More

  ಶಿಷ್ಯೆ ಟಾಪರ್ ಗುರುಗಳು ಪಾಪರ್: 9 ಸಾವಿರ ರೂ.ನಲ್ಲಿ ಜೀವನ, ಮಕ್ಕಳ ಭವಿಷ್ಯ ರೂಪಿಸುವವರಿಗೇ ಇಲ್ಲ ಭವಿಷ್ಯ

  | ಅಶೋಕ ಶೆಟ್ಟರ ಬಾಗಲಕೋಟೆ

  ಶಿಷ್ಯೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್. ಈಕೆಯ ಸಾಧನೆಗೆ ನೆರವಾದ ಶಿಕ್ಷಕರ ಜೀವನ ಮಾತ್ರ ಪಾಪರ್!. ಇದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಳ್ಳಿಗೇರಿ ಮುರಾರ್ಜಿ ವಸತಿ ಶಾಲೆಯ ಸಾಧನೆ, ವೇದನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ಅಂಕಿತಾ ಕೊಣ್ಣೂರ ಸಾಧನೆಯಿಂದಾಗಿ ಆಕೆ ಓದಿದ ಶಾಲೆ ಸುದ್ದಿಯಲ್ಲಿದೆ. ವಿಪರ್ಯಾಸ ಎಂದರೆ ಅಂಕಿತಾಳಂತಹ ವಿದ್ಯಾರ್ಥಿಗಳಿಗೆ ವಿದ್ಯೆ ಧಾರೆ ಎರೆದು ಭವಿಷ್ಯ ರೂಪಿಸುತ್ತಿರುವ ಹೊರ ಸಂಪನ್ಮೂಲ ಶಿಕ್ಷಕರಿಗೆ ಭವಿಷ್ಯವೇ ಇಲ್ಲದಂತಾಗಿದೆ. ಕನಿಷ್ಠ ಸೇವಾ ಭದ್ರತೆಯೂ ಸಿಗದೆ ಅಲ್ಪ ವೇತನದಲ್ಲಿ ಜೀವನ ಸವೆಸುವಂತಾಗಿದೆ.

  ಮೆಳ್ಳಿಗೇರಿ ಮುರಾರ್ಜಿ ವಸತಿ ಶಾಲೆಯಲ್ಲಿ ವಿಜ್ಞಾನ, ಗಣಿತ, ಕನ್ನಡ ವಿಷಯ ಬೋಧಿಸುವ ಮೂವರು ಶಿಕ್ಷಕರ ಸ್ಥಿತಿ ಕೂಲಿಗಳಿಗಿಂತ ಕಡೆಯಾಗಿದೆ. 15 ವರ್ಷದ ಹಿಂದೆ 3600 ರೂ.ವೇತನಕ್ಕೆ ಹೊರ ಸಂಪನ್ಮೂಲ ಶಿಕ್ಷಕರಾಗಿ ಕೆಲಸಕ್ಕೆ ಸೇರಿರುವ ಇವರಿಗೆ ಸದ್ಯ ಸಿಗುತ್ತಿರುವುದು ಮಾಸಿಕ 9 ಸಾವಿರ ರೂ. ಮಾತ್ರ. ಇದು ಕೇವಲ ಮೂವರು ಶಿಕ್ಷಕರ ಸ್ಥಿತಿಯಲ್ಲ. ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ ಬರುವ 830 ವಸತಿ ಶಾಲೆಗಳ 516 ಹೊರ ಸಂಪನ್ಮೂಲ ಶಿಕ್ಷಕರು ಇದೇ ಸಂಕಷ್ಟದಲ್ಲಿ ನಿತ್ಯ ಕಣ್ಣೀರು ಹಾಕುತ್ತಿದ್ದಾರೆ.

  ಹೊರ ಸಂಪನ್ಮೂಲದಲ್ಲಿ 35 ಜನ ಪ್ರಾಂಶುಪಾಲರು ಇದ್ದರೆ, 481 ಜನ ಶಿಕ್ಷಕರು ಇದ್ದಾರೆ. 2020ರಲ್ಲಿ ಹೈಕೋರ್ಟ್ ಈ ಶಿಕ್ಷಕರಿಗೂ ಸೇವಾ ಭದ್ರತೆ ಪರಿಗಣಿಸಿ ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತಾದರೂ ಈವರೆಗೆ ಅದು ಕಾರ್ಯಗತವಾಗಿಲ್ಲ.

