ಶಿವಮೊಗ್ಗ ಜಿಲ್ಲೆಗಿಲ್ಲ ಪ್ರಾತಿನಿಧ್ಯ

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ವೇಳೆ ಶಿವಮೊಗ್ಗ ಜಿಲ್ಲೆಗೆ ಪ್ರಾತಿನಿಧ್ಯ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಸಚಿವ ಸಂಪುಟ ಸೇರ್ಪಡೆಯಾಗುವ ವಿಶ್ವಾಸ ಹೊಂದಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ತೀವ್ರ ನಿರಾಶರಾಗಿದ್ದರೂ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿಲ್ಲ. ಭದ್ರಾವತಿಯಲ್ಲಿ ಸಂಗಮೇಶ್ವರ್ ಬೆಂಬಲಿಗರಿಗೆ ನಿರಾಸೆಯಾಗಿದೆ ಎನ್ನುವುದನ್ನು ಹೊರತುಪಡಿಸಿದರೆ ಜಿಲ್ಲಾ ಕಾಂಗ್ರೆಸ್​ನಿಂದ ಅತೃಪ್ತಿ ವ್ಯಕ್ತವಾಗಿಲ್ಲ.

ಸಚಿವ ಸ್ಥಾನ ವಂಚಿತ ಸಂಗಮೇಶ್ವರ್​ಗೆ ಪಕ್ಷ ಭೂಸೇನಾ ನಿಗಮದ ಅಧ್ಯಕ್ಷ ಪದವಿಯ ಆಫರ್ ನೀಡಿದ್ದು, ಈ ಬಗ್ಗೆ ಚರ್ಚೆ ಮಾಡಲು ಸೋಮವಾರ ಭದ್ರಾವತಿಯಲ್ಲಿ ಅವರು ಬೆಂಬಲಿಗರ ಸಭೆ ಕರೆದಿದ್ದಾರೆ. ಬೆಂಬಲಿಗರ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.

ಭೂಸೇನಾ ನಿಗಮದ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಬೇಕೇ-ಇಲ್ಲವೇ? ಶಾಸಕನಾಗಿ ಮುಂದುವರಿಯಬೇಕೇ? ಎಂಬ ಬಗ್ಗೆ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಲಿಂಗಾಯತ ಸಮಾಜದ ಕೋಟಾದಲ್ಲಿ ಮಂತ್ರಿಯಾಗುವ ಸಂಭಾವ್ಯರ ಪಟ್ಟಿಯಲ್ಲಿ ಬಿ.ಕೆ.ಸಂಗಮೇಶ್ವರ್ ಹೆಸರೂ ಇತ್ತು. ಸಚಿವ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಾತಿನಿಧ್ಯ ಹಾಗೂ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ಸಂಗಮೇಶ್ವರ್ ಅವರನ್ನು ಮಂತ್ರಿ ಮಾಡಬಹುದೆಂಬ ನಂಬಿಕೆ ಅವರ ಬೆಂಬಲಿಗರಲ್ಲಿ ಇತ್ತು.

ಬಿ.ಸಿ.ಪಾಟೀಲ್, ಬಿ.ಕೆ.ಸಂಗಮೇಶ್ವರ್, ಶಾಮನೂರು ಶಿವಶಂಕರಪ್ಪ ಅವರನ್ನು ಹಿಂದೆ ಹಾಕಿ ಎಂ.ಬಿ.ಪಾಟೀಲ್ ಮಂತ್ರಿಮಂಡಲ ಸೇರ್ಪಡೆಯಾಗುವಲ್ಲಿ ಸಫಲರಾಗಿದ್ದಾರೆ.

