ಪಾವಗಡ: ತಾಲೂಕಿನಾದ್ಯಂತ ಈ ಬಾರಿ ಉತ್ತಮ ಮಳೆ ಸುರಿದಿದ್ದು, ಮಳೆಯಾಶ್ರಿತ ಶೇಂಗಾ ಬೆಳೆ ಉತ್ತಮವಾಗಿ ಬಂದಿದೆ. ರೈತರು ರೋಗಗಳು, ಕೀಟಬಾಧೆಯಿಂದ ಬೆಳೆ ರಕ್ಷಿಸಲು ಕ್ರಿಮಿನಾಶಕ ಸಿಂಪಡಿಸಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವಿಜಯಾ ಮೂರ್ತಿ ಹೇಳಿದರು.
ನಾಗಲಮಡಿಕೆ ಹೋಬಳಿ ಪಳವಳ್ಳಿಯ ರೈತರ ಹೊಲದಲ್ಲಿ ಗುರುವಾರ ಶೇಂಗಾ ಬೆಳೆ ವೀಕ್ಷಿಸಿ ಮಾತನಾಡಿದರು. ಈ ಬಾರಿ ಮಳೆಯಾಶ್ರಿತ ಶೇಂಗಾ ಬಿತ್ತನೆ 62 ಸಾವಿರ ಕ್ವಿಂಟಾಲ್ ಗುರಿ ಹೊಂದಲಾಗಿತ್ತು. ಕಳೆದ ಎರಡು ವರ್ಷಗಳಿಗೆ ಹೊಲಿಕೆ ವಾಡಿದರೆ ಈ ಬಾರಿ 49,613 ಕ್ವಿಂಟಾಲ್ ಶೇಂಗಾ ಮತ್ತು 12 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದ್ದು, ಸಕಾಲದಲ್ಲಿ ಉತ್ತಮ ಮಳೆಯಾದ್ದರಿಂದ ಬೆಳೆಯೂ ಕೂಡ ಚೆನ್ನಾಗಿದೆ. ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಶೇಂಗಾಕ್ಕೆ ಹಸಿರು ಹುಳುಕಾಟ, ಎಲೆ ಚುಕ್ಕೆ ರೋಗ ಹೆಚ್ಚಾಗುತ್ತಿರುವ ಕಾರಣ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಕ್ರಿಮಿನಾಶಕ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಜಾಹೀರ್ ಬಾಷಾ ವಾತನಾಡಿ, ಶೇಂಗಾ ಬೆಳೆ ಸಂರಕ್ಷಣೆಗೆ ಎಲೆ ಚುಕ್ಕೆ ರೋಗಕ್ಕೆ ಪ್ರತಿ ಲೀಟರ್‌ಗೆ 2 ಗ್ರಾಂ ಕ್ಲೋರೋತಾಲೊನಿಲ್ ಬೆರೆಸಿ ಸಿಂಪಡಿಸಬೇಕು. ಕುಡಿ ನಂಜು ರೋಗಕ್ಕೆ 1.7 ಎಂಎಲ್ ಡಿಮೈತೋಟ್ ಜತೆಗೆ 2 ಗ್ರಾಂ ಲು ಪೋಷಕಾಂಶಗಳನ್ನು ಮಿಶ್ರಣ ವಾಡಿ ಸಿಂಪಡಿಸುವುದು ಹಾಗೂ ಹಸಿರು ಹುಳು ನಿಯಂತ್ರಣಕ್ಕೆ ಕ್ಲೋರೋಪೈರಿಪಾಸ್ ಅಥವಾ ಕ್ವಿನಾಲ್ ಪಾಸ್ 2 ಎಂಎಲ್ ಪ್ರತಿ ಲೀಟರ್‌ಗೆ ಬೆರೆಸಿ ಸಿಂಪಡಿಸಬೇಕು ಎಂದು ಮಾಹಿತಿ ನೀಡಿದರು.
ನಾಗಲಮಡಿಕೆ ಕೃಷಿ ಅಧಿಕಾರಿಗಳಾದ ಎಸ್.ಶಂಷಾದ್ ಉನ್ನಿಸಾ, ಮಧು, ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಆದೀಕ್ಷಕರಾದ ಮಜರ್ ಆಲಿ ಇದ್ದರು.