ಶೇ.5ರಷ್ಟು ಲಾಭಾಂಶ ನೀಡಲು ನಿರ್ಧಾರ

ಕೆ.ಆರ್.ನಗರ: ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ 2018-19ನೇ ಸಾಲಿನಲ್ಲಿ 3.84 ಲಕ್ಷ ರೂ. ಲಾಭ ಗಳಿಸಿದ್ದು, ಷೇರುದಾರ ಸದಸ್ಯರಿಗೆ ಶೇ.5ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ದಿವಾಕರ್ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ಆಯೋಜಿಸಿದ್ದ 5ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಾಭಾಂಶವನ್ನು ನಗದು ರೂಪದಲ್ಲಿ ಸದಸ್ಯರಿಗೆ ವಿತರಿಸಲು ಆಡಳಿತ ಮಂಡಳಿ ತೀರ್ಮಾನಿಸಿದ್ದು, ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಬೇಕು ಎಂದರು.

ಸಂಘ ಲಾಭದಲ್ಲಿ ನಡೆಯುತ್ತಿರುವುದರಿಂದ ಸದಸ್ಯರಿಗೆ ಸಾಧ್ಯವಾದಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧರಿಸಲಾಗಿದ್ದು, ಈವರೆಗೆ 1 ಕೋಟಿ ರೂ. ಸಾಲ ವಿತರಿಸಲಾಗಿದೆ. ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ 2 ಸಾವಿರ ರೂ.ಗಳ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಮಾಜಿ ಅಧ್ಯಕ್ಷ ನಾಗರಾಜು, ಸಂಘದ ಕಾರ್ಯದರ್ಶಿ ಕೆ.ಎಸ್.ಗಂಗಾಧರ್ ಮಾತನಾಡಿದರು. ಸಮಾಜ ಸೇವಕ ಕೆ.ಎಲ್.ಹೇಮಂತ್‌ಕುಮಾರ್, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷೆ ಸರ್ವಮಂಗಳಾ, ನಿರ್ದೇಶಕರಾದ ಪುಟ್ಟಣ್ಣಯ್ಯ, ಜಯಲಕ್ಷ್ಮಮ್ಮ, ರಾಮನಾಯಕ, ಶ್ರೀಧರ್, ಎಚ್.ಟಿ.ಜಯರಾಮು, ಎಸ್.ಪಿ.ಕುಮಾರಶೆಟ್ಟಿ, ಎಂ.ಸಿ.ಚಿತ್ರಶೇಖರ್, ಎಂ.ಎನ್.ಮಹದೇವಪ್ಪ, ಬಿ.ಎಲ್.ದಿನೇಶ್, ಪಿ.ರವಿಕುಮಾರ್, ಸೈಯದ್‌ಖಾದೀರ್, ವಿರೂಪಾಕ್ಷ, ಮೋಹನ್‌ಕುಮಾರ್, ಕೃಷ್ಣನಾಯಕ, ಎಸ್.ನಾಗರಾಜು ಇದ್ದರು.

Leave a Reply

Your email address will not be published. Required fields are marked *