ಪ್ರಾಮಾಣಿಕತೆ, ನಿಷ್ಠೆ ಸರಿ ಕಂಡಿಲ್ಲ: ಪಕ್ಷಕ್ಕೆ ನನ್ನ ಪ್ರಾಮಾಣಿಕತೆ ಮತ್ತು ನಿಷ್ಠೆ ಸರಿ ಕಂಡಿರಲಿಕ್ಕಿಲ್ಲ ಎಂದು ಬಿ.ಕೆ.ಸಂಗಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ತಮಗೆ ಅವಕಾಶ ಸಿಗದಿರುವುದಕ್ಕೆ ಯಾರನ್ನೂ ದೂಷಣೆ ಮಾಡಲು ಹೋಗಲಾರೆ. ಸಚಿವ ಸಂಪುಟಕ್ಕೆ ಸೇರ್ಪಡೆಯಾಗಬೇಕೆನ್ನುವ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿತ್ತು. ಹೀಗಾಗಿ ನನಗೆ ಅವಕಾಶ ಸಿಗದಿರುವುದಕ್ಕೆ ಯಾರ ಮೇಲೂ ಬೇಸರ ಪಟ್ಟುಕೊಳ್ಳಲಾರೆ. ತಮಗೆ ಅವಕಾಶ ಸಿಗದಂತೆ ಯಾವುದೇ ಮುಖಂಡರು ವರಿಷ್ಠರ ಮೇಲೆ ಒತ್ತಡ ತಂದಿರಬಹುದೆಂದು ಹೇಳಲಾರೆ ಎಂದರು.

ಈಗ ವರಿಷ್ಠರು ಕೈಗೊಂಡಿರುವ ತೀರ್ವನಕ್ಕೆ ಬದ್ಧನಾಗಿದ್ದೇನೆ. ಭೂಸೇನಾ ನಿಗಮದ ಅಧ್ಯಕ್ಷನನ್ನಾಗಿ ನೇಮಕ ಮಾಡುವ ವಿಷಯ ಪತ್ರಿಕೆಗಳಲ್ಲಿ ನೋಡಿದ್ದೇನೆ. ಈ ವಿಚಾರದಲ್ಲಿ ಕ್ಷೇತ್ರದ ಮತದಾರರು ಮತ್ತು ಬೆಂಬಲಿಗರೊಂದಿಗೆ ಸಮಾಲೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

20 ತಿಂಗಳ ನಂತರ ಕೆಲವು ಸಚಿವರ ರಾಜೀನಾಮೆ ಕೊಡಿಸಿ ಬೇರೆಯವರಿಗೆ ಅವಕಾಶ ಕೊಡುವ ಸಾಧ್ಯತೆ ಬಗ್ಗೆ ಪ್ರಶ್ನೆ ಮಾಡಿದಾಗ, ಆ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಮುಂದೆ ಏನಾಗಬಹುದು ಎಂಬುದನ್ನು ಕಾದುನೋಡೋಣ ಎಂದು ಹೇಳಿದರು.

ಬೆಂಬಲಿಗರ ಭೇಟಿ: ಭದ್ರಾವತಿಯಲ್ಲೇ ಇರುವ ಶಾಸಕ ಬಿ.ಕೆ.ಸಂಗಮೇಶ್ವರ್ ಅವರನ್ನು ಶನಿವಾರ ಬೆಂಬಲಿಗರು ಭೇಟಿ ಮಾಡಿ ಪಕ್ಷದ ನಡೆಗೆ ಬೇಸರ ವ್ಯಕ್ತಪಡಿಸಿದರು. ಜಾತಿ ಲೆಕ್ಕಾಚಾರ ಮತ್ತು ಹಿರಿತನದ ಆಧಾರದಲ್ಲಿ ಮಂತ್ರಿ ಮಾಡಬೇಕಿತ್ತು. ನಿಮಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದರು.

ಸಿದ್ದರಾಮಯ್ಯ ಅವರನ್ನು ನಂಬಿದ್ದರು: ಬಿ.ಕೆ.ಸಂಗಮೇಶ್ವರ್ ಅವರು ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇಟ್ಟಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಂ. ಇಬ್ರಾಹಿಂ ಅವರಿಗೆ ಟಿಕೆಟ್ ಕೊಡುವ ಉದ್ದೇಶದಿಂದ ಸಿದ್ದರಾಮಯ್ಯ ಅವರೇ ಬಿ.ಕೆ.ಸಂಗಮೇಶ್ವರ್​ಗೆ ಟಿಕೆಟ್ ತಪ್ಪಿಸಿದ್ದರು. ಹೀಗಾಗಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಸ್ನೇಹಿತನ ಮೇಲೆ ಒತ್ತಡ ತಂದು ಟಿಕೆಟ್ ಪಡೆಯಲು ಸಫಲರಾದರೂ ಇಬ್ರಾಹಿಂಗೆ ಗೆಲುವು ಒಲಿದಿರಲಿಲ್ಲ.

