ಶಿವವಿಷ್ಣು ದೇವಾಲಯ ಸಬ್ ಕೊ ಸನ್ಮತಿ ದೇ ಭಗವಾನ್!

ಅಮೆರಿಕದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನನ್ನ ಅನುಭವಕ್ಕೆ ಬಂದಂತೆ ತೀರಾ ಕಡಿಮೆ. ಖಾಸಗಿ ವಾಹನ ಇದ್ದರೆ ಇಲ್ಲಿ ಓಡಾಟ ಸುಗಮ. ಹೀಗಾಗಿ ಇಲ್ಲಿ ಕೆಲಕಾಲ ಕಳೆಯಲು ಬಂದವರ ಚಲನವಲನ ಅವರು ಯಾರ ಮನೆಯಲ್ಲಿರುತ್ತಾರೆಯೋ ಅವರ ಸಮಯವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಶನಿವಾರ, ಭಾನುವಾರಗಳಂದು ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ. ಅವರು ರಜೆ ಹಾಕಿದರೆ ಇವರಿಗೆ ದೂರ ಪ್ರವಾಸ. ಉಳಿದ ದಿನಗಳಂದು ಒಂದು ರೀತಿ ಗೃಹಬಂಧನ. ಒಂದೆರಡು ದಿನ ವಿಶ್ರಾಂತಿ ಅನ್ನಿಸುತ್ತದೆ. ನಂತರ ಕಾಲ ಕಳೆಯುವುದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಹೀಗಾಗಿಯೆ ಒಂದು ಸಲ ಇಲ್ಲಿಗೆ ಬಂದವರು ಮತ್ತೆ ಬರುವ ಉತ್ಸಾಹ ತೋರುವುದಿಲ್ಲ. ಆದರೆ ಓದಿನ ಹವ್ಯಾಸ ಇರುವವರಿಗೆ ಇದೊಂದು ರೀತಿ ಸದವಕಾಶ. ಅತ್ಯುತ್ತಮ ಲೈಬ್ರರಿ ಇಲ್ಲಿದೆ. ಒಮ್ಮೆಗೆ ಎಪ್ಪತೆôದು ಪುಸ್ತಕಗಳನ್ನು ನೀವು ಮನೆಗೆ ತರಬಹುದು. ಇಲ್ಲವೇ ಅಲ್ಲಿಯೇ ಕುಳಿತು ಓದಲೂ ಎಲ್ಲ ಬಗೆಯ ಅನುಕೂಲವೂ ಇದೆ. ಗೃಹಬಂಧನ ಎಂದೆನಲ್ಲ, ಬಂಧನಕ್ಕೂ ಓದಿಗೂ ಸಂಬಂಧವಿರುವುದನ್ನು ಇತಿಹಾಸ ಗೊತ್ತಿರುವವರು ಬಲ್ಲರು.

ಕಳೆದ ಶನಿವಾರ ನನ್ನ ಮಗಳು ಸ್ನೇಹ, ‘ಇಲ್ಲಿಯೇ ಹತ್ತಿರದಲ್ಲಿ ದೇವಸ್ಥಾನವಿದೆ, ಹೋಗೋಣವಾ’ ಎಂದಳು. ‘ಯಾವ ದೇವಸ್ಥಾನ’ ಎಂದೆ. ‘ಶಿವ-ವಿಷ್ಣು ದೇವಸ್ಥಾನ’ ಎಂದಳು. ನನಗೆ ಕುತೂಹಲ ಮೂಡಿತು. ನಮ್ಮಲ್ಲಿ ಶಿವನ ದೇವಾಲಯವಿದೆ, ವಿಷ್ಣು ದೇವಸ್ಥಾನಗಳೂ ಇವೆ. ಆದರೆ ಶಿವ-ವಿಷ್ಣು ಹೆಸರಿನ ದೇವಸ್ಥಾನ ತಕ್ಷಣ ನೆನಪಿಗೆ ಬರಲಿಲ್ಲ. ಅವರಿಬ್ಬರನ್ನೂ ಒಟ್ಟಿಗಿರಲು ನಮ್ಮ ಭಕ್ತರು ಬಿಟ್ಟಂತೆ ಕಾಣಲಿಲ್ಲ.

