ಶೈತ್ಯಾಗಾರ ಕಾಮಗಾರಿಗೆ ವಿರೋಧ

ವಿಜಯವಾಣಿ ಸುದ್ದಿಜಾಲ ಗೋಕರ್ಣ

ತದಡಿ ಬಂದರಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಬೃಹತ್ ಶೈತ್ಯಾಗಾರ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ನಾಗರಿಕರು ತದಡಿ ಬಂದರಿಗೆ ಸೋಮವಾರ ಭೇಟಿ ನೀಡಿದ ತಾಲೂಕು ಮಟ್ಟದ ಅಧಿಕಾರಿಗಳನ್ನು ಆಗ್ರಹಿಸಿದರು.

ಶೈತ್ಯಾಗಾರಕ್ಕಾಗಿ ನಿರ್ವಿುಸಿದ ದೊಡ್ಡ ಟ್ಯಾಂಕ್​ಗಳಲ್ಲಿ ಕಲ್ಮಷ ನೀರು ತುಂಬಿ ಬಂದರಿನಲ್ಲಿ ಅನೈರ್ಮಲ್ಯ ಹೆಚ್ಚಾಗಿದೆ. ಇದರಿಂದ ಮಲೇರಿಯಾ, ಡೆಂಘ ಮುಂತಾದ ಸಾಂಸರ್ಗಿಕ ರೋಗ ಉಲ್ಬಣಿಸುವ ಸಾಧ್ಯತೆಯ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಸಿದೆ. ಸ್ಥಳೀಯ ಪಂಚಾಯಿತಿಯ ನಿರಾಕ್ಷೇಪಣಾ ಪತ್ರ ಪಡೆಯದೆ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿರ್ವಿುಸುತ್ತಿರುವ ಶೈತ್ಯಾಗಾರದಿಂದ ಮುಂದೆ ಕೂಡ ಆತಂಕವಿರುವುದರಿಂದ ಕಾಮಗಾರಿಗೆ ತಡೆ ನೀಡುವಂತೆ ನೂರಾರು ಜನರು ಒತ್ತಾಯಿಸಿದರು.

13 ಕೋಟಿ ರೂ. ಪ್ರಾಜೆಕ್ಟ್: ಬಂದರಿನಲ್ಲಿದ್ದ ಹಳೇ ಶೈತ್ಯಾಗಾರವನ್ನು ಕೆಡವಿ ಮೀನುಗಾರಿಕೆ ಅಭಿವೃದ್ಧಿ ನಿಗಮ 13 ಕೋ.ರೂ. ಅಂದಾಜು ವೆಚ್ಚದ ಹೊಸ ಐಸ್​ಪ್ಲಾಂಟ್ ನಿರ್ವಿುಸುತ್ತಿದೆ. ಇದಕ್ಕಾಗಿ 20ಕ್ಕೂ ಅಧಿಕ ಬೃಹತ್ ಟ್ಯಾಂಕ್​ಗಳನ್ನು ಕಟ್ಟಲಾಗಿದೆ. 10 ಅಡಿಗೂ ಮೀರಿದ ಎತ್ತರವಿರುವ ಈ ಟ್ಯಾಂಕ್​ಗಳಲ್ಲಿ ಹೊಲಸು ನೀರು ಸಂಗ್ರಹಗೊಂಡು ಅವುಗಳು ಸಾಂಸರ್ಗಿಕ ರೋಗ ಹರಡಬಲ್ಲ ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಯೋಜನೆಗೆ ಈವರೆಗೆ ಪಂಚಾಯಿತಿಯಿಂದ ಎನ್​ಒಸಿ ಪಡೆಯದೇ ಇರುವುದರಿಂದ ಅನೇಕ ಸದಸ್ಯರು ಕಾಮಗಾರಿ ವಿರೋಧಿಸುತ್ತಿದ್ದಾರೆ. ಜತೆಗೆ ಕೆಎಫ್​ಡಿಸಿ ಪಂಚಾಯಿತಿಗೆ ಕಟ್ಟಬೇಕಾದ ಲಕ್ಷಾಂತರ ರೂ. ಟ್ಯಾಕ್ಸ್ ಬಾಕಿ ಇಟ್ಟುಕೊಂಡಿರುವುದರಿಂದ ನಿಯಮದಂತೆ ಅದನ್ನು ತುಂಬದೆ ಹೊಸ ಎನ್​ಒಸಿ ಸಿಗುವುದು ಕಷ್ಟ.

ನೋಟಿಸ್ ಜಾರಿ: ಜನರನ್ನು ಸಮಾಧಾನಪಡಿಸಿ ಮಾತನಾಡಿದ ತಾಪಂ ಇಒ ಸಿ.ಟಿ. ನಾಯ್ಕ, ಬಂದರಿನ ಅಶುದ್ಧ ವಾತಾವರಣದ ಬಗ್ಗೆ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಸಾಂಸರ್ಗಿಕ ರೋಗದ ಭೀತಿ ಹಿನ್ನೆಲೆಯಲ್ಲಿ ಟ್ಯಾಂಕ್ ಮತ್ತು ಕಾಮಗಾರಿ ಸ್ಥಳವನ್ನು ಸ್ವಚ್ಛಗೊಳಿಸಲು 3 ದಿನಗಳ ಕಾಲಾವಕಾಶ ನೀಡಲಾಗಿದೆ. ಬಂದರಿನ ಇತರ ಭಾಗಗಳಲ್ಲಿ ಕಂಡುಬರುತ್ತಿರುವ ಗಲೀಜನ್ನು ತಕ್ಷಣ ಸ್ವಚ್ಛ ಮಾಡಲು ಮೀನುಗಾರಿಕೆ ಇಲಾಖೆ ಒಪ್ಪಿದೆ. ಅಕ್ರಮವಾಗಿ ನಡೆಸುತ್ತಿರುವ ಕಾಮಗಾರಿ ಕುರಿತು ಸಂಬಂಧಿಸಿದವರಿಗೆ ಇಂದೇ ನೋಟಿಸ್ ನೀಡಲು ಪಂಚಾಯಿತಿಗೆ ಆದೇಶಿಸಲಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ತಾಪಂ ಸದಸ್ಯ ಮಹೇಶ ಶೆಟ್ಟಿ, ಪಂಚಾಯಿತಿ ಉಪಾಧ್ಯಕ್ಷ ಶೇಖರ ನಾಯ್ಕ, ಉದ್ಯಮಿ ಅರುಣ ಜಿ. ನಾಯ್ಕ ಮತ್ತು ಅನೇಕ ಪಂಚಾಯಿತಿ ಸದಸ್ಯರಿದ್ದರು.

Leave a Reply

Your email address will not be published. Required fields are marked *