

ಹೊನ್ನಾವರ: ಶ್ರಮಕ್ಕೆ ಸರಿಯಾದ ಪ್ರತಿಫಲ ನೀಡುವುದೇ ಸಾಮಾಜಿಕ ನ್ಯಾಯ. ಸಂವಿಧಾನವನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ನಮಗೆ ಸಿಗುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದರು.

ತಾಲೂಕಿನ ಕೆರೆಕೋಣದಲ್ಲಿ ಡಾ.ಆರ್.ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಭಾನುವಾರ ನಡೆದ ‘ಸಹಯಾನ ಸಾಹಿತ್ಯೋತ್ಸವ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತವು ಜಗತ್ತಿನಲ್ಲಿ ಟಾಪ್-10 ದೇಶಗಳಲ್ಲಿ ಒಂದಾಗಿದೆ. ಇದಕ್ಕೆ ನಮ್ಮ ಸಂವಿಧಾನ ಕಾರಣವಾಗಿದೆ. ದೇಶದಲ್ಲಿ ಹಸಿವಿದೆ. ಅನ್ನಕ್ಕಾಗಿ ಆಂದೋಲನ ಮಾಡುವ ಅನಿವಾರ್ಯತೆ ಬರಬಹುದು. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಬಸಣ್ಣ ಪಟ್ಟೇಕರ್ ಮಾತನಾಡಿ, ಸಮಾನ ವಿಚಾರವಾದಿಗಳು ಒಂದೇ ವೇದಿಕೆಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಹೊಸತಲೆಮಾರಿಗೆ ನೀಡುವ ಅಗತ್ಯವಿದೆ ಎಂದರು.

ಡಾ. ಆರ್.ವಿ. ಭಂಡಾರಿ ಅವರ ‘ಕಯ್ಯೂರಿನ ಮಕ್ಕಳು’ ಪುಸ್ತಕ ಬಿಡುಗಡೆಗೊಳಿಸಿದ ಹಿರಿಯ ಕವಯತ್ರಿ ಡಾ. ಕೆ. ಷರೀಪಾ ಮಾತನಾಡಿ, ಕೇರಳದ ರೈತ ಹೋರಾಟದ ಕಥಾವಸ್ತು ಒಳಗೊಂಡ ಕಯ್ಯೂರಿನ ಮಕ್ಕಳು ಕೃತಿಯಲ್ಲಿ ಜಾಗೃತ ಮನಸ್ಸಿನೊಂದಿಗೆ ದೇಶಪ್ರೇಮ ಸೇರಿದೆ ಎಂದರು.

ಹಿರಿಯ ಸಾಹಿತಿ ವಿಷ್ಣು ನಾಯ್ಕ, ಸಾಹಿತಿ ಡಾ. ಎಂ.ಜಿ. ಹೆಗಡೆ ಮಾತನಾಡಿದರು. ಭವ್ಯಾ ಹೆಗಡೆ, ಸಹಯಾನದ ಕಾರ್ಯದರ್ಶಿ ವಿಠ್ಠಲ ಭಂಡಾರಿ, ದೀಪಾ ಹಿರೇಗುತ್ತಿ ಹಾಗೂ ಸಚಿನ್ ನಿರ್ವಹಿಸಿದರು. ನಂತರ ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.