ಶಿವರಾಜ ಪಾಟೀಲರ ಸಮಾಜ ಸೇವೆ ಶ್ಲಾಘನೀಯ

ಧಾರವಾಡ: ಇಂದಿನ ದಿನಗಳಲ್ಲಿ ಶಿವರಾಜ ಪಾಟೀಲ ಅವರಂತಹ ವ್ಯಕ್ತಿಗಳು ಸಿಗುವುದು ಬಹಳ ಅಪರೂಪ. ನ್ಯಾಯಾಂಗ ಕ್ಷೇತ್ರದಲ್ಲಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿದ ಅವರು ಪ್ರತಿಷ್ಠಾನದ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ನ್ಯಾಯಮೂರ್ತಿ ಶಿವರಾಜ ಪಾಟೀಲ ಪ್ರತಿಷ್ಠಾನ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ, ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವೈದ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಮಗೆ ಉತ್ತಮ ಶಿಕ್ಷಣ ನೀಡಿ ಸಮಾಜ ಗುರುತಿಸುವಂತಹ ವ್ಯಕ್ತಿಯಾಗಲು ಕಾರಣೀಭೂತರಾದ ಗುರುಗಳಿಗೆ ಪ್ರಶಸ್ತಿ ನೀಡಿ ತಮ್ಮ ಗೌರವ ಸಲ್ಲಿಸಿದ್ದಾರೆ. ಪ್ರತಿಷ್ಠಾನ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಜೊತೆಗೆ, ಸಂಸ್ಕಾರವಂತ ಮಕ್ಕಳನ್ನೂ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಶಿವರಾಜ ಪಾಟೀಲ ಮಾತನಾಡಿ, ಶಿಕ್ಷಣ ಹಾಗೂ ಶಿಕ್ಷಕ ವಿದ್ಯಾರ್ಥಿ ಜೀವನದ ಅವಿಸ್ಮರಣೀಯ ಕ್ಷಣ. ಈ ಕ್ಷಣವನ್ನು ಸದ್ಬಳಕೆ ಮಾಡಿಕೊಂಡರೆ ಮಾತ್ರ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.

ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಪಿ.ಜಿ.ಎಂ. ಪಾಟೀಲ, ಕೃಷಿ ವಿವಿ ಉಪ ಕುಲಪತಿ ಎಂ.ಬಿ. ಚಟ್ಟಿ, ಕಾನೂನು ವಿವಿ ಉಪ ಕುಲಪತಿ ಈಶ್ವರ ಭಟ್ ಮಾತನಾಡಿದರು. ಇಳಕಲ್​ನ ಶ್ರೀ ಗುರುಮಹಾಂತ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿನ್ನಣ್ಣವರ, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ನ್ಯಾಯಾಧೀಶರು, ವಕೀಲರು, ಇತರರು ಇದ್ದರು.

ಶಿವರಾಜ ಪಾಟೀಲ ಅವರಿಗೆ ವಿದ್ಯೆ ಕಲಿಸಿದ ಕುಷ್ಟಗಿ ತಾಲೂಕಿನ ಸಾಸ್ವಿಹಾಳ ಗ್ರಾಮದ ನಿವೃತ್ತ ಶಿಕ್ಷಕ ಶರಣಯ್ಯ ಹಿರೇಮಠ ಅವರಿಗೆ ಶಿವಶ್ರೀ ಪ್ರಶಸ್ತಿ, ಐವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಭಾಗವಹಿಸಿದ್ದ 18 ವೈದ್ಯರಿಗೆ ಸನ್ಮಾನ ಮಾಡಲಾಯಿತು. ಶಿವರಾಜ ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಶೇಖರಗೌಡ ಪಾಟೀಲ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ನಿರೂಪಿಸಿದರು.

ಶಿವರಾಜ ಪಾಟೀಲ ಅವರದ್ದು ವಿಭಿನ್ನ ವ್ಯಕ್ತಿತ್ವ. ನ್ಯಾಯಾಂಗದ ಜೊತೆಗೆ ಮಾನವೀಯ ಕಾರ್ಯಗಳಿಗೆ ಆದ್ಯತೆ ನೀಡಿದ್ದು ಎಲ್ಲರಿಗೂ ಮಾದರಿಯಾಗಿದೆ. ಗುರುಗಳಿಗೆ ಗೌರವ ನೀಡುವ ವ್ಯಕ್ತಿ ಜೀವನದಲ್ಲಿ ಯಶಸ್ಸಿ ಗಳಿಸುತ್ತಾನೆ ಎಂಬುದಕ್ಕೆ ಇವರೇ ಸಾಕ್ಷಿಯಾಗಿದ್ದಾರೆ. | ಕೆ. ನಟರಾಜನ್ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ

Leave a Reply

Your email address will not be published. Required fields are marked *