  ಶಿಷ್ಯೆ ಟಾಪರ್ ಗುರುಗಳು ಪಾಪರ್: 9 ಸಾವಿರ ರೂ.ನಲ್ಲಿ ಜೀವನ, ಮಕ್ಕಳ ಭವಿಷ್ಯ ರೂಪಿಸುವವರಿಗೇ ಇಲ್ಲ ಭವಿಷ್ಯ

  ಕಳೆದ ಮಾರ್ಚ್​ನಲ್ಲಿ ಎಲ್ಲ ವಸತಿ ಶಾಲೆಗಳ ಪ್ರಾಂಶುಪಾಲರಿಗೆ 2011 ರಿಂದ 2023ರವರೆಗೂ ಕರ್ತವ್ಯ ನಿರ್ವಹಿಸುತ್ತಿರುವ ಹೊರ ಸಂಪನ್ಮೂಲ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಸೇವಾ ಸಕ್ರಮಾತಿ ಕುರಿತು ದಾಖಲೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಿಂದ ದಾಖಲೆ ಕ್ರೋಢೀಕರಿಸಿ ಆಯಾ ಜಿಲ್ಲಾ ಸಮನ್ವಯಾಧಿಕಾರಿಗಳು ದಾಖಲೆಗಳನ್ನು ಕೇಂದ್ರ ಕಚೇರಿಗೆ 15 ದಿನಗಳಲ್ಲಿ ಕಳುಹಿಸುವಂತೆ ಸೂಚಿಸಿದ್ದರು. ಆದರೆ, ಈವರೆಗೂ ಆ ಪ್ರಕ್ರಿಯೆ ನಡೆದಿಲ್ಲ ಎನ್ನುವ ಮಾಹಿತಿ ಇದೆ ಎಂದು ಕರ್ನಾಟಕ ರಾಜ್ಯ ಕ್ರೖೆಸ್ ವಸತಿ ಶಾಲೆಗಳ (ಹೊರ) ಪ್ರಾಂಶುಪಾಲರು ಹಾಗೂ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ರವಿ ಬಳ್ಳೇಕೆರೆ ಹೇಳಿದ್ದಾರೆ.

  ನಮ್ಮ ಬದುಕು ಬದಲಾಗೋದು ಯಾವಾಗ?: ಅಂಕಿತಾ ಓದಿದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆ ಪ್ರತಿ ವರ್ಷ ಶೇ.95ಕ್ಕಿಂತ ಹೆಚ್ಚಿನ ಫಲಿತಾಂಶ ಕೊಡುತ್ತಿದೆ. ಇಲ್ಲಿನ ಶಿಕ್ಷಕರಾದ ಗುರುರಾಜ್ ಘಟ್ಟದ, ವೆಂಕಪ್ಪ ಬಳೂಲದ ಹಾಗೂ ಮೋಹನ ಕಾರಬಾರಿ 9 ಸಾವಿರ ರೂ. ವೇತನಕ್ಕಾಗಿ 24/7 ಕೆಲಸ ಮಾಡುತ್ತಿದ್ದಾರೆ. ಅಂಕಿತಾ ಸಾಧನೆಯಿಂದಾದರೂ ಈ ಶಾಲೆಯ ಶಿಕ್ಷಕರಿಗೆ ಸೇವಾಭದ್ರತೆ ಸಿಗಬೇಕಾಗಿದೆ.

