ಶೇ.73 ಅಂಕ ಪಡೆದ ಡಿಸಿಸಿ ಬ್ಯಾಂಕ್

ಕೋಲಾರ: ಅಧೋಗತಿಗೆ ಇಳಿದಿದ್ದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕನ್ನು ನಷ್ಟದಿಂದ ಪಾರು ಮಾಡಿ ಅಭಿವೃದ್ಧಿಯತ್ತ ಕೊಂಡೊಯ್ದಿದ್ದರಿಂದ ನಬಾರ್ಡ್ ನೂರಕ್ಕೆ 73 ಅಂಕ ನೀಡಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹರ್ಷ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿಗೆ ಆಡಳಿತ ಮಂಡಳಿ ರಚನೆಗೆ ಮೊದಲು ಹಣಕಾಸು ಸ್ಥಿತಿ ಶೋಚನೀಯವಾಗಿತ್ತು, ನಾವು ಅಧಿಕಾರ ವಹಿಸಿಕೊಂಡ ಮೇಲೆ ಬ್ಯಾಂಕಿನ ಆರ್ಥಿಕ ಸ್ಥಿತಿ ಸುಧಾರಣೆಗೊಂಡು ಲಾಭ ಗಳಿಸುವಂತಾಗಿದೆ ಎಂದರು.

2014ರ ಮಾರ್ಚ್3ರ ಪೂರ್ವದಲ್ಲಿ ಬ್ಯಾಂಕಿನ ಷೇರು ಬಂಡವಾಳ 13.58 ಕೋಟಿ ಇತ್ತು, ನಾವು ಅಧಿಕಾರ ವಹಿಸಿಕೊಂಡ ನಂತರ 2018ರ ಮಾರ್ಚ್ 31ಕ್ಕೆ 65.89 ಕೋಟಿ ರೂ.ಗಳಾಗಿದೆ ಎಂದು ಪ್ರಗತಿಯ ವಿವರ ಮಂಡಿಸಿದರು.

ನಿಧಿಗಳು 9.59 ಕೋಟಿಯಿಂದ 20.44 ಕೋಟಿ, ಠೇವಣಿಗಳು 50.05 ಕೋಟಿಯಿಂದ 206.04 ಕೋಟಿ, ನಬಾರ್ಡ್​ಅಪೆಕ್ಸ್ ಬ್ಯಾಂಕಿನಿಂದ ಎತ್ತುವಳಿ ಮಾಡಿದ ಸಾಲ 10.64 ಕೋಟಿಯಿಂದ 544.70 ಕೋಟಿ, ಸಾಲಗಳ ಹಂಚಿಕೆ 34.33 ರಿಂದ 731.18 ಕೋಟಿ, ಸಾಲಗಳ ಹೊರಬಾಕಿ 76.08ರಿಂದ 705.37 ಕೋಟಿ, ಹೂಡಿಕೆಗಳು 16.72 ರಿಂದ 69.69 ಕೋಟಿ, ದುಡಿಯುವ ಬಂಡವಾಳ 110.88ರಿಂದ 864.20 ಕೋಟಿ, ಸಾಲ ವಸೂಲಾಗದ ಪ್ರಮಾಣ(ಎನ್​ಪಿಎ) 62.9 ಕೋಟಿ ಯಿಂದ 3.2 ಕೋಟಿ, ನೆಟ್ವರ್ಕ್ ಸ್ಥಿತಿ – (ಮೈನಸ್)1.72ರಿಂದ 81.19 ಕೋಟಿ, ಸಿಆರ್​ಎಆರ್ ಪ್ರಮಾಣ ಶೇ.-3.5ರಿಂದ ಶೇ.10.94, ಬ್ಯಾಂಕಿನ ಲಾಭ 0.33ರಿಂದ 6.38ಕೋಟಿ, ಸಂಚಿತ ನಷ್ಟ 16.90 ರಿಂದ 3.94 ಕೋಟಿ ರೂಪಾಯಿ ಎಂದು ಮಾಹಿತಿ ನೀಡಿದರು.