ನಂತರದ ದಿನಗಳಲ್ಲಿ ಸಂಗಮೇಶ್ವರ್ ಅವರನ್ನು ಆಹ್ವಾನಿಸಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೋ. ಈ ಬಾರಿ ನಿನಗೆ ಟಿಕೆಟ್ ಎಂದು ಸಿದ್ದರಾಮಯ್ಯ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಸಂಗಮೇಶ್ವರ್ ಅವರಿಗೆ ಟಿಕೆಟ್ ಕೊಡಿಸಿದ್ದರು. ನಂತರದ ದಿನಗಳಲ್ಲಿ ಸಂಗಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ಬಾಂಧವ್ಯ ಬೆಳೆದಿತ್ತು. ಮಂತ್ರಿಮಂಡಲ ಸೇರ್ಪಡೆ ವಿಚಾರವಾಗಿ ಸಿದ್ದರಾಮಯ್ಯ ಅವರೊಂದಿಗೆ ಸಂಗಮೇಶ್ವರ್ ಮಾತನಾಡಿದ್ದರು.

ಭದ್ರಾವತಿ ಶಾಸಕರು ಮಂತ್ರಿಯಾಗಲಿಲ್ಲ!: ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಭದ್ರಾವತಿಯಿಂದ ಆಯ್ಕೆಯಾಗಿರುವವರಿಗೆ ಮಂತ್ರಿಯಾಗುವ ಯೋಗ ಕೂಡಿ ಬಂದಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್​ನಿಂದ ಆಯ್ಕೆಯಾಗಿರುವ ಜಿಲ್ಲೆಯ ಏಕೈಕ ಶಾಸಕ ಬಿ.ಕೆ.ಸಂಗಮೇಶ್ವರ್. ಹೀಗಾಗಿ ಸಹಜವಾಗಿಯೇ ಸಂಗಮೇಶ್ವರ್ ಈ ಬಾರಿ ಮಂತ್ರಿಯಾಗುವ ವಿಶ್ವಾಸ ಹೊಂದಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ಭದ್ರಾವತಿ ಶಾಸಕರು ಮಂತ್ರಿಯಾಗಿಲ್ಲ ಎಂಬ ಹಣೆಪಟ್ಟಿ ಈಗಲಾದರೂ ನಿವಾರಣೆ ಆಗಬಹುದೆಂದುಕೊಂಡಿದ್ದರೂ ಅದು ಈಡೇರಿಲ್ಲ.

ಎರಡನೇ ಪ್ರಯತ್ನದಲ್ಲಿ ಎಂಎಲ್​ಎ: ಭದ್ರಾವತಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಹೆಚ್ಚು ಬಾರಿ ಗೆಲುವು ಸಾಧಿಸಿದ್ದು, ಬಿ.ಕೆ.ಸಂಗಮೇಶ್ವರ್ 1999ರ ಚುನಾವಣೆಯಲ್ಲಿ ಮೊದಲ ಬಾರಿ ಕಣಕ್ಕಿಳಿದು ಜೆಡಿಎಸ್ ಅಭ್ಯರ್ಥಿ ಎಂ.ಜೆ.ಅಪ್ಪಾಜಿ ವಿರುದ್ಧ ಸೋಲು ಅನುಭವಿಸಿದ್ದರು. 2004ರಲ್ಲಿ ಮತ್ತೆ ಸ್ಪರ್ಧೆ ಮಾಡಿ ಎಂ.ಜೆ.ಅಪ್ಪಾಜಿ ವಿರುದ್ಧ ಭಾರಿ ಅಂತರದಲ್ಲಿ ಗೆಲುವು ದಾಖಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು. 2008ರ ಚುನಾವಣೆಯಲ್ಲಿ ಪುನರಾಯ್ಕೆಯಾದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಇಬ್ರಾಹಿಂ ಕಾರಣಕ್ಕೆ ಟಿಕೆಟ್ ನಿರಾಕರಿಸಿದಾಗ ಪಕ್ಷೇತರರಾಗಿ ಕಣಕ್ಕೆ ಇಳಿದು ಗೆಲುವು ಸಾಧಿಸಲು ಸಾಧ್ಯವಾಗದಿದ್ದರೂ ಕಾಂಗ್ರೆಸ್ ಸೋಲಿಗೆ ಕಾರಣರಾದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿ ಗೆದ್ದರು.