ಚಿತ್ರದುರ್ಗ: ಕುರಿ ಸಾಕಾಣಿಕೆಯೊಂದಿಗೆ ಪಶುಪಾಲನೆಯಲ್ಲಿ ಕಾಯಕ ನಿರತರಾದ ಕುರುಬ ಸಮುದಾಯ ಆರ್ಥಿಕವಾಗಿ ಸಬಲರು. ಆದರೆ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದ್ದು, ಮುಂದೆ ಬನ್ನಿ ಎಂದು ಹೊಸದುರ್ಗ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿ (ಹಳ್ಳದ ಜಂಗಮ) ತೋಪು ಜಾತ್ರೆಯ 4ನೇ ದಿನ ಬುಧವಾರದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಹಿಂದುಳಿದ ಕುರುಬ ಸಮುದಾಯ ಪ್ರಬಲಗೊಳ್ಳಬೇಕಾದ ಅಗತ್ಯವಿದೆ. ಜಾತ್ರೆ, ಪರಿಸೆ, ಹಬ್ಬ, ಉತ್ಸವಗಳನ್ನು ಅದ್ದೂರಿಯಾಗಿ ಆಚರಿಸುವ ನೆಪದಲ್ಲಿ ಹಣ ವ್ಯಯ ಮಾಡಿ, ಬದುಕನ್ನು ಕಷ್ಟಕ್ಕೆ ಸಿಲುಕಿಸಿಕೊಳ್ಳಬೇಡಿ. ಉಳಿತಾಯ ಮನೋಭಾವ ಮೈಗೂಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಇತ್ತೀಚೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಗುವಷ್ಟು ಪ್ರಾತಿನಿಧ್ಯ ಶ್ರೀಗಳ ಆಶೀರ್ವಚನ, ಉಪನ್ಯಾಸ, ಚಿಂತನ-ಮಂತನ, ಸಂವಾದಗಳಿಗೆ ಜನರು ನೀಡುತ್ತಿಲ್ಲ. ಇದು ಸರಿಯಲ್ಲ ಎಂದರು.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಭವ್ಯ ಪರಂಪರೆ ಹೊಂದಿದ ಸಮುದಾಯಗಳ ಪೈಕಿ ಹಾಲುಮತವೂ ಪ್ರಮುಖವಾದುದು. ನೆಲ, ಸಂಸ್ಕೃತಿ, ಎಲ್ಲ ರಂಗಗಳಿಗೂ ವಿಶೇಷ ಕೊಡುಗೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯನಗರ ಸಾಮ್ರಾಜ್ಯದಿಂದ ಹಿಡಿದು, ಉತ್ತರ ಭಾರತದ ಅಹಲ್ಯ ಬಾಯಿ ಹೋಳ್ಕರ್ ಅವರವರೆಗೂ ಚಿಂತನೆ ಮಾಡಿದಾಗ ಬಹುದೊಡ್ಡ ತ್ಯಾಗ, ಬಲಿದಾನಗಳನ್ನು ನೀಡಿದ ಕೀರ್ತಿ ಹಾಲುಮತ ಸಮುದಾಯಕ್ಕೆ ಸಲ್ಲುತ್ತದೆ ಎಂದರು.
ಸಾಮೂಹಿಕ ವಿವಾಹ ಇಂದು: ಮಾ. 21ರಂದು ಬೆಳಗ್ಗೆ 9ಕ್ಕೆ ಸಾಮೂಹಿಕ ವಿವಾಹ ನಂತರ ದೇವರ ಮೂರ್ತಿಗಳಿಗೆ ಉಯ್ಯಲೆ ಮತ್ತು ಓಕಳಿ ಸೇವೆ ಜರುಗಲಿದೆ. ಮಧ್ಯಾಹ್ನ 2ಕ್ಕೆ ಧಾರ್ಮಿಕ, ರಾತ್ರಿ 8ರ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲಿಂಗದಹಳ್ಳಿ ಹಾಲಪ್ಪ, ಎಫ್.ಟಿ.ಹಳ್ಳಿಕೆರೆ, ವಡ್ಡಗೆರೆ ನಾಗರಾಜ್ ಇತರರಿದ್ದರು.
