ಶೌಚಗೃಹ ನಿರ್ವಹಣೆ ಹೊಣೆ ಖಾಸಗಿಗೆ

ಎನ್.ಆರ್.ಪುರ: ಪಟ್ಟಣದ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಶೌಚಗೃಹಗಳ ನಿರ್ವಹಣೆಯನ್ನು ಬಾಡಿಗೆ ಆಧಾರದಲ್ಲಿ ಮೈಸೂರಿನ ಮಹಾವೀರ ಕಲ್ಯಾಣ ಸ್ವಯಂ ಸೇವಾ ಸಂಸ್ಥೆಗೆ ನೀಡಲು ಪಪಂ ಸಾಮಾನ್ಯ ಸಭೆಯಲ್ಲಿ ತೀರ್ವನಿಸಲಾಯಿತು.

ವಿಷಯ ಪ್ರಸ್ತಾಪಿಸಿದ ಪಪಂ ಮುಖ್ಯಾಧಿಕಾರಿ ಕುರಿಯಾಕೋಸ್ ಮಾತನಾಡಿ, ಪಟ್ಟಣದ ಎಲ್ಲಾ ಸಾರ್ವಜನಿಕ ಶೌಚಗೃಹಗಳಿಗೆ ಮಾಸಿಕ 5 ಸಾವಿರ ರೂ. ಬಾಡಿಗೆ ನೀಡಿ ನಿರ್ವಹಿಸಲು ಸ್ವಯಂ ಸೇವಾ ಸಂಸ್ಥೆಯೊಂದು ಮುಂದೆ ಬಂದಿದೆ.ಅಲ್ಲದೆ ಪ್ರತಿ ವರ್ಷ ಶೇ.15ರಷ್ಟು ಹೆಚ್ಚಿಗೆ ಬಾಡಿಗೆ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.

ಸದಸ್ಯ ಅಬ್ದುಲ್​ಸುಬಾನ್ ಮಾತನಾಡಿ, ಪಪಂ ಸಮೀಪ ಸಾರ್ವಜನಿಕ ಶೌಚಗೃಹ ನಿರ್ವಣಕ್ಕೆ ಕ್ರಮ ಕೈಕೊಳ್ಳಬೇಕು. ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ರಸ್ತೆಅಗಲೀಕರಣ ಮಾಡುವಾಗ ಮನೆ, ಕಟ್ಟಡ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಪಟ್ಟಣ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಿ ಗೊಬ್ಬರವಾಗಿ ಪರಿವರ್ತಿಸಲು ಒಣ ಹಾಗೂ ಹಸಿ ಕಸವನ್ನು ಪ್ರತಿ ನಿತ್ಯ ಹಾಗೂ ಪ್ಲಾಸ್ಟಿಕ್ ವಸ್ತುವನ್ನು ವಾರಕ್ಕೊಮ್ಮೆ ಸಂಗ್ರಹಿಸಿದರೆ ಒಳ್ಳೆಯದು ಎಂದು ಮುಖ್ಯಾಧಿಕಾರಿ ಕುರಿಯಾಕೋಸ್ ಸಲಹೆ ನೀಡಿದರು.

ಸದಸ್ಯರಾದ ಸುಕುಮಾರ್,ನಾಗಭೂಷಣ್ ಮಾತನಾಡಿ, ಇದು ಸಮರ್ಪಕವಾಗುವುದಿಲ್ಲ. ಈಗಾಗಲೇ ಪ್ರತಿ ಮನೆಗೂ ಹಸಿ ಮತ್ತು ಒಣ ಕಸ ಸಂಗ್ರಹಣೆಗೆ 2 ಡಸ್ಟ್ ಬಿನ್ ನೀಡಲಾಗಿದೆ. ಒಣ ಕಸ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿ ನೀಡುವಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.