ನಮ್ಮಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ತ್ರಿಮೂರ್ತಿಗಳೆಂದು ಪ್ರಸಿದ್ಧ. ಸೃಷ್ಟಿ, ಸ್ಥಿತಿ, ಲಯಗಳಿಗೆ ಇವರು ಪ್ರತೀಕ. ಸೃಷ್ಟಿಗಿರುವಷ್ಟೇ ಮಹತ್ವ ಲಯಕ್ಕೂ ಇರುವುದು ಭಾರತೀಯರ ವಿಶಿಷ್ಟ ಕಲ್ಪನೆ. ಪಾಶ್ಚಾತ್ಯರಲ್ಲಿ ಎಲ್ಲವನ್ನೂ ಸಂಗ್ರಹಿಸಿಡುವ ಮ್ಯೂಸಿಯಂ ಪರಿಕಲ್ಪನೆಯಿದೆ. ಅಲ್ಲಿ ಲಯಕ್ಕೆ ಸ್ಥಾನವಿಲ್ಲ. ಆದರೆ ನಮ್ಮಲ್ಲಿ ಅಲ್ಲಿಯಂತೆ ಸಂಗ್ರಹಿಸಿ ರಕ್ಷಿಸಿಡುವ ಮನೋಭಾವ ಇಲ್ಲ. ಸಂಗ್ರಹ ಗುಣವೇ ಅನೇಕ ಅನಾಹುತಗಳಿಗೆ ಕಾರಣ. ಪ್ರಾಣಿಗಳಲ್ಲಿ ಸಂಗ್ರಹ ಗುಣವಿಲ್ಲ, ಬೇಟೆಯಾಡುತ್ತವೆ, ಹಸಿವು ತಣಿದ ನಂತರ ಉಳಿದುದನ್ನು ಅಲ್ಲಿಯೇ ಬಿಟ್ಟು ಹೋಗುತ್ತವೆ. ಉಳಿದ ಪ್ರಾಣಿಗಳ ಹಸಿವು ಇದರಿಂದ ಹಿಂಗುತ್ತದೆ. ನಮ್ಮ ತಾತ ಮಧ್ಯಾಹ್ನ ಮಾಡಿದ ಅಡುಗೆಯನ್ನು ರಾತ್ರಿ ಊಟ ಮಾಡುತ್ತಿರಲಿಲ್ಲ. ರಾತ್ರಿ ಮತ್ತೆ ಬಿಸಿಯಾಗಿ ಮಾಡಬೇಕಿತ್ತು. ಮಾರನೆಯ ದಿನಕ್ಕಂತೂ ಅದು ಹಳಸಲು. ಈಗ ಹಾಗಲ್ಲ, ಇಂದು ಮಾಡಿದ ಅಡುಗೆಯನ್ನು ವಾರಗಟ್ಟಲೆ ತಿನ್ನುವ ಕ್ರಮ ರೂಢಿಗೆ ಬಂದಿದೆ. ತಂತ್ರಜ್ಞಾನದಿಂದಾಗಿ ತಿಂಗಳಾನುಗಟ್ಟಲೆ ಇಟ್ಟೂ ತಿನ್ನಬಹುದು. ಇದರಿಂದ ಅನುಕೂಲವಾಗಿದೆ, ನಿಜ, ಹೊಟ್ಟೆ ತುಂಬಿಸಿಕೊಳ್ಳಬಹುದು. ಆದರೆ ರುಚಿ? ಆರೋಗ್ಯ? ನಮ್ಮಲ್ಲಿ ಹುಟ್ಟಿನಷ್ಟೇ ಸಾವಿಗೂ ಮಹತ್ವವಿದೆ. ಜರಾಮರಣವಿಲ್ಲದ ದೇವತೆಗಳು ಸಂತೋಷ ಪಡಲು ಈ ಭೂಮಿಗೇ ಬರುವುದನ್ನು ನಾವು ಪುರಾಣಗಳಲ್ಲಿ ಕಾಣುತ್ತೇವೆ. ಬರೀ ಸಿಹಿಯನ್ನು ಎಷ್ಟೆಂದು ತಿನ್ನಬಹುದು? ಜೊತೆಗೆ ಖಾರವೂ ಇರಬೇಕು. ‘ಸ್ವರ್ಗಸುಖ’ವೆನ್ನುವುದು