ಶ್ರದ್ಧೆಯೇ ಭಗವದ್ಭಕ್ತಿಗೆ ರಾಜಮಾರ್ಗ

ನಾವು ಇತ್ತೀಚಿನ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯವೆಂದರೆ ಪ್ರತಿನಿತ್ಯ ಸಹಸ್ರಾರು ಮಂದಿ ದೇವಸ್ಥಾನಗಳಿಗೆ ಭೇಟಿ ನೀಡುವುದು, ಅಲ್ಲಿಯ ಪೂಜಾಕೈಂಕರ್ಯಗಳಲ್ಲಿ ನಿರತರಾಗಿರುವುದು ಇತ್ಯಾದಿ. ಒಂದುವೇಳೆ ಈ ಮನುಜರೆಲ್ಲ ನೈಜ ಶ್ರದ್ಧಾಭಕ್ತಿಗಳಿಂದೇನಾದರೂ ದೇವಾಲಯಗಳಲ್ಲಿ ಪೂಜೆ, ಕೈಂಕರ್ಯ, ಉತ್ಸವಾದಿಗಳನ್ನು ಅತ್ಯಂತ ಶ್ರದ್ಧೆಯಿಂದ, ಪೂರ್ಣ ಮನಸ್ಸಿನಿಂದ ನಡೆಸಿದ್ದೇ ಆದಲ್ಲಿ ಈ ಪ್ರಪಂಚ ರಾಮರಾಜ್ಯವಾಗುತ್ತಿತ್ತು. ಬದಲಾಗಿ ನಾವು ಕಾಣುತ್ತಿರುವುದೇನೆಂದರೆ ಈ ತೆರನಾದ ಡಾಂಭಿಕ ವರ್ಗದವರೇ ಹೆಚ್ಚಾಗಿರುವ ಈ ಸಮಾಜದಲ್ಲಿ ಎಲ್ಲಿಯೂ ಶಾಂತಿ, ನೆಮ್ಮದಿ, ಮನೋಲ್ಲಾಸ ಇತ್ಯಾದಿ ಸಕಾರಾತ್ಮಕ ಭಾವನೆಗಳು ಕಾಣಬರುತ್ತಿಲ್ಲ.

ಈ ಎಲ್ಲ ನಕಾರಾತ್ಮಕ ಸ್ಥಿತಿಗೆ ಕಾರಣ ನಿಜವಾದ ಶ್ರದ್ಧೆ, ನಂಬಿಕೆಯ ಕೊರತೆ. ತಾವು ನುಡಿಯುತ್ತಿರುವ, ಉಪದೇಶಿಸುತ್ತಿರುವ ವಿಚಾರಗಳಲ್ಲಿ ಸ್ವಯಂ ಪೂರ್ಣ ಅರಿತವರಾಗಿ, ನಂಬಿಕೆಯುಳ್ಳವರಾಗಿ, ಸ್ವಾನುಭವಗಳಿಂದ ಉಪದೇಶಾದಿಗಳನ್ನು ನೀಡುತ್ತಿರುವವರ ಸಂಖ್ಯೆ ದಿನೇದಿನೆ ಕ್ಷೀಣಿಸುತ್ತಿದೆ. ಯಾರಲ್ಲಿಯೂ ‘ನಂಬಿಕೆ’ ಎಂಬ ಶಬ್ದ ಬಹು ವಿರಳವಾಗಿದೆ. ಈ ತೆರನಾದ ಅಶ್ರದ್ಧೆ, ಅಪನಂಬಿಕೆ, ಅನಿಶ್ಚತತೆಯ ಗೂಡಾಗಿ ಮಾನವ ತಾನು ‘ಆಸ್ತಿಕ’ ಎಂಬ ಬಿರುದಿನಿಂದ, ಅಹಂಕಾರದಿಂದ, ದರ್ಪದಿಂದ ಜೀವಿಸಲು ಪ್ರಯತ್ನಿಸುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಮನುಜಕುಲಕ್ಕೆ ದಾರಿದೀಪವಾಗಿ, ನಿಜರೂಪದ ಗುರುಗಳಾಗಿ, ಪಂಡಿತರಾಗಿ ಮಾರ್ಗದರ್ಶನ ನೀಡುವವರ ಸಂಖ್ಯೆ ಅತ್ಯಂತ ವಿರಳವಾಗಿ ಗೋಚರಿಸುತ್ತಿದೆ. ಈ ಭಯಾನಕ ಪರಿಸ್ಥಿತಿಯಲ್ಲಿ ಅಶ್ರದ್ಧೆ, ಅಂಧಶ್ರದ್ಧೆಗಳಿಂದ ಮುನ್ನಡೆಯುತ್ತಿರುವವರಿಗೆ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಈ ಸರಳ ನಿದರ್ಶನದ ಮೂಲಕ ತಿಳಿಯ ಹೇಳುತ್ತಾರೆ.

