ಶ್ಯಾಮ್ ಭಟ್ ಸೇರಿ ಮೂವರ ವಿರುದ್ಧ ದೂರು

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಮಗನಿಗೆ ಸಬ್ ಇನ್​ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ವಂಚಿಸಲಾಗಿದೆ ಎಂದು ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶ್ಯಾಮ್ ಭಟ್ ಸೇರಿ ಮೂವರ ವಿರುದ್ಧ ನಿವೃತ್ತ ಆರ್​ಎಸ್​ಐ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತುಮಕೂರು ಕ್ಯಾತಸಂದ್ರದ ನಿವಾಸಿ ನಿವೃತ್ತ ಆರ್​ಎಸ್​ಐ ಸಿದ್ದಯ್ಯ (66) ನೀಡಿದ ದೂರಿನ ಆಧಾರದ ಮೇಲೆ ಮಾಜಿ ಕೆಪಿಎಸ್​ಸಿ ಅಧ್ಯಕ್ಷ ಶ್ಯಾಮ್ ಭಟ್, ನಿವೃತ್ತ ಆರ್.ಎಸ್.ಐ ಪ್ರದೀಪ್, ಮಂಗಳೂರು ಜೆಡಿಎಸ್ ಮುಖಂಡ ಧನರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿದ್ದಯ್ಯ ಕೆಲ ವರ್ಷಗಳ ಹಿಂದೆ ಮೈಸೂರು ರಸ್ತೆಯಲ್ಲಿರುವ ಸಿಎಆರ್ ಕೇಂದ್ರದಲ್ಲಿ ಆರ್​ಎಸ್​ಐ ಆಗಿದ್ದರು. ಆ ಸಂದರ್ಭದಲ್ಲಿ ಅದೇ ಕೇಂದ್ರದಲ್ಲಿ ಆರ್​ಎಸ್​ಐ ಆಗಿ ಕೆಲಸ ಮಾಡುತ್ತಿದ್ದ ಪ್ರದೀಪ್ ಎಂಬುವರು ಸಿದ್ದಯ್ಯನ ಮಗ ನಾಗೇಂದ್ರಗೆ ಅಬಕಾರಿ ಇಲಾಖೆಯಲ್ಲಿ ಸಬ್ ಇನ್​ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದರು. ನಂತರ ಜೆಡಿಎಸ್ ಮುಖಂಡ ಧನರಾಜ್ ಎಂಬಾತನನ್ನು ಸಿದ್ದಯ್ಯಗೆ ಪರಿಚಯಿಸಿದ್ದರು. ಸಿದ್ದಯ್ಯ ಹಾಗೂ ಇವರ ಪುತ್ರನನನ್ನು ಕೆಪಿಎಸ್​ಸಿ ಅಧ್ಯಕ್ಷರಾಗಿದ್ದ ಶ್ಯಾಮ್ ಭಟ್ ಕಚೇರಿಗೆ ಕರೆದೊಯ್ದ ಧನರಾಜ್, ತಂದೆ-ಮಗನನ್ನು ಪರಿಚಯಿಸಿದ್ದ. ಇದಾದ ನಂತರ 20 ಲಕ್ಷ ರೂ. ಕೊಟ್ಟರೆ ಅಬಕಾರಿ ಇಲಾಖೆಯಲ್ಲಿ ಎಸ್​ಐ ಹುದ್ದೆ ಕೊಡಿಸುವುದಾಗಿ ತಿಳಿಸಿದ್ದ. ಆತನ ಮಾತನ್ನು ನಂಬಿದ ಸಿದ್ದಯ್ಯ ಹಣ ಕೊಡಲು ಒಪ್ಪಿದ್ದರು. ಮೊದಲಿಗೆ 10 ಲಕ್ಷ ರೂ., ಕೆಲಸ ಸಿಕ್ಕ ನಂತರ ಬಾಕಿ 10 ಲಕ್ಷ ರೂ. ನೀಡಬೇಕು. ಜತೆಗೆ ವೈಯಕ್ತಿಕವಾಗಿ 5 ಲಕ್ಷ ರೂ. ನೀಡಬೇಕು ಎಂದು ಧನರಾಜ್ ಡೀಲ್ ಮಾಡಿದ್ದ. 2017ರ ಜೂ.8 ರಿಂದ 19ರ ವರೆಗೆ ಹಂತಹಂತವಾಗಿ ಗಾಂಧಿನಗರದ ದಿವಾ ರೆಸಿಡೆನ್ಸಿ ಹಾಗೂ ಮೈಸೂರು ರಸ್ತೆಯಲ್ಲಿರುವ ಧನರಾಜ್ ನಿವಾಸದಲ್ಲಿ 8 ಲಕ್ಷ ರೂ. ಗಳನ್ನು ಧನರಾಜ್​ಗೆ ಸಿದ್ದಯ್ಯ ಕೊಟ್ಟಿದ್ದರು. 2 ಲಕ್ಷ ರೂ.ಗಳನ್ನು ಚೆಕ್ ಮೂಲಕ ನೀಡಿದ್ದರು.

2ನೇ ಪಟ್ಟಿಯಲ್ಲಿ ಗ್ಯಾರಂಟಿ ಎಂದರು!

ಡೀಲ್​ನಂತೆ ಹಣ ಪಾವತಿಸಿ ಕೆಲ ದಿನಗಳು ಕಳೆದರೂ ಧನರಾಜ್ ಪ್ರತಿಕ್ರಿಯಿಸದಿದ್ದಾಗ ಸಿದ್ದಯ್ಯ ಕರೆ ಮಾಡಿ ವಿಚಾರಿಸಿದ್ದರು. ಆಗ ಆತ, ನಿಮ್ಮ 10 ಲಕ್ಷ ರೂ. ಗಳನ್ನು ಶ್ಯಾಮ್ ಭಟ್ ಅವರಿಗೆ ತಲುಪಿಸಿರುವುದಾಗಿ ಹೇಳಿದ್ದ. ಶ್ಯಾಮ್ಟ್ ಬಳಿ ತೆರಳಿ ವಿಚಾರಿಸಿದಾಗ, ಎರಡನೇ ಪಟ್ಟಿಯಲ್ಲಿ ನಿಮ್ಮಮಗನಿಗೆ ಕೆಲಸ ಗ್ಯಾರಂಟಿ ಎಂದು ನಂಬಿಸಿದ್ದರು. ಆದರೆ, ವರ್ಷ ಕಳೆದರೂ ಕೆಲಸ ಸಿಕ್ಕದಿದ್ದಾಗ ಹಣ ಹಿಂದಿರುಗಿಸುವಂತೆ ಧನರಾಜ್​ಗೆ ಸೂಚಿಸಿದ್ದರು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತದೆ ಎಂಬುದನ್ನು ಅರಿತು 3 ಲಕ್ಷ ರೂ.ಗಳನ್ನು ಸಿದ್ದಯ್ಯ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದ. ಆದರೆ, ಉಳಿದ 7 ಲಕ್ಷ ರೂ.ಗಳನ್ನು ಕೊಡದೆ ಸತಾಯಿಸುತ್ತಿದ್ದರು. ಇದರಿಂದ ಬೇಸತ್ತ ಸಿದ್ದಯ್ಯ, ಮೇ12 ರಂದು ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *