ಶುದ್ಧ ನೀರಾದ್ರೆ ಪಿಐಎಲ್ ವಾಪಸ್ !

ಕೋಲಾರ: ಕೆಸಿ ಮತ್ತು ಎಚ್​ಎನ್ ವ್ಯಾಲಿಯಿಂದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಶುದ್ಧ ನೀರು ಹರಿಸುತ್ತಿರುವ ಕುರಿತು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ಗೆ ಸೂಕ್ತ ದಾಖಲೆ ಒದಗಿಸಿದಲ್ಲಿ ಪಿಐಎಲ್ ಅರ್ಜಿ ಹಿಂದಕ್ಕೆ ಪಡೆಯಲು ಸಿದ್ಧ ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೈಗಾರಿಕೆಗಳ ರಾಸಾಯನಿಕ ಮಿಶ್ರಿತ ನೀರನ್ನು 2 ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುವುದು ಪರಿಸರ, ಜೀವರಾಶಿಗಳಿಗೆ ಮಾರಕ ಎಂಬ ಭಾರತೀಯ ವಿಜ್ಞಾನ ಸಂಸ್ಥೆ ವರದಿ ಆಧರಿಸಿ ಶುದ್ಧ ನೀರಿಗೆ ಕೋರ್ಟ್ ಮೊರೆ ಹೋಗಿದ್ದೇವೆಯೇ ಹೊರತು, ಯೋಜನೆ ನಿಲ್ಲಿಸಿ ಜನರಿಗೆ ತೊಂದರೆ ನೀಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನೀರು ಗುಣಮಟ್ಟವಿಲ್ಲವೆಂದು ಪ್ರಮಾಣಪತ್ರ ನೀಡಿದ್ದರೂ, ಸರ್ಕಾರ ಖಾಸಗಿ ಸಂಸ್ಥೆ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಸಿ ತಡೆಯಾಜ್ಞೆ ತೆರವುಗೊಳಿಸಿದೆ. ಶುದ್ಧ ನೀರು ಹರಿಸಲು ಸರ್ಕಾರ ಬದ್ಧತೆ ತೊರದೇ ಇದ್ದುದರಿಂದ ಸುಪ್ರೀಂ ಕೋರ್ಟ್​ಗೆ ಹೋಗಬೇಕಾಯಿತು ಎಂದರು.

ನೀರು ಶುದ್ಧೀಕರಿಸಲು ಆತ್ಯಾಧುನಿಕ ಎಸ್​ಟಿಪಿ ಘಟಕ ಅಳವಡಿಸಿ 400 ಎಂಎಲ್​ಡಿ ನೀರನ್ನು 126 ಕೆರೆಗಳಿಗೆ ಕಾಲ ಮಿತಿಯಲ್ಲಿ ಹರಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಯ ನೀರಾವರಿ ಹೋರಾಟ ಸಮಿತಿ ಪರವಾಗಿ ಏಕೈಕ ವ್ಯಕ್ತಿ ಪುಟ್ಟರಾಜು(ಮಾಹಿತಿ ಕೇಳಿದರು), ಯುವಶಕ್ತಿ ರಾಜ್ಯಾಧ್ಯಕ್ಷ ಶಿವಪ್ರಕಾಶ್, ವೆಂಕಟಪ್ಪ, ಮಳ್ಳೂರು ಹರೀಶ್, ವೆಂಕಟೇಶ್, ಮನೋಹರ್, ಸುಬ್ರಮಣಿ, ಲಕ್ಷ್ಮೀಕಾಂತ್ ಇದ್ದರು.

ಯಾರಿಂದಲೂ ಹಣ ಪಡೆದಿಲ್ಲ: ನನ್ನ ಪ್ರತಿಕೃತಿ ದಹಿಸಿರುವವರು ಯೋಜನೆಯ ಡಿಪಿಆರ್ ಓದಿ ನಂತರ ಹೋರಾಟ ಮಾಡಲಿ, ಹೋರಾಟಕ್ಕೆ ಯಾರಿಂದಲೂ ಹಣ ಪಡೆದಿಲ್ಲ ಆರ್.ಆಂಜನೇಯರೆಡ್ಡಿ ಉತ್ತರಿಸಿದರು.

ಮೂರು ಹಂತದಲ್ಲಿ ನೀರು ಶುದ್ಧಿಕರಿಸಬೇಕೆಂದು ಅವಳಿ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದೇನೆ, ಮಾಜಿ ಸಿಎಂ ಸಿದ್ದರಾಮಯ್ಯ, ಹಾಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಭೇಟಿಯಾಗಿ ಒತ್ತಾಯಿಸಿದ್ದರೂ ಬೇಡಿಕೆ ಈಡೇರಲಿಲ್ಲವಾದ್ದರಿಂದ ಕೋರ್ಟ್ ಮೊರೆ ಹೋಗಬೇಕಾಯಿತು.

| ಆರ್.ಆಂಜನೇಯರೆಡ್ಡಿ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ

ಪ್ರಶಾಂತ ಭೂಷಣ್ ಹಣ ಪಡೆದಿಲ್ಲ: ಸುಪ್ರೀಂಕೋರ್ಟ್​ನಲ್ಲಿ ನಮ್ಮ ಪರ ವಾದ ಮಂಡಿಸಲು ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್ ಹಣ ಪಡೆದಿಲ್ಲ. ಯೋಜನೆ ಸಂಬಂಧ ಸೂಕ್ತ ದಾಖಲೆಯೊಂದಿಗೆ ಮನವರಿಕೆ ಮಾಡಿಕೊಟ್ಟ ನಂತರ ಸಾಮಾಜಿಕ ಬದ್ಧತೆಯಡಿ ಉಚಿತವಾಗಿ ವಾದ ಮಂಡಿಸುತ್ತಿದ್ದಾರೆ ಎಂದು ಆರ್.ಆಂಜನೇಯರೆಡ್ಡಿ ಹೇಳಿದರು.

ಸೂಕ್ತ ದಾಖಲೆ ಸಲ್ಲಿಸಲು ಒತ್ತಾಯ: ಸುಪ್ರೀಂಕೋರ್ಟ್​ಗೆ ಸೂಕ್ತ ದಾಖಲೆ ಸಲ್ಲಿಸಿ ಕೆ.ಸಿ.ವ್ಯಾಲಿ ನೀರಿನ ಶುದ್ಧತೆ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಜಿಲ್ಲಾಧಿಕಾರಿ ಮೂಲಕ ಸಿಎಂ ಮನವಿ ರವಾನಿಸಿತು.

ಯೋಜನೆ ಗಾತ್ರವನ್ನು 800 ಕೋಟಿಯಿಂದ 1450 ರೂ.ಗೆ ಹೆಚ್ಚಿಸಿದ್ದರೂ 3ನೇ ಹಂತದಲ್ಲಿ ನೀರು ಶುದ್ಧೀಕರಿಸದೆ, ಹರಿಸಿರುವುದು ಸರಿಯಲ್ಲ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಪದಾಧಿಕಾರಿಗಳಾದ ದೊಡ್ಡ ಕುರುಬರಹಳ್ಳಿ ಶಂಕರಪ್ಪ, ಶಿಳ್ಳಂಗೆರೆ ವೇಣುಗೋಪಾಲ್, ತೇರಹಳ್ಳಿ ಚಂದ್ರಪ್ಪ, ರಾಜಪ್ಪ, ಬೈರಪ್ಪ, ದಿನ್ನಹಳ್ಳಿ ಚಂದ್ರಪ್ಪ ಇದ್ದರು.

ಜಿಲ್ಲಾಡಳಿತದ ಎದುರು ಪ್ರತಿಭಟನೆ: ಕೆ.ಸಿ.ವ್ಯಾಲಿ ಅಡ್ಡಿ ಆತಂಕಗಳನ್ನು ದೂರ ಮಾಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯೂ ಜಿಲ್ಲಾಡಳಿತ ಭವನದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಎಸ್.ಜಿ ವೀರಭದ್ರಸ್ವಾಮಿ, ಸರ್ಕಾರ ನೀರಿನ ಗುಣಮಟ್ಟದ ದಾಖಲೆಗಳನ್ನು ಸಲ್ಲಿಸಿ ತಡೆಯಾಜ್ಞೆ ತೆರವುಗೊಳಿಸಬೇಕೆಂದು ಒತ್ತಾಯಿಸಿ ಡಿಸಿ ಜೆ.ಮಂಜುನಾಥ್​ಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಅಬ್ಬಣಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಪೆಮ್ಮಶೆಟ್ಟಿಹಳ್ಳಿ ಎಂ.ಮುನಿರಾಜು, ಪದಾಧಿಕಾರಿಗಳಾದ ಶ್ಯಾಮಣ್ಣ, ಹೊಳಲಿ ಹೊಸೂರು ಚಂದ್ರಪ್ಪ, ದಿನ್ನೆಹೊಸಹಳ್ಳಿ ರಮೇಶ್, ಉಮಾಶಂಕರ್, ನಾಗಲಾಪುರ ವೀರೇಂದ್ರ ಪಾಟೀಲ್, ಜಿ.ವಿ ದ್ಯಾವಪ್ಪ, ಕ್ಯಾಲನೂರು ಅಬ್ದುಲ್ ಬಷೀರ್, ಪ್ರಕಾಶಯ್ಯ, ರಮೇಶ್, ಬಸವರಾಧ್ಯ ಇದ್ದರು.

ಕೆಸಿ ವ್ಯಾಲಿಗೆ ಮುನಿಯಪ್ಪ ಅಡ್ಡಗಾಲು: ಕೋಲಾರ: ಕೆಸಿ ವ್ಯಾಲಿ ಯೋಜನೆಯಿಂದ ಸ್ಪೀಕರ್ ರಮೇಶ್ ಕುಮಾರ್​ಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಸಂಸದ ಕೆ.ಎಚ್.ಮುನಿಯಪ್ಪ ಅವರು ನೀರಾವರಿ ಹೋರಾಟಗಾರ ಆರ್.ಆಂಜನೇಯರೆಡ್ಡಿ ಅವರನ್ನು ಎತ್ತಿಕಟ್ಟಿ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿಸಿದ್ದಾರೆಂದು ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ ಆರೋಪಿಸಿದರು.

ಮುನಿಯಪ್ಪ 7 ಬಾರಿ ಸಂಸದರಾದರೂ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ, ಜಿಲ್ಲೆಯ ಸಮಸ್ಯೆ ಅರಿತು ರಮೇಶ್ ಕುಮಾರ್ ಯೋಜನೆ ಜಾರಿಗೆ ಶ್ರಮಿಸಿದ್ದಾರೆ. ಇದನ್ನು ಸಹಿಸದೆ ಹಿಂಬಾಗಿಲಿನಿಂದ ಯೋಜನೆಗೆ ಅಡ್ಡಗಾಲು ಹಾಕಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಂಸದರು ಮಗುವನ್ನು ಚಿವುಟಿ ತೊಟ್ಟಲು ತೂಗುವ ಕೆಲಸ ಮಾಡುತ್ತಿದ್ದಾರೆ. ಕೆಸಿ ವ್ಯಾಲಿ ವಿಚಾರದಲ್ಲಿ ಹಸ್ತಕ್ಷೇಪ ಮಾಡದಿದ್ದಲ್ಲಿ ಆಣೆ ಮಾಡಲಿ ಎಂದು ಸವಾಲು ಹಾಕಿದರು.

ವಕೀಲ ಹಾರೋಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನದ ಬಗ್ಗೆ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮುಂದಾಳತ್ವ ವಹಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸಂಸದ ಕೆ.ಎಚ್. ಮುನಿಯಪ್ಪ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಹೇಳಿರುವುದು ಬೇರೆಯವರನ್ನು ಹಾಳುಬಾವಿಗೆ ತಳ್ಳಿ ಆಳ ನೋಡಿದಂತಾಗಿದೆ. ಈ ವಿಷಯವಾಗಿ ಬೆಂಬಲಿಗರ ಮೂಲಕ ಖರ್ಗೆಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದ ಸಂದೇಶ ಪ್ರಚೋದಿಸಿರುವುದು ಖಂಡನೀಯ ಎಂದರು.