ಅದೊಂದು ಗ್ರಾಮ. ಒಬ್ಬ ಪಂಡಿತ ಪ್ರತಿನಿತ್ಯ ತನ್ನ ಮನೆಗೆ ಬಂದವರೆಲ್ಲರಿಗೂ ಭಾಗವತ ಪ್ರವಚನ ನಡೆಸುತ್ತಿದ್ದ. ಪ್ರತಿದಿನ ಮುಂಜಾನೆ ಈ ಭಾಗವತ ಪ್ರವಚನ ನಡೆಯುತ್ತಿತ್ತು. ಆ ಪಂಡಿತನ ಮನೆಗೆ ಪ್ರತಿದಿನ ಮುಂಜಾನೆ ಹಾಲು ನೀಡುತ್ತಿದ್ದ ಒಬ್ಬ ಮುಗ್ಧ ಹುಡುಗಿ ಹತ್ತಿರದ ಗ್ರಾಮದಿಂದ ದೋಣಿಯ ಮೂಲಕ ನದಿಯನ್ನು ದಾಟಿ ಬರುತ್ತಿದ್ದಳು. ಅದೊಂದು ದಿನ ಭಾರೀ ಮಳೆಯ ಕಾರಣ ದೋಣಿಯವ ಈ ಹುಡುಗಿಯನ್ನು ನದಿ ದಾಟಿಸಲು ಅಸಾಧ್ಯ ಎಂದು ತಿಳಿಸಿದಾಗ ಸಹಜವಾಗಿಯೇ ಈ ಹುಡುಗಿ ಸ್ವಲ್ಪ ತಡವಾಗಿ ಹಾಲನ್ನು ತಂದಳು. ಆ ದಿನ ಭಾಗವತ ಪಂಡಿತರು ಈ ಮಗುವಿಗೆ ಹಾಲು ತರಲು ಏಕೆ ತಡವಾಯಿತು ಎಂದು ಗದರಿದಾಗ ಮುಗ್ಧ ಹುಡುಗಿ ಇದ್ದ ವಿಚಾರವನ್ನು ತಿಳಿಸಿದಳು. ಆಗ ಪಂಡಿತರು ಸುಮ್ಮನಿರದೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ತಮ್ಮ ವಿದ್ವತ್ತನ್ನು ಪ್ರದರ್ಶಿಸುತ್ತಾ, ‘ಭಗವಂತನ ನಾಮದಿಂದ ಭವಸಾಗರವನ್ನೇ ದಾಟುತ್ತಾರಂತೆ, ನೀನು ಈ ಸಣ್ಣ ನದಿಯನ್ನು ದಾಟಲಾರೆಯಾ?’ ಎಂದು ಮೂದಲಿಸಿದರು. ಸರಿ! ಮತ್ತೆ ಸ್ವಲ್ಪ ದಿನಗಳು ಉರುಳಿದ ಬಳಿಕ ಅದೇ ರೀತಿಯ ಮಳೆ ಬಂದಾಗ್ಯೂ ಆ ಮುಗ್ಧ ಬಾಲಿಕೆ ಹಾಲನ್ನು ಸರಿಯಾದ ವೇಳೆಗೆ ತರುತ್ತಿದ್ದಳು. ಇದನ್ನು