ಶೇಡಿಗದ್ದೆ ಸಾರ್ವಜನಿಕರಲ್ಲಿ ಸಂತಸದ ನಗು

ಕುಮಟಾ: ಕಳೆದ ಮೂವತ್ತು ವರ್ಷಗಳಿಂದ ಕತ್ತಲೆಯಲ್ಲಿ ಕಾಲ ಕಳೆದಿದ್ದ ಜನತೆಯ ಮುಖದಲ್ಲಿ ಬೆಳದಿಂಗಳ ನಗು. ಆ ನಗುವಿಗೆ ಕಾರಣವಾಗಿದ್ದು, ಆ ಗ್ರಾಮಕ್ಕೆ ಬಂದ ವಿದ್ಯುತ್ ಸಂಪರ್ಕದಿಂದ. ಕುಮಟಾ ತಾಲೂಕಿನ ಅಳಕೋಡ ಪಂಚಾಯಿತಿಯ ಶೇಡಿಗದ್ದೆ ಗ್ರಾಮಕ್ಕೆ ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ಜನತೆಯ ಸಂತಸಕ್ಕೆ ಪಾರಮ್ಯವೇ ಇರಲಿಲ್ಲ.

ದೀನದಯಾಳ ಉಪಾಧ್ಯಾಯ ಯೋಜನೆಯಡಿ ನೀಡಲಾದ ವಿದ್ಯುತ್ ಸಂಪರ್ಕವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ವಿದ್ಯುತ್ ಸಂಪರ್ಕ ಪಡೆದ ಕುಟುಂಬಗಳಿಗೆ ಉಚಿತ ಬಲ್ಬ್​ಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ಶಾಸಕರು, ಸ್ವಾತಂತ್ರ್ಯ ಬಂದು 7 ದಶಕಗಳ ಬಳಿಕವೂ ಹಲವಾರು ಕುಗ್ರಾಮಗಳು ವಿದ್ಯುತ್​ನಿಂದ ವಂಚಿತವಾಗಿದ್ದವು. ಕುಗ್ರಾಮಗಳ ಕಷ್ಟ ಅರಿತ ಪ್ರದಾನಿ ಮೋದಿ ರೂಪಿಸಿದ ಪಂ.ದೀನದಯಾಳ ಯೋಜನೆಯಿಂದಾಗಿ ಶೇಡಿಗದ್ದೆ ಗ್ರಾಮ ಇಂದು ವಿದ್ಯುತ್ ಸಂಪರ್ಕ ಪಡೆಯುವಂತಾಗಿದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4 ಕೋಟಿ ರೂ. ವೆಚ್ಚದಲ್ಲಿ ವಿದ್ಯುದ್ದೀಕರಣ ನಡೆದಿದೆ ಎಂದರು. ಶೇಡಿಗದ್ದೆ ಗ್ರಾಮಕ್ಕೆ ಈಗಾಗಲೇ 68.11 ಲಕ್ಷ ರೂ. ವೆಚ್ಚದಲ್ಲಿ ಒಂದೂವರೆ ಕಿ.ಮೀ. ಉತ್ತಮ ರಸ್ತೆ ಮಾಡಿದ್ದೇವೆ. ಬೆಳ್ಳಂಗಿ ಬಳಿ ಕಾಲು ಸೇತುವೆ ನಿರ್ವಣಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಜಿ.ಪಂ. ಸದಸ್ಯ ಗಜಾನನ ಪೈ ಮಾತನಾಡಿ, ಮೂಲಸೌಕರ್ಯ ಇಲ್ಲದ ಗ್ರಾಮಗಳಲ್ಲಿ ಯುವಕರು ಮದುವೆ ಮಾಡಿಕೊಳ್ಳಲು ಯಾರೂ ಕನ್ಯೆ ಕೊಡುತ್ತಿರಲಿಲ್ಲ. ಆದರೆ, ಈಗ ಆ ಸಮಸ್ಯೆ ನಿವಾರಣೆಯಾಗುವ ಭರವಸೆ ಇದೆ ಎಂದರು. ಶೇಡಿಗದ್ದೆಯಂತೆಯೇ ಕಲವೆ, ಯಾಣ, ನನ್ನಳ್ಳಿ, ಮೂಡ್ನಳ್ಳಿ, ಬಂಗಣೆಗಳಿಗೂ ವಿದ್ಯುತ್ ಸಂಪರ್ಕ ಕಾಮಗಾರಿ ನಡೆದಿದೆ ಎಂದರು. ಹೆಸ್ಕಾಂ ಎಇ ಎಂ.ಎಂ. ಪಠಾಣ, ಕಾಮಗಾರಿ ನಿರ್ವಹಿಸಿದ ಕಂಪನಿಯ ಮೇಲ್ವಿಚಾರಕ ಸವ್ಯಸಾಚಿ ಇದ್ದರು. ಶೇಡಿಗದ್ದೆಯ ಭಾಸ್ಕರ ಮರಾಠಿ, ನಾಗವೇಣಿ ಮರಾಠಿ, ಸೋಮ ಮರಾಠಿ, ಗಣಪತಿ ಮರಾಠಿ, ಶೇಖರ ಮರಾಠಿ, ದಾಮೋದರ ಮರಾಠಿ, ಹರೀಶ ಮರಾಠಿ, ಲೂಮಾ ಮರಾಠಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಯಿತು.

ಶೇಡಿಗದ್ದೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಪಡೆದಿದ್ದು ಸಣ್ಣ ಕೆಲಸವಲ್ಲ. ಇಲ್ಲಿನ ದಟ್ಟಕಾಡು, ಕಡಿದಾದ ಬೆಟ್ಟದಲ್ಲಿ ಕಚ್ಚಾ ರಸ್ತೆಯಲ್ಲಿ ಪರಿಕರಗಳನ್ನು ಎಳೆದು ಸಾಗಿಸಿ ಕಂಬಗಳನ್ನು ಹುಗಿದು ತಂತಿ ಜೋಡಿಸಿ ವಿದ್ಯುತ್ ಕೊಟ್ಟಿದ್ದು ದೊಡ್ಡ ಸಾಹಸ. ವಿದ್ಯುತ್ ಕೊಟ್ಟ ಎಲ್ಲರಿಗೂ ಕೃತಜ್ಞರಾಗಿದ್ದೇವೆ.

| ಅಶೋಕ ಭಟ್ಟ ಕಬ್ಬರ್ಗಿ ಸ್ಥಳೀಯ

Leave a Reply

Your email address will not be published. Required fields are marked *