ಇತ್ಯಾತ್ಮಕವಾದುದೇನಲ್ಲ! ಹರಿಹರನ ರಗಳೆಗಳಲ್ಲಿನ ಎಲ್ಲ ನಾಯಕರೂ ಸುಖಾನುಭವಕ್ಕಾಗಿ ಶಿವನ ಆಣತಿಯಂತೆ ಇಲ್ಲಿಗೆ ಬಂದವರೇ! ಗಣಪತಿ ಹಬ್ಬವನ್ನು ಗಮನಿಸಿ. ಗಣೇಶನನ್ನು ‘ಸೃಷ್ಟಿ’ಸಿ, ಅವನನ್ನು ಪೂಜಿಸಿ ನಂತರ ನೀರಿನಲ್ಲಿ ಮುಳುಗಿಸಿ ‘ಲಯ’ವಾಗಿಸುತ್ತೇವೆ. ಗಣಪತಿಯ ಆ ವಿಗ್ರಹವನ್ನೇ ಮುಂದಿನ ವರ್ಷಕ್ಕೂ ಕಾದಿರಿಸುವುದಿಲ್ಲ. ನಮ್ಮದು ಇತಿಹಾಸ ಪ್ರಜ್ಞೆಯಲ್ಲ, ಪುರಾಣ ಪ್ರಜ್ಞೆ. ಇತಿಹಾಸದ ಪರಿಕಲ್ಪನೆ ನಮಗೆ ಪಾಶ್ಚಾತ್ಯರಿಂದ ಬಂದದ್ದು.

ಬ್ರಹ್ಮ, ವಿಷ್ಣು, ಮಹೇಶ್ವರ ಮೂವರೂ ತ್ರಿಮೂರ್ತಿಗಳೆಂದು ಕರೆಯಲ್ಪಟ್ಟರೂ, ಬ್ರಹ್ಮ ಜನಪ್ರಿಯನಲ್ಲ. ಅವನಿಗೆ ದೇವಸ್ಥಾನವೂ ಇಲ್ಲ, ಪೂಜೆಯೂ ಇಲ್ಲ. ಪುಷ್ಕರದಲ್ಲಿ ಬ್ರಹ್ಮ ದೇಗುಲವೊಂದಿದೆ, ಆದರೆ ಈಗ ಅದೂ ಮುಚ್ಚಿದೆ ಎಂದು ಕೇಳಿದ್ದೇನೆ. ಬಾಂಕಾಂಕ್​ನಲ್ಲೊಂದು ಬ್ರಹ್ಮದೇವಾಲಯವಿದೆ. ಮತ್ತೆಲ್ಲೂ ಬ್ರಹ್ಮನ ದೇವಾಲಯವಿದ್ದಂತಿಲ್ಲ. ಆತನ ಮಗನಾದ ನಾರದನೂ ‘ನಾರಾಯಣ, ನಾರಾಯಣ’ ಎನ್ನುತ್ತಾನೆಯೇ ಹೊರತು ತನ್ನ ತಂದೆಯನ್ನು ಪ್ರಾರ್ಥನೆ ಮಾಡಿದಂತಿಲ್ಲ. ಆದರೆ ಬ್ರಹ್ಮನ ಹೆಂಡತಿ ಸರಸ್ವತಿಗೆ ಪೂಜೆಯಿದೆ. ದೇಗುಲಗಳೂ ಇವೆ. ಶೃಂಗೇರಿ ಶಾರದೆಯ ದೇಗುಲ ನೆನಪಾಗುತ್ತಿದೆ. ತ್ರಿಮೂರ್ತಿಗಳಂತೆ ಅವರ ಪತ್ನಿಯರಾದ ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿ ಇವರಿಗೂ ನಮ್ಮಲ್ಲಿ ಪ್ರಾಮುಖ್ಯತೆಯಿದೆ. ವಿದ್ಯೆ, ಸಂಪತ್ತು, ಶಕ್ತಿಗೆ ಇವರು ಪ್ರತೀಕ. ಈಗ ನವರಾತ್ರಿ ಸಂದರ್ಭದಲ್ಲಿ ನಾವು ಈ ಮೂವರನ್ನೂ ಪೂಜಿಸುತ್ತೇವೆ.