ಗಮನಿಸಿದ ಪಂಡಿತ ಮಹಾಶಯರು ಭಾಗವತದ ಪ್ರವಚನದ ನಂತರ ಈ ಬಾಲಿಕೆಯನ್ನು ಕರೆದು ಸರಿಯಾದ ವೇಳೆಯಲ್ಲಿ ಹಾಲು ತರುತ್ತಿರುವ ವಿಚಾರವನ್ನು ಪ್ರಸ್ತಾಪಿಸಿ, ‘ನೀನು ಹೇಗೆ ಸರಿಯಾದ ಸಮಯಕ್ಕೆ ಬರುತ್ತಿದ್ದೀಯೇ?’ ಎಂದು ಕುತೂಹಲದಿಂದ ವಿಚಾರಿಸಿದಾಗ ಮುಗ್ಧ ಬಾಲಿಕೆ ಹೇಳುತ್ತಾಳೆ. ‘ಗುರುವರ್ಯರೇ! ತಾವೇ ತಿಳಿಸಿದರಲ್ಲ, ಭಗವಂತನ ನಾಮವನ್ನು ಜಪಿಸುತ್ತಾ ಭವಸಾಗರವನ್ನೇ ದಾಟಬಹುದು ಎಂದು. ಹಾಗೆಯೇ ನಾನು ಆ ಭಗವಂತನ ದಿವ್ಯನಾಮವನ್ನೇ ದೃಢ ವಿಶ್ವಾಸ, ಶ್ರದ್ಧೆಯಿಂದ ಜಪಿಸುತ್ತಾ ನದಿಯ ಮೇಲೆ ನಡೆದುಬರುತ್ತಿರುವೆ’ ಎಂದಾಗ ಪಂಡಿತರಿಗೆ ನಂಬಲಾಗಲಿಲ್ಲ. ಹೇಗೆ ನದಿಯನ್ನು ದಾಟುತ್ತಿರುವೆ ತೋರಿಸು ಎಂಬುದಾಗಿ ಕೇಳಿದ ಅವರು ಅವಳನ್ನು ಹಿಂಬಾಲಿಸುತ್ತಾ ನದಿಯ ದಡಕ್ಕೆ ಬಂದರು. ಬಾಲಕಿ ಹರಿನಾಮವನ್ನು ಜಪಿಸುತ್ತಾ ಮುಂದೆ ಮುಂದೆ ತೆರಳುವಾಗ ಪಂಡಿತೋತ್ತಮರು ಹಿಂದೆ ಹಿಂದೆ ಅನುಸರಿಸುತ್ತಾ ತನ್ನ ಜರತಾರಿ ಪಂಚೆ ಎಲ್ಲಿ ನೀರಿನಲ್ಲಿ ನೆನೆಯುತ್ತದೋ ಎಂಬ ಚಿಂತೆಯಿಂದ ಒಂದು ಕೈಯಲ್ಲಿ ಪಂಚೆ ಎತ್ತುತ್ತಾ ಮುಂದೆ ತೆರಳಲು ಪ್ರಯತ್ನಿಸುತ್ತಿದ್ದಾಗ ಮಂಡಿಯವರೆಗೆ ನೀರು ಹರಿಯುತ್ತಿತ್ತು. ಆದರೆ, ಶ್ರದ್ಧಾವಂತ ಬಾಲಕಿ ಆಗಾಗಲೇ ನದಿಯ ಆಚೆಯ ದಡವನ್ನು ಸೇರಿದ್ದಳು.

ಪಂಡಿತರ ದುಃಸ್ಥಿತಿಯನ್ನು ಕಂಡು ಬಾಲಕಿ ಕೂಗಿ ಹೇಳುತ್ತಾಳೆ. ‘ಸ್ವಾಮಿ ಪಂಡಿತರೇ, ಬಾಯಲ್ಲಿ ಹರಿನಾಮ, ಮನದಲ್ಲಿ ಪಂಚೆಯ ಚಿಂತೆ ಎರಡೂ ಒಟ್ಟಿಗೆ ಅಳವಡಿಸಿಕೊಳ್ಳಲಾಗದು. ಸಂಪೂರ್ಣ ಶ್ರದ್ಧೆಯಿಂದ ತಾವೇ ಭಾಗವತ ಪ್ರವಚನದಲ್ಲಿ ತಿಳಿಸಿದಂತೆ ಎರಡೂ ಕೈಯೆತ್ತಿ ಭಗವಂತನಲ್ಲಿ ಶರಣಾಗತಿ ಹೊಂದಿ. ಪೂರ್ಣ ನಂಬಿಕೆ ಹೊಂದಿದ್ದಲ್ಲಿ ಮಾತ್ರ ದಡವನ್ನು ಸೇರಬಹುದು’.

ಶ್ರದ್ಧೆ ಹಾಗೂ ನಂಬಿಕೆಯ ಮೂಲಕ ಎಂತಹ ಸ್ಥಿತಿಯನ್ನೂ ಎದುರಿಸಬಹುದು ಎಂಬುದನ್ನು ಈ ನಿದರ್ಶನ ಸಾಬೀತುಪಡಿಸುತ್ತದೆ. ಪಂಡಿತೋತ್ತಮರು ಕೇವಲ ಪಾಂಡಿತ್ಯ ಪ್ರದರ್ಶನ, ವಾಗ್ಝರಿಯನ್ನು ತೋರ್ಪಡಿಕೆಗೋಸ್ಕರ ಉಪಯೋಗಿಸುತ್ತಿದ್ದರು. ಇದೇ ಅಲ್ಲವೇ ನಾವಿಂದು ಕಾಣುತ್ತಿರುವ ಸನ್ನಿವೇಶ? ಎಲ್ಲೆಡೆ ಕೇವಲ ತೋರ್ಪಡಿಕೆ, ಡಾಂಭಿಕತನದ ಭಕ್ತಿಯನ್ನು ಕಾಣುತ್ತಿದ್ದೇವೆಯೇ ವಿನಾ ಪೂರ್ಣ ಶ್ರದ್ಧೆಯಿಂದ ಭಗವಂತನನ್ನು ಪ್ರಾರ್ಥಿಸುವ ಯತ್ನ ವಿರಳವಾಗುತ್ತಿವೆ.

ಶ್ರೀ ರಾಮಕೃಷ್ಣರ ಮತ್ತೊಂದು ಅಮೂಲ್ಯ ಉಪದೇಶವೆಂದರೆ – ‘ಮಾತು ಮತ್ತು ಮನಸ್ಸು, ಹೃದಯ’ ಒಂದಾಗಿರಬೇಕು. ಬಂಗಾಳಿ ಭಾಷೆಯಲ್ಲಿ ‘ಮನ್-ಮುಖ್ ಏಕ್ ಕರೋ’ ಎಂಬಂತೆ, ಮಾತನಾಡುವಾಗ ಆ ಮಾತಿನ ಒಂದಿಷ್ಟು ಅಂಶವನ್ನಾದರೂ ಅನುಷ್ಠಾನ ರೂಪದಲ್ಲಿ ತಂದಿದ್ದೇ ಆದರೆ, ಆ ವ್ಯಕ್ತಿಗೆ ಭಗವದ್ ಶಕ್ತಿ ದೊರೆಯುವುದರಲ್ಲಿ ಸಂದೇಹವಿಲ್ಲ. ಒಟ್ಟಿನಲ್ಲಿ ಶ್ರದ್ಧೆ, ನಂಬಿಕೆ, ಶುದ್ಧ ಭಕ್ತಿಯಿಂದ ಮಾತ್ರ ಭಗವದ್ ಶಕ್ತಿಯನ್ನು ಅರಿಯಲು ಸಾಧ್ಯ. ಆದ್ದರಿಂದ ಶ್ರದ್ಧೆಯೇ ಭಗವದ್ ಭಕ್ತಿಗೆ ಪರವಾನಗಿ ಎನ್ನಬಹುದಲ್ಲವೇ?