ಶೀತ ಓಡಿಸುವ ಕಪ್ಪು ವೈದ್ಯ

ಭಾರತೀಯ ಪರಂಪರೆಯಲ್ಲಿ ಕಪ್ಪು ಹೊನ್ನು ಎಂದೇ ಕರೆಯಲ್ಪಡುವ ಕಾಳುಮೆಣಸು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಲ್ಲುದು. ಅನೇಕ ತೊಂದರೆಗಳಲ್ಲಿ ಅತ್ಯುತ್ತಮವಾಗಿ ಚಿಕಿತ್ಸೆ ನೀಡಬಲ್ಲಂತಹ ಕಾಳುಮೆಣಸನ್ನು ಔಷಧೀಯಪದಾರ್ಥಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಹಿಂದಿನ ಅಂಕಣವೊಂದರಲ್ಲಿ ಕಾಳುಮೆಣಸಿನ ಸಂಪೂರ್ಣ ಆರೋಗ್ಯ ಪ್ರಯೋಜನಗಳ ಕುರಿತು ತಿಳಿದುಕೊಂಡಿದ್ದೆವು. ಈ ಚಳಿ ಹೆಚ್ಚಾಗುತ್ತಿರುವಂತಹ ಕಾಲದಲ್ಲಿ ಕಾಳುಮೆಣಸಿನ ಹೆಚ್ಚುಗಾರಿಕೆಯ ಕುರಿತು ಅವಲೋಕಿಸದಿದ್ದರೆ ಅದು ಪೂರ್ಣವಾಗುವುದಿಲ್ಲ.

ದೇಹಕ್ಕೆ ಉಷ್ಣತೆಯನ್ನು ಒದಗಿಸುವ ಹಾಗೂ ದೇಹದ ತಾಪಮಾನವನ್ನು ಸ್ಥಿಮಿತದಲ್ಲಿರಿಸುವ ಗುಣವನ್ನು ಕಾಳುಮೆಣಸು ಹೊಂದಿದೆ. ವಿಟಮಿನ್ ಸಿ, ಫ್ಲೇವನೈಡ್​ಗಳು, ಆಂಟಿ ಆಕ್ಸಿಡೆಂಟ್​ಗಳನ್ನು ಹೊಂದಿರುವಂತಹ ಕಾಳುಮೆಣಸು ಆಂಟಿ ಬ್ಯಾಕ್ಟೀರಿಯಲ್ ಗುಣವನ್ನೂ ಹೊಂದಿದೆ. ಈ ಗುಣಗಳಿಂದಾಗಿ ಚಳಿಗಾಲದಲ್ಲಿ ಇದರ ಮಹತ್ವ ಹಿರಿದಾಗುತ್ತ ಹೋಗುತ್ತದೆ.

ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಕಫ, ಜ್ವರ ಕಾಡುವಂತಹ ಸಾಧ್ಯತೆ ಹೆಚ್ಚು. ಆದ್ದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಬೇಕು. ಕಾಳುಮೆಣಸು ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ ಇದರ ವೈದ್ಯಕೀಯ ಗುಣಗಳು ಸಮಸ್ಯೆಯನ್ನು ಕಡಿಮೆ ಮಾಡಲೂ ಸಹಕಾರಿ.

ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಕಾಳುಮೆಣಸನ್ನು ಬಳಸಿ ತಯಾರಿಸಿದಂತಹ ಚಹಾವನ್ನು ಕುಡಿಯುವ ಹವ್ಯಾಸವು ಚಳಿಗಾಲದಲ್ಲಿ ಉತ್ತಮ. ಜೇನುತುಪ್ಪ ಸೇರಿಸಿ, ಒಂದು ಚಿಟಿಕೆ ಕಾಳುಮೆಣಸಿನಿಂದ ಮಾಡಿದ ಮನೆಮದ್ದು ಚಳಿಗಾಲದಲ್ಲಿ ಕಾಡುವ ಹಲವು ರೀತಿಯ ತೊಂದರೆಗಳನ್ನು ನಿರ್ವಹಣೆ ಮಾಡಲು, ನಿವಾರಣೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ಕಾಳುಮೆಣಸನ್ನು ಬಿಸಿನೀರಿನೊಂದಿಗೆ ತೆಗೆದುಕೊಳ್ಳುವುದರಿಂದ ಚರ್ಮದಲ್ಲಿ ನಿರ್ಜಲೀಕರಣವಾಗದಂತೆ ತಡೆದು ಚರ್ಮವನ್ನು ಮೃದುವಾಗಿಸಿಡುತ್ತದೆ.

Leave a Reply

Your email address will not be published. Required fields are marked *