ಶಿಷ್ಯರಿಗೆ ಪವಿತ್ರ ವೃಕ್ಷ ಮಂತ್ರಾಕ್ಷತೆಯ ಕೃಪೆ

ಶಿರಸಿ: ಚಾತುರ್ವಸ್ಯ ಅವಧಿಯಲ್ಲಿ ಮಠಕ್ಕೆ ಆಗಮಿಸಿದ ಭಕ್ತರಿಗೆ ಎಲ್ಲೆಡೆ ಶ್ರೀಗಳು ಮಂತ್ರಾಕ್ಷತೆ ನೀಡ್ತುತಾರೆ. ಆದರೆ, ಹಸಿರು ಸ್ವಾಮೀಜಿ ಎಂದೇ ಕರೆಯಲಾಗುವ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪವಿತ್ರ ವೃಕ್ಷಗಳನ್ನು ಶಿಷ್ಯರಿಗೆ ಮಂತ್ರಾಕ್ಷತೆಯೊಂದಿಗೆ ನೀಡಿ ಹರಸುತ್ತಾರೆ.

ಪರಿಸರ ಸಂರಕ್ಷಣೆ ಕಾಳಜಿ ಪ್ರತಿಯೊಬ್ಬರಲ್ಲೂ ಬರಬೇಕು. ಮಠ ನೀಡಿದ ಉಡುಗೊರೆಯನ್ನು ಪ್ರೀತಿಯಿಂದ ಬೆಳೆಸಬೇಕು ಎಂಬ ಆಶಯದಲ್ಲಿ ವೃಕ್ಷ ಮಂತ್ರಾಕ್ಷತೆಯನ್ನು ಸ್ವಾಮೀಜಿಗಳು ನೀಡುತ್ತಿದ್ದಾರೆ. ವಿನಾಶದ ಅಂಚಿನಲ್ಲಿರುವ ಸಸ್ಯ ಪ್ರಬೇಧಗಳು, ಅಪರೂಪದ ತಳಿಯ ಗಿಡಗಳು ಭಕ್ತರಿಗೆ ದೊರೆತು ಈ ಮೂಲಕ ಸಂರಕ್ಷಣೆಯಾಗುತ್ತಿದೆ. ಸಂಪಿಗೆ, ಬಿಲ್ವ, ನೆಲ್ಲಿ, ಸಾಂಬಾರು ಗಿಡ, ಹಲಸು, ರಕ್ತ ಚಂದನ, ಮಾವು, ಸೀತಾ ಅಶೋಕ, ಪುತ್ರ ಸಂಜೀವಿನಿ, ನೇರಳೆ, ಪಾರಿಜಾತ, ಕದಂಬ, ಶಮಿ, ಮೊದಲಾದ ಹಣ್ಣು, ಹೂವು, ಔಷಧ ಸೇರಿದಂತೆ 22ಕ್ಕೂ ಹೆಚ್ಚು ಬಗೆಯ ಸಸ್ಯಗಳನ್ನು ಸ್ವರ್ಣವಲ್ಲೀಯ ಸಸ್ಯ ಲೋಕದಲ್ಲಿ ಬೆಳೆಸಲಾಗುತ್ತಿದೆ. ಈ ಯತ್ನಕ್ಕೆ ಅರಣ್ಯ ಇಲಾಖೆಯೂ ಸಹಕಾರ ನೀಡುತ್ತಿದೆ.

2006ರ ಚಾತುರ್ವಸ್ಯದಿಂದ ವೃಕ್ಷ ಮಂತ್ರಾಕ್ಷತೆ ನೀಡುವಿಕೆಯನ್ನು ಶ್ರೀಗಳು ಆರಂಭಿಸಿದ್ದು, ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ಗಿಡಗಳು ಭಕ್ತರ ಕೈ ಸೇರಿದೆ. ಚಾತುರ್ವಸ್ಯ ಮುಕ್ತಾಯವಾಗುವವರೆಗೆ ಮಠದ ವ್ಯಾಪ್ತಿಯ 16 ಸೀಮೆಯ ಭಕ್ತರು ಪ್ರತಿ ದಿನವೂ ಆಗಮಿಸುತ್ತಾರೆ. ಪ್ರತಿ ದಿನವೂ 250ಕ್ಕೂ ಅಧಿಕ ಸಸಿಗಳನ್ನು ವಿತರಿಸಲಾಗುತ್ತದೆ. ಶ್ರೀಗಳು ನೀಡಿದ ಸಸ್ಯವನ್ನು ಭಕ್ತರು ಕಾಳಜಿಯಿಂದ ಆರೈಕೆ ಮಾಡುತ್ತಿದ್ದಾರೆ.

ಸ್ವರ್ಣವಲ್ಲೀ ಶ್ರೀಗಳು ಮಂತ್ರಾಕ್ಷತೆಯಾಗಿ ನೀಡಿದ ಸಸ್ಯಗಳು ನಾಡಿನೆಲ್ಲೆಡೆ ಇವೆ. ಮುಂಬೈ, ಕೋಲ್ಕತ, ದೆಹಲಿಯಿಂದ ಆಗಮಿಸಿದ ಭಕ್ತರೂ ಇಲ್ಲಿ ಪಡೆದ ಗಿಡಗಳನ್ನು ತಮ್ಮಲ್ಲಿಗೆ ಒಯ್ದು ಬೆಳೆಸಿದ್ದಾರೆ. | ಅನಂತ ಹೆಗಡೆ ಅಶೀಸರ ಸಸ್ಯ ಲೋಕ ಸಂಚಾಲಕ

Leave a Reply

Your email address will not be published. Required fields are marked *