ಅಡಿಟ್ ರೇಟ್ 39 ಡಿವರ್ಗದಿಂದ 84.9 ಎ ವರ್ಗ ಪಡೆದಿದೆ ಹಾಗೂ ವಬಾರ್ಡ್ ನೀಡಿರುವ ಅಂಕಗಳಲ್ಲಿ 2014ರಲ್ಲಿ ಶೂನ್ಯ ಅಂಕ ಪಡೆದಿದ್ದ ಬ್ಯಾಂಕ್ 73 ಉತ್ತಮ ಅಂಕ ಗಳಿಸುವ ಮೂಲಕ ನಮ್ಮನ್ನು ಟೀಕಿಸಿದ್ದ ಜನರಿಗೆ ಉತ್ತರ ನೀಡಿದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಹೊಳಲಿ ಪ್ರಕಾಶ್, ಎನ್.ಶಂಕರನಾರಾಯಣಗೌಡ, ಆರ್.ವೆಂಕರೆಡ್ಡಿ, ಕೆ.ವಿ.ದಯಾನಂದ್, ನಾಗನಾಳ ಸೋಮಣ್ಣ, ಎಂ.ಸಿ.ನೀಲಕಂಠೇಗೌಡ, ಎಂ.ಕೃಷ್ಣೇಗೌಡ, ಎಚ್.ನರಸಿಂಹರೆಡ್ಡಿ, ಹನುಮಂತರೆಡ್ಡಿ, ಜಿ.ವಿ.ಶ್ರೀರಾಮರೆಡ್ಡಿ, ಪಿ.ಶಿವಾರೆಡ್ಡಿ ಇದ್ದರು.

ಕೋರ್ಟ್ ತೀರ್ಪು ಆಧರಿಸಿ ಚುನಾವಣೆ

ಬ್ಯಾಂಕಿಗೆ ಮತ್ತೆ ನಾನು ಅಧ್ಯಕ್ಷನಾಗುತ್ತೆನೋ ಇಲ್ಲವೋ. ಆದರೆ ನಾವು ಪಟ್ಟ ಶ್ರಮದಿಂದಾಗಿ ಬ್ಯಾಂಕ್ ಅಭಿವೃದ್ದಿ ಸಾಧಿಸಿದೆ, ಅವಳಿ ಜಿಲ್ಲೆಗೆ ಸುಮಾರು 1 ಸಾವಿರ ಕೋಟಿ ರೂ. ಸಾಲ ವಿತರಿಸುವ ಶಕ್ತಿ ಪಡೆದುಕೊಂಡಿದ್ದು, ನಾವು ಅಧಿಕಾರ ವಹಿಸಿಕೊಂಡ ನಂತರ ಆಗಿರುವ ಸಾಧನೆ ಸಾರ್ಥಕವಾಗಿದೆ ಎಂದು ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು. ನಮ್ಮ ಆಡಳಿತ ಮಂಡಳಿಯ ಅವಧಿ ನ.14ಕ್ಕೆ ಮುಗಿಯಲಿದ್ದು, ಕೆಲವರು ಅಧಿಕಾರ ವಹಿಸಿಕೊಂಡ ದಿನದ ಆಧಾರದ ಮೇಲೆ ಚುನಾವಣೆ ನಡೆಸುವಂತೆ ಕೋರ್ಟಿಗೆ ಹೋಗಿದ್ದಾರೆ. ಚುನಾವಣೆ ನಡೆಸುವ ವಿಚಾರವಾಗಿ ಕೋರ್ಟಿನ ತೀರ್ಪು ಆಧರಿಸಿ ಚುನಾವಣೆಗೆ ಆಧಿಸೂಚನೆ ಹೊರಡಿಸಬಹುದೆಂದರು.

ಕರಡು ಮತದಾರರ ಪಟ್ಟಿಯಲ್ಲಿ ಲೋಪವಾಗಿದ್ದರೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವರು, ಅದಕ್ಕೂ ನಮಗೂ ಸಂಬಂಧವಿಲ್ಲ, ತಪ್ಪು ಮಾಹಿತಿಯಿಂದ ಕೆಲವರು ಗೊಂದಲ ಸೃಷ್ಟಿಸುತ್ತಿದ್ದು ನ್ಯಾಯಾಲಯದ ತೀರ್ಪು ಹೊರಬಿದ್ದ ಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.