ಶಿಸ್ತು ಉಲ್ಲಂಘನೆ ಆರೋಪ: ಜಯನಗರ ಇನ್​ಸ್ಪೆಕ್ಟರ್-ಪೇದೆ ಪತ್ರ ಸಮರ

ಬೆಂಗಳೂರು: ಗಸ್ತು ಕರ್ತವ್ಯಕ್ಕೆ ತಡವಾಗಿ ಬಂದ ಪೇದೆಗೆ ಜಯನಗರ ಇನ್​ಸ್ಪೆಕ್ಟರ್ ನೀಡಿದ್ದ ನೋಟಿಸ್ ಮತ್ತು ಅದಕ್ಕೆ ಪೇದೆ ನೀಡಿದ ಉದ್ಧಟತನದ ಸಮಜಾಯಿಷಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗ ಡಿಸಿಪಿ ಕೆ. ಅಣ್ಣಾಮಲೈ, ಇಲಾಖೆಯ ಶಿಸ್ತು ನಿಯಮಗಳನ್ನು ಉಲ್ಲಂಘನೆ ಹಾಗೂ ತೃಪ್ತಿಕರವಲ್ಲದ ಉತ್ತರ ನೀಡಿದ್ದಾಗಿ ಪರಿಗಣಿಸಿ ಪೇದೆ ಶ್ರೀಧರ್ ಗೌಡನನ್ನು ಅಮಾನತು ಮಾಡಿದ್ದಾರೆ.

ಲೋಕಸಭಾ ಚುನಾವಣೆ ಕರ್ತವ್ಯದ ಹಿನ್ನೆಲೆಯಲ್ಲಿ ಗಸ್ತು ಪೊಲೀಸರು ಬೆಳಗ್ಗೆ 8.30ಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಆದರೂ ಏ.11ರ ಬೆಳಗ್ಗೆ ತಡವಾಗಿ ಹಾಜರಾಗಿದ್ದೀರಿ. ಆದ್ದರಿಂದ ನೀವು ಕರ್ತವ್ಯದಲ್ಲಿ ತೋರಿರುವ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿ ಬಗ್ಗೆ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ಶಿಸ್ತು ಕ್ರಮಕ್ಕಾಗಿ ವಿಶೇಷ ವರದಿಯಲ್ಲಿ ಸಲ್ಲಿಸಬಾರದೇಕೆ?, 3 ದಿನಗಳ ಒಳಗಾಗಿ ಸೂಕ್ತ ಕಾರಣ ಮತ್ತು ಸಮಜಾಯಿಷಿ ನೀಡಬೇಕು. ತಪ್ಪಿದ್ದಲ್ಲಿ ನಿಮ್ಮ ವಿರುದ್ಧ ಶಿಸ್ತಿನ ಕ್ರಮಕ್ಕಾಗಿ ಏಕಪಕ್ಷೀಯವಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಮುಖ್ಯಪೇದೆಗಳಾದ ಮಂಜುನಾಥ, ಚಿಕ್ಕ ಅಂಜನಮೂರ್ತಿ, ಪೇದೆಗಳಾದ ಶ್ರೀಧರ್​ಗೌಡ, ಲೋಕೇಶ ಮತ್ತು ಗಂಗಾಧರ ಎಂಬುವರಿಗೆ ಜಯನಗರ ಇನ್​ಸ್ಪೆಕ್ಟರ್ ಎರಿಸ್ವಾಮಿ ನೋಟಿಸ್ ನೀಡಿದ್ದರು.

‘ನಾನು ನಿಮ್ಮ ಹಾಗೆ ಬೆಳಗ್ಗೆ ಸುಖಸಾಗರ್ ಅಥವಾ ಯುಡಿ ಹೊಟೇಲ್​ನಲ್ಲಿ ತಿಂಡಿ, ಮಧ್ಯಾಹ್ನ ಖಾನಾವಳಿಯಲ್ಲಿ ಊಟ ಮತ್ತು ರಾತ್ರಿ ಎಂಪೈರ್​ನಲ್ಲಿ ಊಟ ಮಾಡಿ, ಮಿಲನೋದಲ್ಲಿ ಐಸ್ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದ್ದಿದ್ದರೆ ಬೆಳಗ್ಗೆ 8.30ಕ್ಕೆ ಅಲ್ಲ, 8 ಗಂಟೆಗೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ. ಆದರೆ, ನನಗೆ ವಯಸ್ಸಾದ ತಂದೆ-ತಾಯಿ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಅವರ ಆಗು-ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗಿರುತ್ತದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯತೆ ಹಾಗೂ ಬೇಜಬಾಬ್ದಾರಿ ಇರುವುದಿಲ್ಲ’ ಎಂದು ಶ್ರೀಧರಗೌಡ ಉತ್ತರ ನೀಡಿದ್ದರು.

ಈ ಸಮಜಾಯಿಷಿ ಪ್ರತಿ ಖಾಸಗಿ ಸುದ್ದಿವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಇನ್​ಸ್ಪೆಕ್ಟರ್ ಮತ್ತು ಪೇದೆಯನ್ನು ವಿಚಾರಣೆ ನಡೆಸಿ ವರದಿ ನೀಡುವಂತೆ ಎಸಿಪಿಗೆ ಅಣ್ಣಾಮಲೈ ಸೂಚಿಸಿದ್ದರು.

 

ಪ್ರಕರಣದ ಕುರಿತು ವಿಚಾರಣೆ ಮಾಡಿದಾಗ ಇನ್​ಸ್ಪೆಕ್ಟರ್ ಲೋಪ ಕಂಡುಬಂದಿಲ್ಲ. ನೋಟಿಸ್​ಗೆ ಪೇದೆ ನೀಡಿದ ಉತ್ತರ ಉಡಾಫೆ ಹಾಗೂ ಉದ್ಧಟತನದಿಂದ ಕೂಡಿದ್ದು, ಅಗೌರವ ಉಂಟು ಮಾಡುವಂತಿರು ವುದರಿಂದ ಅಮಾನತು ಮಾಡಲಾಗಿದೆ.
| ಕೆ. ಅಣ್ಣಾಮಲೈ ಡಿಸಿಪಿ ದಕ್ಷಿಣ ವಿಭಾಗ