ಶೌಚಗೃಹ ಮೇಲ್ವಿಚಾರಕರಿಗೆ ಕ್ಲಾಸ್: ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಿಂದ ಪರಿಶೀಲನೆ

ಬೆಂಗಳೂರು: ಸೀಗೆಹಳ್ಳಿ, ಕನ್ನಹಳ್ಳಿ ಮತ್ತು ಎಂಎಸ್​ಜಿಪಿಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ, ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಬೆವರಿಳಿಸಿದರು.

ಬುಧವಾರ ನಗರದಲ್ಲಿರುವ ಉಚಿತ ಮತ್ತು ಹಣ ಪಾವತಿಸಿ ಬಳಸುವ ಕೆಲ ಶೌಚಗೃಹ ಹಾಗೂ ಬೆಂಗಳೂರು ಹೊರವಲಯ ಮತ್ತು ದೊಡ್ಡಬಳ್ಳಾಪುರದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.

ಸೀಗೆಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕ ಗಳಲ್ಲಿ ಸಿಬ್ಬಂದಿಗೆ ಶೂ, ಗ್ಲೌಸ್ ಹಾಗೂ ಸಮವಸ್ತ್ರ ನೀಡದಿದ್ದಕ್ಕೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಗುರುವಾರ ಈ ಬಗ್ಗೆ ಕಚೇರಿಯಲ್ಲಿ ಈ ಬಗ್ಗೆ ಸಭೆ ಕರೆಯಲಾಗಿದ್ದು, ಸಂಬಂಧಿಸಿದ ದಾಖಲೆ ಒದಗಿಸುವಂತೆ ಖಡಕ್ ಸೂಚನೆ ನೀಡಿದರು.

ಕನ್ನಹಳ್ಳಿಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಹಸಿತ್ಯಾಜ್ಯ ಕಲುಷಿತ ನೀರು ಹರಿದುಹೋಗುವ ಸಂಪ್​ಗಳನ್ನು ಮುಚ್ಚದಿರುವುದಕ್ಕೆ ಹಾಗೂ ಔಷಧ ಸಿಂಪಡಿಸದೆ ಇರುವುದನ್ನು ಕಂಡು, ನೌಕರರಿಗೆ ಸೂಕ್ತ ವೇತನ ಹಾಗೂ ಸವಲತ್ತು ಒದಗಿಸುವಂತೆ ಸೂಚನೆ ನೀಡಿದರು.

ದೊಡ್ಡಬಳ್ಳಾಪುರದಲ್ಲಿರುವ ಎಂಎಸ್​ಜಿಪಿ ತ್ಯಾಜ್ಯ ಸಂಸ್ಕೃರಣಾ ಘಟಕಕ್ಕೆ ಭೇಟಿ ನೀಡಿದಾಗ ಈ ಘಟಕದ ಸುತ್ತ ಪಶ್ಚಿಮ ಬಂಗಾಳದ ಅಂದಾಜು 400ಕ್ಕೂ ಅಧಿಕ ಮಂದಿ ವಾಸಿಸುತ್ತಿರುವುದನ್ನು ಗಮನಿಸಿ, ಕೂಡಲೇ ಇವರ ವಿವರ ನೀಡುವಂತೆ ಘಟಕದ ಮುಖ್ಯಸ್ಥರಿಗೆ ಜಗದೀಶ್ ಹಿರೇಮನಿ ಸೂಚಿಸಿದರು.

ಸಿಬ್ಬಂದಿಗೆ ವೇತನ ಹೆಚ್ಚಿಸುವ ಭರವಸೆ

ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿನ ಸಿಬ್ಬಂದಿಗೆ 10ರಿಂದ 12 ಸಾವಿರ ರೂ. ವೇತನ ನೀಡುತ್ತಿರುವುದಕ್ಕೆ ಜಗದೀಶ್ ಹಿರೇಮನಿ ಅಸಮಾಧಾನ ವ್ಯಕ್ತಪಡಿಸಿದರಯ, ಇವರನ್ನು ‘ವಿಶೇಷ ಕಾರ್ವಿುಕರು’ ಎಂದು ಪರಿಗಣಿಸಿ ಹೆಚ್ಚಿನ ವೇತನ ನೀಡುವಂತೆ ಬಿಬಿಎಂಪಿಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಿಬ್ಬಂದಿ ಆರೋಗ್ಯ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯೊಂದು ಮಾಡುತ್ತಿದೆ ಎಂದು ಸಬೂಬು ಹೇಳಲು ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೂರು ಶೌಚಗೃಹಗಳಿಗೆ ಬೀಗ

ಟೆಂಡರ್ ಕರೆಯದೆ ಹಣ ಪಾವತಿಸಿ ಉಪಯೋಗಿಸುವ ಶೌಚಗೃಹ ನಿರ್ಮಾಣ ಮಾಡಲು ಅನುಮತಿ ಕೊಟ್ಟ ಇಂಜಿನಿಯರ್​ಗೆ ನೋಟಿಸ್ ನೀಡಲು ಜಗದೀಶ್ ಹಿರೇಮನಿ ಸೂಚಿಸಿದರು. ಗಾಂಧಿನಗರ ವಾರ್ಡ್​ನ ಶಿರೂರ್ ಪಾರ್ಕ್ ರಸ್ತೆಯಲ್ಲಿರುವ ಹಣ ಪಾವತಿಸಿ ಉಪಯೋಗಿಸುವ ಸಾರ್ವಜನಿಕ ಶೌಚಗೃಹ ಪರಿಶೀಲಿಸಿದಾಗ, ಇದರ ಪಕ್ಕದಲ್ಲೇ ಸಿಬ್ಬಂದಿ ಅಡುಗೆ ಮಾಡುವುದು ಕಂಡುಬಂದಿತು. ಮಂತ್ರಿ ಮಾಲ್ ಬಳಿಯ ಸೆಂಟ್ರಲ್ ವೃತ್ತದಲ್ಲಿರುವ ಶೌಚಗೃಹ ನಿರ್ವಣಕ್ಕೆ ಟೆಂಡರ್ ಕರೆಯದೆ ಅನುಮತಿ ಕೊಟ್ಟಿರುವುದು ಗೊತ್ತಾಗಿ ಸ್ಥಳದಲ್ಲಿಯೇ ಅದಕ್ಕೆ ಬೀಗ ಹಾಕಿಸಿದರು. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದ ಪ್ರಕಾಶ್​ನಗರ ವಾರ್ಡ್ ಗಾಯತ್ರಿದೇವಿ ಉದ್ಯಾನ ಹಾಗೂ ಮಲ್ಲೇಶ್ವರ ಆಟದ ಮೈದಾನ ಸಮೀಪದಲ್ಲಿದ್ದ ಶೌಚಗೃಹಕ್ಕೂ ಬೀಗ ಹಾಕಿಸಿದರು.

 

ಬಿಬಿಎಂಪಿ ವ್ಯಾಪ್ತಿಯಲ್ಲಿ 530 ಪಾಲಿಕೆ ಹಾಗೂ 150 ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಸೇರಿ ಒಟ್ಟು 680 ಸುಲಭ್ ಶೌಚಗೃಹಗಳಿವೆ. ಎಲ್ಲ ಶೌಚಗೃಹಗಳಲ್ಲೂ ಸ್ಥಳೀಯರಲ್ಲದೆ ಹೊರರಾಜ್ಯದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವಚ್ಛತೆ ಕಾಪಾಡಿಲ್ಲ, ದರ ಪಟ್ಟಿ ಅಳವಡಿಸಿಲ್ಲ, ಟೆಂಡರ್ ಕರೆಯದೆ ಶೌಚಗೃಹ ನಿರ್ವಿುಸಲಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಂಡಿಲ್ಲ.
| ಜಗದೀಶ್ ಹಿರೇಮನಿ, ರಾಷ್ಟ್ರೀಯ ಸಪಾರಿ ಕರ್ಮಚಾರಿ ಆಯೋಗದ ಸದಸ್ಯ

Leave a Reply

Your email address will not be published. Required fields are marked *