ತ್ರಿಮೂರ್ತಿಗಳಲ್ಲಿ ಶಿವ ಹಾಗೂ ವಿಷ್ಣುವನ್ನು ಆರಾಧಿಸುವವರು ಅಧಿಕ. ಇವರದೇ ಪ್ರತ್ಯೇಕ ಪಂಥಗಳಿವೆ. ಶಿವನನ್ನು ಆರಾಧಿಸುವವರು ಶೈವರು. ವಿಷ್ಣುವನ್ನು ಆರಾಧಿಸುವವರು ವೈಷ್ಣವರು. ಇವರ ನಡುವೆ ತಮ್ಮ ದೈವವೇ ಶ್ರೇಷ್ಠ ಎಂಬ ಸ್ಪರ್ಧೆ ನಿರಂತರ ನಡೆದೇ ಇದೆ. ಕನ್ನಡ ಪರಂಪರೆಯನ್ನು ಗಮನಿಸಿದರೂ ಈ ಬಗೆಯ ಏಕದೇವೋಪಾಸನೆಯ ನಿಲವು ಕಂಡುಬರುತ್ತದೆ. ತಮ್ಮ ದೈವದ ಪ್ರತಿಪಾದನೆ, ಅನ್ಯದೈವದ ಖಂಡನೆಯನ್ನು ನಮ್ಮ ಭಕ್ತರು ಸಾಕಷ್ಟು ತೀವ್ರವಾಗಿಯೇ ಮಾಡಿದ್ದಾರೆ. ಶಿವನ ಆರಾಧಕರು ಶರಣರು, ಇವರು ವಿಭೂತಿಪ್ರಿಯರು; ವಿಷ್ಣುವಿನ ಭಕ್ತರು ದಾಸರು, ಇವರು ಗಂಧವಿಟ್ಟುಕೊಳ್ಳುತ್ತಾರೆ. ಶರಣರು ಶಿವಶಿವ ಎನ್ನುತ್ತಾರೆಯೇ ಹೊರತು ಅಪ್ಪಿತಪ್ಪಿಯೂ ‘ನಾರಾಯಣ’ ಎನ್ನುವುದಿಲ್ಲ. ಅಂತೆಯೇ ವೈಷ್ಣವರ ನಾಲಗೆಯ ಮೇಲೆ ಶಿವ ನರ್ತಿಸುವುದಿಲ್ಲ. ಒಂದು ಕಾಲಕ್ಕೆ ಹೆಸರು ಹೇಳಿದರೇ ಅವರು ಯಾವ ಪಂಥ ಎಂದು ಗುರ್ತಿಸಬಹುದಿತ್ತು. ಶೈವರಲ್ಲಿ ನಾರಾಯಣನಿಗೆ ಸಂಬಂಧಿಸಿದ ಯಾವ ಹೆಸರನ್ನೂ ಕಾಣುವುದು ಕಷ್ಟ. ಹಾಗೆಯೇ ವೈಷ್ಣವರಲ್ಲಿ ಶಿವನ ಸಂಬಂಧದ ಹೆಸರಿಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ನಾವು ಗೆಳೆಯರೆಲ್ಲರೂ ಪ್ರವಾಸಕ್ಕೆ ಹೋಗಿದ್ದೆವು. ಅವರಲ್ಲಿ ನನ್ನ ಒಬ್ಬ ಗೆಳೆಯ ವೈಷ್ಣವ ಪಂಥಕ್ಕೆ ಸೇರಿದವನು. ನಾವು ಶಿವನ ದೇಗುಲ ನೋಡಲು ಹೋದಾಗ ಆತ ಒಳಗೆ ಬರಲೇ ಇಲ್ಲ, ನೆಪ ಹೇಳಿ ಹೊರಗೇ ಇದ್ದನು. ನಂತರ ಆತನ ವಿಷ್ಣುನಿಷ್ಠೆ ಗೊತ್ತಾಯಿತು. ನನಗೆ ಶಿವನಾಗಲೀ, ವಿಷ್ಣುವಾಗಲೀ ವ್ಯತ್ಯಾಸವಿರಲಿಲ್ಲ. ನಮ್ಮ ಮನೆಯಲ್ಲಿ ಹಿರಿಯರು ವಿಭೂತಿಯಿಟ್ಟು ಅದರ ಮಧ್ಯೆ ಗಂಧವನ್ನೂ ಇಡುತ್ತಿದ್ದರು. ಶೈವರಿಗೆ ಗೋಕುಲಾಷ್ಟಮಿ, ವೈಷ್ಣವರಿಗೆ ಶಿವರಾತ್ರಿ ನಿಷಿದ್ಧ. ಆದರೆ ನಾವು ಎರಡೂ ಹಬ್ಬಗಳನ್ನು ಆಚರಿಸುತ್ತಿದ್ದೆವು. ಮಕ್ಕಳಾಗಿದ್ದಾಗ ನಮಗೆ ಖುಷಿಯೋ ಖುಷಿ. ಎರಡೂ ಹಬ್ಬಗಳಲ್ಲಿ ವಿಶೇಷ ತಿಂಡಿ. ಅನೇಕ ವರ್ಷಗಳವರೆಗೆ ನಮ್ಮ ತಂದೆ ಹೆಸರಿನ ಬಗ್ಗೆ ನಾನು ಯೋಚಿಸಿಯೇ ಇರಲಿಲ್ಲ. ಅವರ ಹೆಸರು ‘ಶಿವರಾಮಯ್ಯ’. ಶಿವ ರಾಮ ಇಬ್ಬರೂ ಸೇರಿದ್ದಾರೆ. ನನಗೆ ಆಗ ಶಂಕರನಾರಾಯಣ, ಹರಿಹರ ಎಲ್ಲರೂ ನೆನಪಾದರು. ದಕ್ಷಿಣ ಕನ್ನಡದಲ್ಲಿ ಶಂಕರನಾರಾಯಣ ಎಂಬ ಹೆಸರಿನ ಊರೇ ಇದೆ. ಅದಕ್ಕೊಂದು ಸ್ಥಳ ಪುರಾಣವೂ ಇದೆ. ಈ ಭಾಗದಲ್ಲಿ ಇಬ್ಬರು ಅಸುರರು ಜನರಿಗೆಲ್ಲ ಕಾಟ ಕೊಡುತ್ತಿದ್ದರು. ಆಗ ಕ್ರೋಡನೆಂಬ ಮಹರ್ಷಿ ಶಂಕರ-ನಾರಾಯಣ ಇಬ್ಬರನ್ನೂ ಕುರಿತು ತಪಸ್ಸು ಮಾಡುತ್ತಾನೆ. ಆಗ ಅವರಿಬ್ಬರೂ ಜೊತೆಯಾಗಿ ಬಂದು ಅಸುರರನ್ನು ಕೊಂದು ಜನಹಿತ ಕಾಪಾಡುತ್ತಾರೆ. ಹೀಗಾಗಿ ಅಲ್ಲಿ ಶಂಕರ ನಾರಾಯಣ ಇಬ್ಬರನ್ನೂ ಜೊತೆಯಾಗಿಸಿ ‘ಶಂಕರನಾರಾಯಣ’ನನ್ನು ಪೂಜಿಸುತ್ತಾರೆ. ಪುರಾಣ ಏನೇ ಇರಲಿ ಅದರ ಹಿಂದಿನ ಕಲ್ಪನೆ ಚೆನ್ನಾಗಿದೆ. ಹಾಗೆ ನೋಡಿದರೆ ನಮ್ಮ ದೇವರುಗಳು ಒಂದಾಗುತ್ತಾರೆ, ಆದರೆ ಭಕ್ತರು?

