ಶುದ್ಧ ಕುಡಿಯುವ ನೀರಿನ ಘಟಕ ತುರ್ತಾಗಿ ಆರಂಭಿಸಿ

ಹುಬ್ಬಳ್ಳಿ:ಬರಗಾಲ ಆವರಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ತಾಲೂಕಾ ಅಧಿಕಾರಿಗಳು, ಪಿಡಿಒಗಳು ತುರ್ತಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಬೇಕು ಎಂದು ಜಿ.ಪಂ. ಸದಸ್ಯೆ ಚೈತ್ರಾ ಶಿರೂರ ಅಧಿಕಾರಿಗಳಿಗೆ ಸೂಚಿಸಿದರು.

ಮಿನಿ ವಿಧಾನಸೌಧ ತಾ.ಪಂ. ಸಭಾಭವನದಲ್ಲಿ ಬುಧವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸಮಸ್ಯೆ ಮನವರಿಕೆ ಮಾಡಿದ ಅವರು, ಕೆಲವು ಕಡೆಗಳಲ್ಲಿ ಕೆರೆ ನೀರನ್ನು ಕುಡಿಯುತ್ತಿದ್ದಾರೆ. ನೀರನ್ನು ಪರೀಕ್ಷಿಸಬೇಕು. ಬಂಡಿವಾಡ, ಪಾಲಿಕೊಪ್ಪ, ಮಂಟೂರು, ಪರಸಾಪುರ, ಪಾಳೆ, ಬೊಮ್ಮಸಮುದ್ರ, ಕುರಡಿಕೇರಿ, ಅರಳಿಕಟ್ಟಿ, ಛಬ್ಬಿ, ಅಗಡಿ ಸೇರಿದಂತೆ ಹಲವು ಕಡೆ ಕುಡಿಯುವ ನೀರಿನ ಕೊರತೆೆಯಾಗುತ್ತಿದೆ. ತ್ವರಿತಗತಿಯಲ್ಲಿ ಸಮಸ್ಯೆ ನಿವಾರಿಸಬೇಕು ಎಂದು ತಾಕೀತು ಮಾಡಿದರು. ಸದಸ್ಯರು ಇದಕ್ಕೆ ಧ್ವನಿಗೂಡಿಸಿ ಬಂದ್ ಆದ ಬೋರ್​ವೆಲ್​ಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಘಟಕದ ಕಾರ್ಯ ನಿರ್ವಾಹಕ ಇಂಜಿನಿಯರ್ ಡಿ.ಆರ್. ಗುಂಡಳ್ಳಿ ಪ್ರತಿಕ್ರಿಯಿಸಿ, ಜುಲೈ 1ರಿಂದ ಆರ್.ಒ. ಘಟಕಗಳನ್ನು ಆರಂಭಿಸುವುದಕ್ಕೆ ಟೆಂಡರ್ ಕರೆಯುತ್ತೇವೆ. ತುರ್ತು ಇದ್ದ ಕಡೆ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದರು.

ಆರ್​ಒ ಘಟಕಗಳ ಆರಂಭಿಸುವುದಕ್ಕೆ ಈ ಹಿಂದೆ ಲ್ಯಾಂಡ್ ಆರ್ವಿು ಎಜೆನ್ಸಿಗೆ ಟೆಂಡರ್ ನೀಡಲಾಗಿತ್ತು. ಏಜೆನ್ಸಿ ಅಧಿಕಾರಿಗಳು ಘಟಕಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಅಧಿಕಾರಿ ಲಕ್ಷ್ಮಣ ನಾಯಕ ಅವರಂಥೂ ಸದಸ್ಯರ ದೂರುಗಳನ್ನು ಆಲಿಸುವುದಿಲ್ಲ ಎಂದು ಸದಸ್ಯರು ಆರೋಪಿಸಿದರು. ಈ ವೇಳೆ ಸಭೆಗೆ ಗೈರಾಗಿದ್ದ ಲಕ್ಷ್ಮಣ ನಾಯಕ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇಂಗ್ಲಿಷ್ ವರದಿಗೆ ಆಕ್ರೋಶ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಇಂಗ್ಲಿಷ್​ನಲ್ಲಿ ಮಾಹಿತಿ ಒದಗಿಸಿದ್ದರಿಂದ ಸದಸ್ಯರು ಆಕ್ರೋಶಕೊಂಡರು. ಕರ್ನಾಟಕದಲ್ಲಿ ಇದ್ದೀರಿ. ಕನ್ನಡದಲ್ಲಿ ಮಾಹಿತಿ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಮುಂದಿನ ಬಾರಿ ಕನ್ನಡದಲ್ಲೇ ವರದಿ ಸಿದ್ಧಪಡಿಸುತ್ತೇನೆಂದು ಅಧಿಕಾರಿ ತಿಳಿಸಿದರು.

ಬೀರಣ್ಣವರ ಆಯ್ಕೆ

ಹುಬ್ಬಳ್ಳಿ ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಇಂಗಳಹಳ್ಳಿ ಕ್ಷೇತ್ರದ ಬಸವರಾಜ ಗೂಳಪ್ಪ ಬೀರಣ್ಣವರ ಅವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *