ಎನ್.ಆರ್.ಪುರ: ರೋಗಿಗಳ ಕಾಯಿಲೆ ಗುಣಪಡಿಸುವಲ್ಲಿ ಶುಶ್ರೂಷಕಿಯರ ಪಾತ್ರ ಪ್ರಮುಖವಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೆ.ಒ.ನರಸಿಂಹಮೂರ್ತಿ ಹೇಳಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶುಶ್ರೂಷಕಿಯರು ತಾಳ್ಮೆಯಿಂದ ರೋಗಿಗಳ ಆರೈಕೆ ಮಾಡಿದರೆ ಅವರ ಸೇವೆಯನ್ನು ಜನರು ಗುರುತಿಸುತ್ತಾರೆ. ಸಂಘ ಸಂಸ್ಥೆಗಳು ಶುಶ್ರೂಷಕಿಯರ ಸೇವೆ ಗುರುತಿಸಿ ಸನ್ಮಾನ ಮಾಡುತ್ತಿರುವುದು ಉತ್ತಮ ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ ಎಂದರು.
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಕರೊನಾ ಸಂದರ್ಭದಲ್ಲಿ ಶುಶ್ರೂಷಕಿಯರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದರು ಎಂದರು.
ಅರಿವಳಿಕೆ ತಜ್ಞ ಡಾ. ವೀರಪ್ರಸಾದ್ ಮಾತನಾಡಿ, ಸಮಾಜದಲ್ಲಿ ಆರೋಗ್ಯ ಇಲಾಖೆ ಬಗ್ಗೆ ನಕಾರಾತ್ಮಕ ಭಾವನೆಗಳು ಹೆಚ್ಚಾಗಿದ್ದು ಯಾವುದೇ ಸಂಘ, ಸಂಸ್ಥೆಗಳು ಆರೋಗ್ಯ ಇಲಾಖೆಯ ಸೇವೆ ಗುರುತಿಸುವುದು ಅಪರೂಪ. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅವರು ಶುಶ್ರೂಷಕಿಯರ ಸೇವೆ ಗುರುತಿಸಿ ಸನ್ಮಾನಿಸುತ್ತಿರುವುದು ಸ್ಫೂರ್ತಿ ನೀಡುತ್ತದೆ ಎಂದರು.
ಶುಶ್ರೂಷಕಿಯರಾದ ಕೆ.ವಿಆ್ಯನಿ, ಸೂನಾ ಮ್ಯಾಥ್ಯೂ, ದೀಪ್ತಿ ಆಂಥೋಣಿ, ಸೌಮ್ಯಾ ಸ್ಕರಿಯಾ, ಬಿ.ಎಂ.ಸ್ವಾಗತ್, ಜೋಯಲ್‌ಪೌಲ್ ಅವರನ್ನು ಗೌರವಿಸಲಾಯಿತು.
ನೇತ್ರ ತಜ್ಞೆ ಡಾ. ಶ್ರೀರಂಜಿನಿ, ಡಾ. ಪ್ರಭು, ಕೃಷ್ಣಮೂರ್ತಿ, ಕೆ.ಆರ್.ನಾಗರಾಜ್ ಪುರಾಣಿಕ್, ವಿದ್ಯಾ ನಂದ್‌ಕುಮಾರ್, ಪಿ.ಬಿ.ಬೇಬಿ, ಮಧು, ಜಿನೂ, ಜಯಾ ಇದ್ದರು.