ಶಿವಪ್ಪನ ಬಾವಿ ತ್ಯಾಜ್ಯಗಳ ಗುಂಡಿ

ರಾಣೆಬೆನ್ನೂರ: ನಗರದ ಕುರುಬಗೇರಿ ಕ್ರಾಸ್ ಸಮೀಪದ ಪುರಾತನ ಶಿವಪ್ಪನ ಬಾವಿ ಪಾಳು ಬಿದ್ದಿದ್ದು, ನಗರಸಭೆ ಅಧಿಕಾರಿಗಳು ಬಾವಿ ಸ್ವಚ್ಛಗೊಳಿಸಿ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಈ ಬಾವಿ ಸುತ್ತಮುತ್ತಲಿನ ಜನತೆಗೆ ಕುಡಿಯುವ ನೀರು ಪೂರೈಸುತ್ತಿತ್ತು. ಆದರೆ, ಇಂದು ತ್ಯಾಜ್ಯ ಎಸೆಯುವ ಸ್ಥಳವಾಗಿದ್ದು, ಬಾವಿಯಲ್ಲಿ ನೀರಿದ್ದರೂ ಬಳಕೆಗೆ ಬಾರದಂತಹ ಸ್ಥಿತಿ ನಿರ್ವಣವಾಗಿದೆ. ಬಾವಿಯಲ್ಲಿ ಎಸೆದ ತ್ಯಾಜ್ಯ ಅಲ್ಲಿಯೇ ಸಂಗ್ರಹವಾಗಿ ಕೊಳತು ಗಬ್ಬು ನಾರುತ್ತಿದೆ.

ಕೆಲ ವರ್ಷಗಳ ಹಿಂದೆ ಬಾವಿಯ ಮೇಲ್ಭಾಗ ತೆರೆದ ಸ್ಥಿತಿಯಲ್ಲಿತ್ತು. ಬೇಸಿಗೆಯಲ್ಲಿ ಸುತ್ತಲಿನ ಜನತೆ ಹಾಗೂ ರೈತರು ಜಾನುವಾರುಗಳಿಗೆ ನೀರು ಕುಡಿಸಲು ಹಾಗೂ ದಿನ ಬಳಕೆಗೆ ಇದೇ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಮಹಿಳೆಯೊಬ್ಬಳು ಯಾವುದೋ ಕಾರಣಕ್ಕೆ ಇದೇ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಾದ ಬಳಿಕ ಜನರು ಬಾವಿ ನೀರನ್ನು ಬಳಕೆ ಮಾಡಿಕೊಳ್ಳುವುದನ್ನೇ ಕೈಬಿಟ್ಟಿದ್ದಾರೆ. ಅಲ್ಲದೆ, ಇದೀಗ ಸುತ್ತಮುತ್ತಲಿನ ಜನತೆ ಕಸ-ಕಡ್ಡಿಯನ್ನು ಇದೇ ಬಾವಿಗೆ ಎಸೆಯಲು ಶುರು ಮಾಡಿದ್ದಾರೆ.

ಸ್ವಚ್ಛಗೊಳಿಸಿ: ನಗರಸಭೆ ವತಿಯಿಂದ ಬಾವಿಗೆ ಸುತ್ತಲೂ ಕಬ್ಬಿಣದ ಪಂಜರು ಹಾಕಲಾಗಿದೆ. ಆದರೆ, ಈವರೆಗೂ ಸ್ವಚ್ಛ ಮಾಡಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿಲ್ಲ. ಇದರಿಂದಾಗಿ ಬೇಸಿಗೆ ಕಾಲದಲ್ಲಿ ಸುತ್ತಲಿನ ಜನತೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ವಣವಾಗಿದೆ. ಜಾನುವಾರುಗಳಿಗೆ ನೀರು ಪೂರೈಸಲು ಆಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ನಗರಸಭೆ ಅಧಿಕಾರಿಗಳ ಹಾಗೂ ಸದಸ್ಯರ ಗಮನಕ್ಕೆ ತರಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಶಿವಪ್ಪನ ಬಾವಿಯಲ್ಲಿ ಸದಾ ನೀರಿರುತ್ತದೆ. ಬಾವಿಯನ್ನು ಸ್ವಚ್ಛಗೊಳಿಸಿ ಸುತ್ತಲೂ ಬಟ್ಟೆ ತೊಳೆಯಲು ಹಾಗೂ ಜಾನುವಾರುಗಳ ಮೈ ತೊಳೆಯಲು ಅನುಕೂಲ ಮಾಡಿಕೊಟ್ಟರೆ ಬೇಸಿಗೆ ಕಾಲದಲ್ಲಿ ಅನುಕೂಲವಾಗಿದೆ.
| ಚೈತ್ರಾ ವಿ., ಸ್ಥಳೀಯ ನಿವಾಸಿ

ಕುರುಬಗೇರಿಯ ಶಿವಪ್ಪನ ಬಾವಿಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ಸ್ವಚ್ಛತೆ ಕುರಿತು ಸಿಬ್ಬಂದಿಗೆ ಸೂಚಿಸಲಾಗುವುದು. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಬಳಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗುವುದು.
| ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