ಶೆಟ್ಟಿಹಳ್ಳಿ ವ್ಯಕ್ತಿಗೆ ಕೆಎಫ್​ಡಿ ಸೋಂಕು

ಶಿವಮೊಗ್ಗ: ತಾಲೂಕಿನ ಶೆಟ್ಟಿಹಳ್ಳಿಯ ವ್ಯಕ್ತಿಯೊಬ್ಬರು ಕೆಎಫ್​ಡಿ ಸೋಂಕಿಗೆ ತುತ್ತಾಗಿದ್ದಾರೆ. ಮಂಜು ಎಂಬುವರಿಗೆ ಕೆಎಫ್​ಡಿ ಸೋಂಕು ತಗುಲಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ನಗರ ಹೊರವಲಯದಲ್ಲಿರುವ ಶೆಟ್ಟಿಹಳ್ಳಿ ಗ್ರಾಮದ ಮಂಜು ತೀರ್ಥಹಳ್ಳಿ ತಾಲೂಕಿನ ಬಾಳೆಕೊಪ್ಪ ವ್ಯಾಪ್ತಿಯ ಅರಣ್ಯದಲ್ಲಿ ಸೀಗೆಕಾಯಿ ಕೊಯ್ಯಲು ತೆರಳುತ್ತಿದ್ದ. ಕಳೆದ 3 ದಿನಗಳ ಹಿಂದಷ್ಟೇ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ಪರೀಕ್ಷೆಯಲ್ಲಿ ಕೆಎಫ್​ಡಿ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಡಿಎಚ್​ಒ ಡಾ. ರಾಜೇಶ್ ಸುರಗಿಹಳ್ಳಿ, ತಾಲೂಕಿಗೆ ಕೆಎಫ್​ಡಿ ಕಾಲಿಟ್ಟಿಲ್ಲ. ಬದಲಾಗಿ ಶೆಟ್ಟಿಹಳ್ಳಿಯ ಮಂಜು ಎಂಬಾತನಿಗೆ ಜ್ವರ ಕಾಣಿಸಿಕೊಂಡಿತ್ತು. ತಪಾಸಣೆ ವೇಳೆ ಕೆಎಫ್​ಡಿ ಸೋಂಕು ದೃಢಪಟ್ಟಿದ್ದು, ಆತನಿಗೆ ಮಣಿಪಾಲ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಶೆಟ್ಟಿಹಳ್ಳಿಯಲ್ಲಿ 80 ಮನೆಗಳಿದ್ದು, ಮಂಜು ಹೊರತಾಗಿ ಯಾರೊಬ್ಬರಿಗೂ ಕೆಎಫ್​ಡಿ ತಗುಲಿಲ್ಲ. ಈಗಾಗಲೇ ಶೆಟ್ಟಿಹಳ್ಳಿಯಲ್ಲಿ 2 ಬಾರಿ ವ್ಯಾಕ್ಸಿನೇಷನ್ ಮಾಡಿದ್ದು, ಆತ ಬಾಳೆಕೊಪ್ಪ ವನ್ಯಜೀವಿ ವಿಭಾಗದ ಅರಣ್ಯಕ್ಕೆ ತೆರಳಿದಾಗ ಉಣುಗು ಕಚ್ಚಿರುವ ಸಾಧ್ಯತೆ ಇದೆ ಎಂದರು.

Leave a Reply

Your email address will not be published. Required fields are marked *