  ಅಡುಗೆಯವರೇ ವಾಸಿ!: ಇದೇ ವಸತಿ ಶಾಲೆಗಳ ಅಡುಗೆ ಸಿಬ್ಬಂದಿ ಮಾಸಿಕ 21 ಸಾವಿರ ವೇತನ ಪಡೆಯುತ್ತಾರೆ. ಸ್ವೀಪರ್​ಗಳು 17 ಸಾವಿರ, ಭದ್ರತಾ ಸಿಬ್ಬಂದಿಗೆ 17 ಸಾವಿರ ರೂ. ಸಂಬಳ ಇದೆ. ಅವರನ್ನೆಲ್ಲ ಕಾರ್ವಿುಕರೆಂದು ಪರಿಗಣಿಸಿದ್ದರಿಂದ ಇಲಾಖೆ ನಿಯಮದಂತೆ ಕನಿಷ್ಠ ಕೂಲಿ ಸಿಗುತ್ತಿದೆ. ಆದರೆ, ಶಿಕ್ಷಕರು ಕಾರ್ವಿುಕರಲ್ಲವಾದ್ದರಿಂದ ವೇತನದಲ್ಲಿ ವ್ಯತ್ಯಾಸವಾಗಿದೆ ತಿಂಗಳಿಗೆ ಬರುವ 9 ಸಾವಿರ ರೂ. ಸಂಬಳದಲ್ಲಿ ವೃದ್ಧ ತಂದೆ-ತಾಯಿ ನೋಡಿಕೊಳ್ಳಲು ಆಗದೆ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಆರ್ಥಿಕ ಶಕ್ತಿ ಇಲ್ಲದೆ ಶಿಕ್ಷಕರು ಜೀವನದ ಮೇಲೆ ಜಿಗುಪ್ಸೆ ಹೊಂದಿದ್ದಾರೆ. ಇದೇ ನೋವಿನಲ್ಲಿ ಕೆಲ ಶಿಕ್ಷಕರು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿರುವ ಉದಾಹರಣೆಗಳು ಇವೆ ಎಂದು ಹೆಸರು ಹೇಳದ ಶಿಕ್ಷಕರು ಕಣ್ಣೀರು ಹಾಕುತ್ತಾರೆ.

  516 ಶಿಕ್ಷಕರು ಒಂದೂವರೆ ದಶಕದಿಂದ ಅಲ್ಪ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದರೂ ತಕ್ಕುದಾದ ವೇತನ, ಭದ್ರತೆ ಇಲ್ಲವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು.

  | ರವಿ ಬಳ್ಳೇಕೆರೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಕ್ರೖೆಸ್ ವಸತಿ ಶಾಲೆಗಳ (ಹೊ) ಪ್ರಾಂಶುಪಾಲರು ಹಾಗೂ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ

  ಇನ್ನಾದರೂ ಕಣ್ತೆರೆವುದೇ ಸರ್ಕಾರ?

  1. ಎಸ್ಸೆಸ್ಸೆಲ್ಸಿ ಟಾಪರ್ ಅಂಕಿತಾ ಗುರುಗಳಿಗೆ ಇಲ್ಲ ಸೇವಾ ಭದ್ರತೆ

  2. ರಾಜ್ಯದ 830 ವಸತಿ ಶಾಲೆಗಳ 516 ಶಿಕ್ಷಕರು ಬದುಕು ಅತಂತ್ರ

  3. 35 ಜನ ಪ್ರಾಂಶುಪಾಲರು, 481 ಜನ ಶಿಕ್ಷಕರಿಗೆ ವೇತನ ಸಂಕಷ್ಟ

  4. 24/7 ಸೇವೆಗೆ ದಿನಕ್ಕೆ ಸಿಗುವುದು 300 ರೂಪಾಯಿ ವೇತನ

  5. ಕುಟುಂಬ ನಿರ್ವಹಣೆಗೆ ಹೊರಸಂಪನ್ಮೂಲ ಶಿಕ್ಷಕರ ಪರದಾಟ

  6. ಸೇವೆ ಪರಿಗಣಿಸಲು 2020ರ ಹೈಕೋರ್ಟ್ ಆದೇಶಕ್ಕೂ ಕಿಮ್ಮತ್ತಿಲ್ಲ

  ತಮಿಳುನಾಡಿನ ಭಾರೀ ವರ್ಷಧಾರೆ: ಪಥನಾಂತಿಟ್ಟ, ಇಡುಕ್ಕಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts