ಶುದ್ಧ ಕುಡಿಯುವ ನೀರಿನ ಘಟಕ ಸ್ಥಳಾಂತರಕ್ಕೆ ಚನ್ನಳ್ಳಿ ಜನರ ಒತ್ತಾಯ

ಹಿರೇಕೆರೂರ: ತಾಲೂಕಿನ ಚನ್ನಳ್ಳಿ ಗ್ರಾಮ ಪಂಚಾಯಿತಿ ಎದುರು ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕವು ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದ್ದು, ಸಂಪೂರ್ಣ ಹಾಳಾಗುವ ಲಕ್ಷಣ ಗೋಚರಿಸುತ್ತಿದೆ.

ತಾಲೂಕು ಕೇಂದ್ರದಿಂದ 3 ಕಿ.ಮೀ. ಅಂತರದಲ್ಲಿರುವ ಚನ್ನಳ್ಳಿ ಗ್ರಾಮದಲ್ಲಿ ತಾಂಡಾ, ಪ್ಲಾಟ್ ಹಾಗೂ ಹಳೇ ಊರು ಎಂಬ ಪ್ರದೇಶಗಳಿವೆ. ತಾಂಡಾದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸುಸ್ಥಿತಿಯಲ್ಲಿದ್ದು ಬಳಕೆಯಾಗುತ್ತಿದೆ. 2015-16ನೇ ಸಾಲಿನಲ್ಲಿ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಗ್ರಾಪಂ ಎದುರು 7.03 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿರುವ ಘಟಕ, ಉದ್ಘಾಟನೆಯಾದ ಮೂರೇ ದಿನಕ್ಕೆ ಕೆಟ್ಟಿದ್ದು, ಅಂದಿನಿಂದ ಈವರೆಗೂ ಘಟಕದ ಸ್ಥಿತಿ ಹಾಗೆಯೇ ಇದೆ.

ಶುದ್ಧ ಕುಡಿಯುವ ನೀರಿನ ಘಟಕ ನಿರ್ವಿುಸಿದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಮುಂದಿನ ನಿರ್ವಹಣೆಗಾಗಿ ಗ್ರಾಪಂ ಇಲಾಖೆಗೆ ಹಸ್ತಾಂತರಿಸಿದೆ. ಆದರೆ, ಗ್ರಾ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ಘಟಕ ದುರಸ್ತಿಯಲ್ಲಿದೆ. ಘಟಕದ ಸುತ್ತ ಗಿಡಗಂಟಿ ಬೆಳೆದು, ವಿಷ ಜಂತುಗಳ ವಾಸಸ್ಥಳವಾಗಿ ಮಾರ್ಪಟ್ಟಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ದೂರದೃಷ್ಟಿ ಇಟ್ಟುಕೊಂಡು ನಿರ್ವಿುಸಲಾದ ಶುದ್ಧ ಕುಡಿಯುವ ನೀರಿನ ಘಟಕ ವಿನಾಕಾರಣ ಸ್ಥಗಿತಗೊಂಡಿರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳಾಂತರಕ್ಕೆ ಒತ್ತಾಯ: ಚನ್ನಳ್ಳಿ ಪ್ಲಾಟ್, ಹಳೇ ಊರು ಸೇರಿ 1100 ಮನೆಗಳಿದ್ದು, 1572 ಜನಸಂಖ್ಯೆ ಇದೆ. ಈ ಜನತೆಯ ಬಳಕೆಗೆ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಪ್ರಾರಂಭದಲ್ಲಿ ಗ್ರಾಪಂ ಎದುರು ಇದನ್ನು ಸ್ಥಾಪಿಸಿದರೆ, ಊರು ಬೆಳೆದಂತೆ ಅನುಕೂಲವಾಗುತ್ತದೆ ಹಾಗೂ ಪ್ಲಾಟ್ ಜನರಿಗೆ ಅನುಕೂಲವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಹಳೇ ಊರಿಗೆ ಈ ಘಟಕ ಬರೋಬ್ಬರಿ 1.5 ಕಿ.ಮೀ. ದೂರದಲ್ಲಿದೆ. ಪ್ಲಾಟ್​ನ ಜನತೆ ತಾಂಡಾದಲ್ಲಿರುವ ಘಟಕದಲ್ಲಿ ನೀರು ತರಬಹುದಾಗಿದೆ. ಆದರೆ, ಹಳೇ ಊರಿಗೆ ಇದು ದೂರವಾಗುವುದರಿಂದ ಇದನ್ನು ಗ್ರಾಮಕ್ಕೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಪಂಗೆ ಹಸ್ತಾಂತರಿಸಿದ್ದು, ಅದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಲ್ಲಿ ಗ್ರಾಪಂ ತಪ್ಪಾಗುತ್ತದೆ. ಒಂದು ವೇಳೆ ಇದನ್ನು ಹಸ್ತಾಂತರಿಸದೆ ಹೋಗಿದ್ದರೆ, ನಮ್ಮ ಹೊಣೆ ಇರುತ್ತಿತ್ತು. ಈ ಬಗ್ಗೆ ಪರೀಶಿಲಿಸಿ, ಕೆಟ್ಟು ಹೋದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. | ಶ್ರೀನಿವಾಸ ಎಚ್.ಟಿ., ತಾಪಂ ಇಒ

ಸಾರ್ವಜನಿಕರ ಒತ್ತಾಯದಂತೆ ಘಟಕ ಸ್ಥಳಾಂತರಿಸಬೇಕು ಎಂದು ಗ್ರಾಪಂ ಅಧ್ಯಕ್ಷರು, ಸದಸ್ಯರು ಸೂಚಿಸಿದ್ದಾರೆ. ಈ ಘಟಕಕ್ಕೆ ನೀರು ಪೂರೈಸುವ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿಲ್ಲ. ಇದರಿಂದ ಪದೇ ಪದೆ ಕೆಟ್ಟು ಹೋಗುತ್ತಿದೆ. ಕೆಟ್ಟು ಹೋದ ಯಂತ್ರ ಸರಿಪಡಿಸಿ ಕೂಡಲೆ ಈ ಘಟಕ ಆರಂಭಿಸಲಾಗುವುದು. | ಮುತ್ತಪ್ಪ ಎಸ್., ಚನ್ನಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ

2015-16ನೇ ಸಾಲಿನಲ್ಲಿ ನಮ್ಮ ಇಲಾಖೆಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಿುಸಿ ಈಗಾಗಲೇ ಗ್ರಾಪಂ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದರ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಅವರದ್ದೇ ಆಗಿದೆ. | ಜಿ. ಸಿದ್ದೇಶ ಸಹಾಯಕ ಇಂಜಿನಿಯರ್, ಕೆಆರ್​ಐಡಿಎಲ್

ಶುದ್ಧ ನೀರಿನ ಘಟಕ ದುರಸ್ತಿಗೊಳಿಸುವಂತೆ ಹಾಗೂ ಸ್ಥಳಾಂತರಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಇಲ್ಲಿಯವರೆಗೆ ಪ್ರಯೋಜನವಾಗಿಲ್ಲ. ಶುದ್ಧ ಕುಡಿಯುವ ನೀರು ದೊರಕದೆ ಇರುವುದರಿಂದ ದಿನದಿಂದ ದಿನಕ್ಕೆ ಸಾರ್ವಜನಿಕರ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. | ಧರಣೇಶ ಗೊದೇರ ಸ್ಥಳೀಯ

Leave a Reply

Your email address will not be published. Required fields are marked *