ಶೈಕ್ಷಣಿಕ ಪ್ರಗತಿಗೆ ಸರ್ಕಾರ ಬದ್ಧ

ದೇವನಹಳ್ಳಿ: ಶಿಕ್ಷಣ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಮಹತ್ವ ನೀಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವಿಶೇಷವಾಗಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಹೊಸ ಯೋಜನೆ ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಕುಂದಾಣ ಹೋಬಳಿಯ ವಿಶ್ವನಾಥಪುರದಲ್ಲಿ 2019-20ನೇ ಸಾಲಿಗೆ ಆಂಗ್ಲಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ (ಎಲ್​ಕೆಜಿ) ಹಾಗೂ ಒಂದನೇ ತರಗತಿಗೆ ಕರ್ನಾಟಕ ಪಬ್ಲಿಕ್ ಶಾಲೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಆಂಗ್ಲ ಮಾಧ್ಯಮ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಜಾರಿಗೊಳಿಸಿ ಸರ್ಕಾರಿ ಶಾಲೆಗಳ ಉಳಿವಿಗೆ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ಯೋಜನೆಯಲ್ಲಿ ತಾಲೂಕಿನ ವಿಶ್ವನಾಥಪುರ, ವಿಜಯಪುರ ಹಾಗೂ ಕಾರಹಳ್ಳಿಯಲ್ಲಿ ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮದ ಮೂರು ಶಾಲೆ ಆರಂಭವಾಗುತ್ತಿವೆ ಎಂದರು.

ಪ್ರಾಂಶುಪಾಲೆ ವಾಣಿಶ್ರೀ ಮಾತನಾಡಿ, ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಒಂದೇ ಸೂರಿನಡಿ ಎಲ್​ಕೆಜಿಯಿಂದ ಪಿಯುಸಿವರೆಗೂ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲು ಮುಂದಾಗಿದೆ. ಈ ಯೋಜನೆಯಲ್ಲಿ 45 ಲಕ್ಷ ರೂಪಾಯಿ ವಿಶೇಷ ಅನುದಾನ ಶಾಲೆಗೆ ದೊರೆತಿದೆ. ಸರ್ಕಾರ 30 ಮಕ್ಕಳಿಗೆ ಪ್ರವೇಶಕ್ಕೆ ಅನುಮತಿ ನೀಡಿದ್ದು, 52 ಮಕ್ಕಳು ದಾಖಲಾಗಿದ್ದಾರೆ. ಇದರಲ್ಲಿ ಲಾಟರಿ ಮೂಲಕ 30 ಮಕ್ಕಳಿಗೆ ಪವೇಶ ಕಲ್ಪಿಸಿ ಉಳಿದವರಿಗೆ ಶಾಲಾಭಿವೃದ್ಧಿ ಸಮಿತಿ ನಿರ್ಧಾರದಂತೆ ಪ್ರವೇಶಾತಿ ನೀಡಲಾಗಿದೆ ಎಂದರು.

ಜಿಪಂ ಸದಸ್ಯ ಕೆ.ಸಿ.ಮಂಜುನಾಥ, ತಾಪಂ ಸದಸ್ಯರಾದ ಶೈಲಾ ಜಗದೀಶ್, ಎಸ್.ಮಹೇಶ್, ಗ್ರಾಪಂ ಉಪಾಧ್ಯಕ್ಷೆ ರಮಾದೇವಿ, ಬಿಇಒ ಗಾಯತ್ರಿದೇವಿ, ಎಸ್​ಡಿಎಂಸಿ ಅಧ್ಯಕ್ಷ ಶಿವಣ್ಣ, ಬಿಆರ್​ಪಿ ನಾಗೇಶ್ ಇದ್ದರು.