ಶಿಷ್ಟಾಚಾರ ಪಾಲನೆ ವಿಷಯಕ್ಕೆ ಸೀಮಿತವಾದ ಸಭೆ

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಸರ್ಕಾರಿ ಹಾಗೂ ಸಹಕಾರ ಕ್ಷೇತ್ರಗಳ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಹಾಗೂ ಸದಸ್ಯರು ದೂರಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ವಿಷಯವೇ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಎಲ್ಲ ಸದಸ್ಯರು ಸಭೆಯ ಪ್ರಾರಂಭದಲ್ಲಿಯೇ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಸೋಮಶೇಖರ್ ಅವರಿಗೆ ದೂರು ನೀಡಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ರಂಜಿತಾ ಮಾತನಾಡಿ, ಇತ್ತೀಚೆಗೆ ಬೂಕನಬೆಟ್ಟದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ಶಾಸಕರು ಕ್ಷೇತ್ರದಲ್ಲಿ ಇರಲಿಲ್ಲ, ಆದರೆ ಶಾಸಕರಿಲ್ಲದ ಕಾರಣ ಬೇರೆಯವರು ಉದ್ಘಾಟಿಸಿದ್ದು, ಅಲ್ಲಿ ತಾಪಂ ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರಿಗೆ ಆದ್ಯತೆ ನೀಡದೆ ಅವಮಾನಿಸಲಾಗಿದೆ ಎಂದು ಆರೋಪಿಸಿದರು.

ಜಾತ್ರಾ ಮಹೋತ್ಸವವು ತಾಲೂಕು ಆಡಳಿತದ ನೇತೃತ್ವದಲ್ಲಿ ನಡೆಯಲಿದ್ದು, ಶಿಷ್ಟಾಚಾರ ಪಾಲನೆಯ ಬಗ್ಗೆ ಗಮನಹರಿಸುತ್ತಿಲ್ಲ, ಕಾರ್ಯಕ್ರಮದ ಪತ್ರಿಕೆಯಲ್ಲಿ ಹೆಸರು ಹಾಕುವಲ್ಲಿ ಮಾತ್ರ ಶಿಷ್ಟಾಚಾರ ಪಾಲನೆಯಾಗುತ್ತಿದೆ, ಆದರೆ ಕಾರ್ಯಕ್ರಮಗಳಲ್ಲಿ ಬಳಕೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಚಂದ್ರಶೇಖರ್ ಮಾತನಾಡಿ, ಸಮಾಜದ ಸುಧಾರಣೆ, ಅಭಿವೃದ್ಧಿ ಹಾಗೂ ಕಾರ್ಯಕ್ರಮಗಳ ಏಳಿಗೆಗೆ ಶಿಷ್ಟಾಚಾರ ಪಾಲನೆ ಅಗತ್ಯವಿದೆ. ಪ್ರತಿಯೊಬ್ಬ ಜನಪ್ರತಿನಿಧಿಗೂ ಗೌರವ ಸಿಗಬೇಕೇ ವಿನಃ ಮುಜುಗರವಾಗಬಾರದು. ಪ್ರತಿಯೊಬ್ಬ ಅಧಿಕಾರಿ ಮೊದಲು ಶಿಷ್ಟಾಚಾರದ ಬಗ್ಗೆ ತಿಳಿಯಬೇಕು. ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು. ಈ ನಂತರ ಇಂತಹ ತಪ್ಪುಗಳು ನಡೆದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ತಾಲೂಕಿನ ಹಲವು ಗ್ರಾಮಗಳಲ್ಲಿ ಬೇಸಿಗೆಯ ಆರಂಭದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತಿದ್ದು, ಪ್ರಾರಂಭದಿಂದಲೇ ಸಮಸ್ಯೆ ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಸದಸ್ಯರು ಕೇಳಿಕೊಂಡರು. ಸದ್ಯದಲ್ಲಿಯೇ ಪಿಡಿಒಗಳ ಸಭೆ ಕರೆದು ಕುಡಿಯುವ ನೀರಿನ ಪೂರೈಕೆ ಬಗ್ಗೆ ಚರ್ಚಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ಇಒ ಹೇಳಿದರು.

ತಾಪಂ ಸದಸ್ಯೆ ಪ್ರಮೀಳಾ ಪ್ರಕಾಶ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗಬೇಕು. ಬೀದಿ ದೀಪಗಳ ಅಳವಡಿಕೆ ಕಾರ್ಯ ನಡೆದಿಲ್ಲ. ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ರಾತ್ರಿವೇಳೆ ಜನ ಸಂಚಾರಕ್ಕೆ ಅಡ್ಡಿಯಾಗಿದ್ದು, ಶೀಘ್ರವೇ ಬೀದಿ ದೀಪ ಅಳವಡಿಸಬೇಕೆಂದು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪುಷ್ವಲತಾ ಮಾತನಾಡಿ, ತಾಲೂಕಲ್ಲಿ 123 ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದು, 121 ಹೊಸ ಕಟ್ಟಡಗಳ ನಿರ್ಮಾಣಕ್ಕೆ ಪಟ್ಟಿ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವೇತನ ಕಾರ್ಯವು ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿವೆ ಎಂದರು.

ತಾಪಂ ಅನುದಾನದಿಂದ ನಡೆಯುವ ಹಲವು ಕಾಮಗಾರಿಗಳನ್ನು ಶೀಘ್ರವೇ ಮುಗಿಸಬೇಕೆಂದು ಸದಸ್ಯರಿಗೆ ಸೂಚಿಸಿದ ಅಧ್ಯಕ್ಷರು, ಇನ್ನೂ 5 ಕಾಮಗಾರಿಗಳಿಗೆ ಯೋಜನೆ ತಯಾರಾಗಿಲ್ಲ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ದಂಡಿಗನಹಳ್ಳಿ ಹೋಬಳಿಯ ಕುಂಭೇನಹಳ್ಳಿ, ಅಗ್ರಹಾರ ಸುತ್ತಲಿನ 17 ಗ್ರಾಮಗಳು ಹಾಗೂ ಹೊನ್ನಶೆಟ್ಟಿಹಳ್ಳಿ ವ್ಯಾಲ್ತಿ 7 ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭವಾಗಿವೆ ಎಂದರು.

ಗ್ರಾಮ ಪಂಚಾಯಿತಿಗಳು ನಡೆಸುವ ಗ್ರಾಮಸಭೆಗಳಿಗೆ ತಾಲೂಕು ಪಂಚಾಯಿತಿ ಸದಸ್ಯರನ್ನು ಆಹ್ವಾನಿಸದಿರುವ ಬಗ್ಗೆ ಸುತ್ತೋಲೆ ಕಳುಹಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಭೈರೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಸ್ವಾಮಿ, ಸದಸ್ಯರು ಹಾಜರಿದ್ದರು.