ಶುಚಿತ್ವ ಇಲ್ಲದ ಹೋಟೆಲ್​ಗಳಿಗೆ ಎಚ್ಚರಿಕೆ

ಧಾರವಾಡ: ಆಹಾರದ ಗುಣಮಟ್ಟ ನಿರ್ವಹಿಸದಿರುವುದು, ಶುಚಿತ್ವ ಇಲ್ಲದಿರುವುದು ಹಾಗೂ ಪ್ಲಾಸ್ಟಿಕ್ ಬಳಕೆಯ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರು, ನಗರದ ಬೇಕರಿ, ಹೋಟೆಲ್, ಕಿರಾಣಿ ಅಂಗಡಿಗಳು, ಎಗ್ ರೈಸ್ ಸೆಂಟರ್​ಗಳ ಮೇಲೆ ಸೋಮವಾರ ದಾಳಿ ನಡೆಸಿ ಬಿಸಿ ಮುಟ್ಟಿಸಿದರು.

ವಲಯ ಕಚೇರಿ 1ರ ವ್ಯಾಪ್ತಿಯ 17ನೇ ವಾರ್ಡ್ ನ ಶ್ರೀನಗರ ಕ್ರಾಸ್ ಬಳಿ ಅಂಗಡಿಗಳ ಮೇಲೆ ಪಾಲಿಕೆಯ ಆರೋಗ್ಯ ನಿರೀಕ್ಷಕಿ ಪದ್ಮಾವತಿ ತುಂಬಗಿ ಅವರ ನೇತೃತ್ವದ ತಂಡ ದಾಳಿ ನಡೆಸಿತು. ಹೋಟೆಲ್ ಡಾಲ್ಪಿನ್, ಶಬರಿ, ಸನಾ ಎಗ್​ರೈಸ್ ಸೆಂಟರ್, ಸ್ವಾಮಿ ಖಾನಾವಳಿಗಳ ಮೇಲೆ ದಾಳಿ ನಡೆಸಿ ಆಹಾರದ ಗುಣಮಟ್ಟ ಪರಿಶೀಲಿಸಿದರು.

ಸನಾ ಎಗ್​ರೈಸ್ ಸೆಂಟರ್​ನಲ್ಲಿ 1.60 ಕೆಜಿ ಪ್ಲಾಸ್ಟಿಕ್ ಪತ್ತೆ ಹಚ್ಚಿದ ಅಧಿಕಾರಿಗಳ ತಂಡ, ಮಾಲೀಕನಿಗೆ 5,000 ರೂ. ದಂಡ ವಿಧಿಸಿದರು. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿದರು. ಸ್ವಾಮಿ ಖಾನಾವಳಿಯಲ್ಲಿ 200 ಗ್ರಾಂ ಪ್ಲಾಸ್ಟಿಕ್ ಪತ್ತೆಯಾಗಿದ್ದರಿಂದ

500 ರೂ. ದಂಡ ವಿಧಿಸಿದರು. ಹೋಟೆಲ್​ಗಳಲ್ಲಿ ಆಹಾರ ಪದಾರ್ಥಗಳನ್ನು ತೆರೆದಿಡದಂತೆ ಸೂಚಿಸಿ ಶುಚಿತ್ವ ಕಾಪಾಡಬೇಕು ಎಂದು ನೋಟಿಸ್ ನೀಡಿದರು. ಗ್ರಾಹಕರಿಗೆ ಫಿಲ್ಟರ್ ನೀರು ಪೂರೈಸಬೇಕು ಎಂದೂ ಅಂಗಡಿಗಳ ಮಾಲೀಕರಿಗೆ ಸೂಚಿಸಿದರು.

ಕಠಿಣ ಕ್ರಮದ ಎಚ್ಚರಿಕೆ : ಆರೋಗ್ಯ ನಿರೀಕ್ಷಕಿ ಪದ್ಮಾವತಿ ತುಂಬಗಿ ಅವರು ದಾಳಿ ಕುರಿತು ಪ್ರತಿಕ್ರಿಯಿಸಿ, ಹೋಟೆಲ್ ಮತ್ತು ಬೇಕರಿಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಮತ್ತು ಕುಡಿಯುವ ನೀರಿನ ಬಗ್ಗೆ ದೂರುಗಳು ಬಂದಿದ್ದವು. ಆ ಬಗ್ಗೆ ತಪಾಸಣೆ ನಡೆಸಲಾಗಿದೆ. ಸ್ವಚ್ಛತೆ ಕಾಪಾಡದಿದ್ದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.

Leave a Reply

Your email address will not be published. Required fields are marked *