ಲಿವರ್​ವೊರ್​ನ ಶಿವ ವಿಷ್ಣು ದೇವಾಲಯಕ್ಕೆ ಈ ಬಗೆಯ ಹಿನ್ನೆಲೆಯಿಲ್ಲ. ಇದೊಂದು ರೀತಿ ಅನುಕೂಲಸಿಂಧು ಅನ್ನಿಸಿತು. ನಾವು ಅಲ್ಲಿಗೆ ಹೋದಾಗ ಜನಜಾತ್ರೆಯೇ ಇತ್ತು. ಅಮೆರಿಕದಲ್ಲಿ ಭಾರತೀಯರನ್ನು ಒಟ್ಟಿಗೇ ನೋಡಬಹುದಾದರೆ ಅದು ದೇವಸ್ಥಾನಗಳಲ್ಲಿ ಅನ್ನಿಸುತ್ತದೆ. ಕೆಲವು ಪಾಶ್ಚಾತ್ಯರೂ ಕಾಣಿಸಿದರು. ಎಲ್ಲ ವಯೋಮಾನದ ಭಾರತೀಯರೂ ಅಲ್ಲಿದ್ದರು. ವಿವಿಧ ಪ್ರಾಂತೀಯ ಭಾಷೆಗಳ ಸಂವಾದದ ಜೊತೆಗೆ ಎಳೆಯರ ಇಂಗ್ಲಿಷ್ ಕಲರವವೂ ಅಲ್ಲಿತ್ತು. ಬಹುಮಟ್ಟಿಗೆ ಎಲ್ಲರ ಹಣೆಯ ಮೇಲೆಯೂ ವಿಭೂತಿ, ಗಂಧ, ಕುಂಕುಮ ರಾರಾಜಿಸುತ್ತಿತ್ತು. ಸಾಂಪ್ರದಾಯಿಕ ಉಡುಗೆ ತೊಡಲು ಇದೊಂದು ಅವಕಾಶ ಎಂಬಂತೆ ಬಹುಮಂದಿ ಅಂತಹ ಉಡುಪಿನಲ್ಲಿದ್ದರು. ದೇವಸ್ಥಾನದ ಒಳಹೋಗುತ್ತಿದ್ದಂತೆ ದೊಡ್ಡ ಅಂಗಳದಲ್ಲಿ ಪುಟ್ಟ ಪುಟ್ಟ ಗುಡಿಗಳು. ಅವುಗಳಲ್ಲಿ ಶಿವ, ಪಾರ್ವತಿ, ಗಣಪತಿ, ಕುಮಾರಸ್ವಾಮಿ ಒಂದು ಕಡೆ; ಮತ್ತೊಂದು ಕಡೆ ವಿಷ್ಣು, ಶ್ರೀದೇವಿ, ಭೂದೇವಿ ಮೊದಲಾದವರು. ಇನ್ನೊಂದು ಕಡೆಗೆ ರಾಧಾ-ಕೃಷ್ಣ, ಶ್ರೀರಾಮ ಪರಿವಾರ, ಮಗದೊಂದು ಕಡೆ ಆಂಜನೇಯ, ಇನ್ನೊಂದು ಭಾಗದಲ್ಲಿ ನವಗ್ರಹಗಳು- ಹೀಗೆ ಎಲ್ಲ ದೇವರಿಗೂ ಸ್ಥಳಾವಕಾಶ ಕಲ್ಪಿಸಿದ್ದರು. ಪ್ರತಿ ಗುಡಿಯಲ್ಲೂ ಒಬ್ಬೊಬ್ಬ ಅರ್ಚಕರಿದ್ದು ಮಂಗಳಾರತಿ, ತೀರ್ಥ, ಪ್ರಸಾದ ಕೊಡುತ್ತಿದ್ದರು. ದೇವರ ವಿಗ್ರಹಗಳು ಬಹುಮಟ್ಟಿಗೆ ನಮ್ಮ ಹರೇಕೃಷ್ಣ ಪಂಥದ ದೇಗುಲಗಳಲ್ಲಿರುವ ವಿಗ್ರಹಗಳಂತಿತ್ತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸರಿಸುಮಾರು ನಾಲ್ಕುನೂರ ಐವತ್ತು ಹಿಂದೂ ದೇವಾಲಯಗಳಿವೆ. ನನ್ನ ಗೆಳೆಯರ ಮಗ ಅತ್ಯಂತ ಆಧುನಿಕ ಮನೋಭಾವದ ವ್ಯಕ್ತಿ. ಆತನೂ ಆಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಾನೆ. ಆತನ ಭೇಟಿ ಹಿಂದಿನ ರಹಸ್ಯ ಗೊತ್ತಾದಾಗ ಸಹಜವಾಗಿಯೇ ನನ್ನ ಮುಖದಲ್ಲಿ ಮಂದಹಾಸ ಮೂಡಿತು. ಆತ ತಿಂಡಿಪೋತ. ಇಲ್ಲಿನ ದೇವಸ್ಥಾನಗಳಲ್ಲಿ ಅಪ್ಪಟ ಭಾರತೀಯವೆನ್ನಬಹುದಾದ ರೀತಿಯ ಪ್ರಸಾದವಿರುತ್ತದೆ. ಆ ರುಚಿ ಅವನನ್ನು ಸೆಳೆದಿತ್ತು. ಪು ತಿ ನ ಅವರು ಹೇಳುತ್ತಿದ್ದರು- ‘ನಾವು ಹಬ್ಬಗಳನ್ನು ಆಚರಿಸುವ ಉದ್ದೇಶವೆಂದರೆ ನಮ್ಮ ಇಂದ್ರಿಯಗಳನ್ನು ತಣಿಸುವುದು. ಹಬ್ಬವೆಂದರೆ ವಿವಿಧ ಬಗೆಯ ಖಾದ್ಯಗಳ ಔತಣ!’ ಇಲ್ಲಿಯೂ ‘ಪ್ರಸಾದ’ದ ರೂಪದಲ್ಲಿ ಊಟವಿತ್ತು. ರುಚಿಯಾಗಿಯೂ ಇತ್ತು. ನಾವೂ ಊಟ ಮುಗಿಸಿ, ಅಲ್ಲಿಯ ಸಭಾಂಗಣ ಪ್ರವೇಶಿಸಿದೆವು. ಅಲ್ಲಿ ಸಂಗೀತ ಕಚೇರಿ.

ಪಾಶ್ಚಾತ್ಯ ವ್ಯಕ್ತಿಯೊಬ್ಬ ಅತ್ಯಂತ ಸುಮಧುರವಾಗಿ ತ್ಯಾಗರಾಜರ ಕೀರ್ತನೆ ಹಾಡುತ್ತಿದ್ದುದು ನನ್ನ ಗಮನ ಸೆಳೆಯಿತು. ಕ್ರಿಶ್ಚಿಯನ್ ಧರ್ಮದ ಆತ ನಮ್ಮ ದೇವರ ಧ್ಯಾನವನ್ನು ಹಾಡಿನ ರೂಪದಲ್ಲಿ ತಲ್ಲೀನವಾಗಿ ಮಾಡುತ್ತಿದ್ದ. ಧ್ಯಾನಕ್ಕೆ ಯಾವ ಧರ್ಮವಾದರೇನು? ಆಗ ನನಗನ್ನಿಸಿತು: ಇಲ್ಲಿ ಶಿವನ ಭಕ್ತರು ಹಾಗೂ ವಿಷ್ಣುವಿನ ಭಕ್ತರು ಇಬ್ಬರನ್ನೂ ಆಕರ್ಷಿಸಲು ಶಿವ-ವಿಷ್ಣು ದೇವಾಲಯ ಮಾಡಿದ್ದಾರೆ. ಮೇರಿಲ್ಯಾಂಡ್​ನಲ್ಲಿಯೂ ಇಂಥದೇ ಶಿವ-ವಿಷ್ಣು ದೇವಾಲಯವಿದೆ ಎಂದು ಕೇಳಿದ್ದೇನೆ. ಶಿವ ಹಾಗೂ ವಿಷ್ಣುವಿಗೆ ಪ್ರತ್ಯೇಕ ದೇವಸ್ಥಾನ ಕಟ್ಟುವ ಕಷ್ಟಸಾಧ್ಯತೆಯನ್ನು ಮನಗಂಡು ಇಲ್ಲಿನವರು ಹೀಗೆ ಮಾಡಿರಬೇಕು. ಇದು ಸರಿಯೇ! ಹೀಗೆಯೇ ಕ್ರಿಶ್ಚಿಯನ್, ಮುಸ್ಲಿಂ, ಜೈನ, ಬೌದ್ಧ….ಹೀಗೆ ಎಲ್ಲ ಧರ್ಮದ ದೇವರಿಗೂ ಇಲ್ಲಿ ಅವಕಾಶ ಕಲ್ಪಿಸಿದರೆ ಹೇಗೆ? ಒಂದೇ ವಠಾರದಲ್ಲಿ ಭಿನ್ನ ಸಂಸಾರಗಳಿರುವಂತೆ! ಒಂದೇ ಅಪಾರ್ಟ್​ವೆುಂಟಿನಲ್ಲಿ ಭಿನ್ನ ದೇಶದವರು ವಾಸಿಸಿದಂತೆ!

ಅತ್ಯಂತ ಆಧುನಿಕವೆನ್ನಬಹುದಾದ ತಂತ್ರಜ್ಞಾನದ ಈ ಯುಗದಲ್ಲಿ ಹಿಂಸಾಚಾರ ನಡೆಯುತ್ತಿರುವುದು ಧರ್ಮದ ಹೆಸರಿನಲ್ಲಿ ಎಂಬ ದುರಂತವ್ಯಂಗ್ಯವನ್ನು ನಾವು ಮನಗಾಣಬೇಕಾಗಿದೆ. ಫ್ಯಾಸಿಸಂ ಮನೋಭಾವ ಹೇಗೆ ಕ್ರೌರ್ಯಕ್ಕೆ ಹಾದಿ ಮಾಡಿಕೊಡುತ್ತದೆ ಎಂಬುದನ್ನು ಇತಿಹಾಸ ಹೇಳುತ್ತದೆ. ಭಕ್ತಿ ಭಾವನೆಗೆ ಸಂಬಂಧಿಸಿದ್ದು. ಈ ಭಾವವನ್ನೆ ಧರ್ವಂಧರು ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ; ಜನಸಾಮಾನ್ಯರು ಅದಕ್ಕೆ ಬಲಿಯಾಗುತ್ತಿದ್ದಾರೆ. ರಾಜಕೀಯ, ಧರ್ಮ ಮೂಲತಃ ನಿರ್ದಿಷ್ಟ ವರ್ಗದ ಹಿತ ಕಾಯುವ ವ್ಯವಸ್ಥೆ. ಒಂದು ಕಾಲಕ್ಕೆ ರಾಜಕೀಯವನ್ನು ಧರ್ಮ ನಿಯಂತ್ರಿಸುತ್ತಿತ್ತು. ಆದರೆ ಈಗ ರಾಜಕೀಯ ಧರ್ಮವನ್ನು ಒಂದು ಅಸ್ತ್ರವನ್ನಾಗಿ ಬಳಸುತ್ತಿದೆಯೇ? ಹಾಗೆ ನೋಡಿದರೆ ಇಂತಹ ವ್ಯವಸ್ಥೆಯನ್ನು ವಿರೋಧಿಸಿಯೇ ‘ದೇಹವೇ ದೇಗುಲ’ ಎಂಬ ಪರಿಕಲ್ಪನೆಯನ್ನು ಕನ್ನಡ ಮನಸ್ಸು ಚಿಂತಿಸಿತು. ಆದರೆ ಶತಮಾನಗಳು ಕಳೆದಂತೆ ಸ್ಥಾವರ ದೇಗುಲಗಳ ಸಂಖ್ಯೆ ಜಾಸ್ತಿಯಾಗುತ್ತ ವ್ಯವಸ್ಥೆ ಬಲಗೊಳ್ಳುತ್ತಲೇ ಹೋಯಿತು. ಇದು ವಿಪರ್ಯಾಸ. ಈಗಿರುವ ವ್ಯವಸ್ಥೆಯಲ್ಲಿಯೇ ಶಿವ-ವಿಷ್ಣು ದೇವಾಲಯ ಸಹಬಾಳ್ವೆಯ ಹೊಸದೊಂದು ಸಂದೇಶವನ್ನು ನಮಗೆ ನೀಡುತ್ತಿದೆಯೇ?

ಈಶ್ವರ ಅಲ್ಲಾ ತೇರೆ ನಾಮ್ ಸಬ್​ಕೊ ಸನ್ಮತಿ ದೇ ಭಗವಾನ್!

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *