ಶಿವಪೂಜೆ ಮಾಡಿದರೆ ಸಂಕಷ್ಟ ದೂರ

ಗುತ್ತಲ: ಗಾಳಿ, ನೀರು, ಭೂಮಿ, ಆಹಾರ ಇವುಗಳನ್ನು ಪರಶಿವನ ಕೃಪೆಯಿಂದ ಪಡೆಯುವ ಪ್ರತಿಯೊಬ್ಬರೂ ಶಿವಪೂಜೆ ಮಾಡಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ನೆಗಳೂರ ಸಂಸ್ಥಾನ ಹಿರೇಮಠದ ಕರ್ತೃ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಜಾತ್ರೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಾವಿರದೆಂಟು ಶಿವಲಿಂಗ ಪೂಜೆ, ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಮಾನಸಿಕ ಶಾಂತಿ ಇಲ್ಲದೆ ತೊಳಲಾಡುತ್ತಿರುವವರು ಸೃಷ್ಟಿ ನಿರ್ವತೃ ಶಿವನನ್ನು ಪೂಜೆ ಮಾಡುವುದರಿಂದ ಎಲ್ಲ ಕಷ್ಟಗಳು ದೂರಾಗುವವು. ದೇವರು, ಧರ್ಮ, ಧರ್ಮಗುರು ಅವಶ್ಯವಾಗಿದ್ದು, ಗುರುವಿನ ಮಾರ್ಗದರ್ಶನದ ಮೂಲಕ ದೈವತ್ವ ಪಡೆಯಬಹುದು. ಭಕ್ತರ ಕಲ್ಯಾಣಕ್ಕಾಗಿ ಧರ್ಮ ಕಾರ್ಯ ಅವಶ್ಯವಾಗಿವೆ. ಭಕ್ತರಲ್ಲಿ ಧರ್ಮ ಪ್ರಜ್ಞೆ, ಸಾಮಾಜಿಕ ಅರಿವು ಮೂಡಿಸುತ್ತಿರುವ ಕಾರ್ಯ ನೆಗಳೂರ ಶ್ರೀ ಮಠದಲ್ಲಿ ಜರುಗುತ್ತಿರುವುದು ಶ್ಲಾಘನೀಯ. ಆಧುನಿಕತೆ ಹೆಸರಲ್ಲಿ ಧರ್ಮದ ಕಡೆಗಣನೆ ಸಮಂಜಸವಲ್ಲ ಎಂದರು.

ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ಮಠವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಭಕ್ತರೇ ಮಠದ ಸಂಪತ್ತು. ನೆಮ್ಮದಿ ಸುಖ ಶಾಂತಿಯ ಜೀವನ ಸಾಗಿಸಲು ದೇವರು ಹಾಗೂ ದೈವತ್ವದಲ್ಲಿ ನಂಬಿಕೆ ಇದ್ದಾಗ ಮಾತ್ರ ಸಾಧ್ಯ ಎಂದು ಹೇಳಿದರು.

ಅಮ್ಮಿನಬಾವಿ ಪಂಚಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಸ್ವಾಮೀಜಿ, ರಾಮಘಟ್ಟದ ರೇವಣಸಿದ್ಧ ಸ್ವಾಮೀಜಿ, ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಸ್ವಾಮೀಜಿ, ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಾಡಿ ಶಾಂತಲಿಂಗ ಸ್ವಾಮೀಜಿ, ಲಿಂಗದಹಳ್ಳಿ ಹಿರೇಮಠದ ವೀರಭದ್ರ ಸ್ವಾಮೀಜಿ, ಬೆಳಗುಂಪೆ ಅಭಿನವ ಪರ್ವತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಿವೃತ್ತ ಪ್ರಾಧ್ಯಾಪಕ ಗುರುರಾಜ ಕಲಕೋಟಿ, ವಿಘ್ನೕಶ್ವರಯ್ಯ ಸೊಲ್ಲಾಪುರಮಠ, ಗಣ್ಯ ವರ್ತಕ ಕೋಟ್ರಯ್ಯಸ್ವಾಮಿ ಕೋವಳ್ಳಿಮಠ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರುವತ್ತಿಗೌಡ್ರ, ಸಿ.ವಿ. ಚನ್ನವಿರೇಶಗೌಡ್ರ, ಜಗದೇವಪ್ಪ ನೆಲೊಗಲ, ಚಂದ್ರಶೇಖರಪ್ಪ ತೋಟಗೇರ, ಸುನಂದಮ್ಮ ತಿಳವಳ್ಳಿ ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ ಸ್ವಾಗತಿಸಿದರು. ಪ್ರೊ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಗುರುಶಾಂತಯ್ಯ ಹಿರೇಮಠ ವಂದಿಸಿದರು.

ಶಿವಲಿಂಗ ಪೂಜೆಯಲ್ಲಿ ಮುಸ್ಲಿಂ ದಂಪತಿ
ಶಿವಶಕ್ತಿ ಸ್ವರೂಪರಾದ 1008 ದಂಪತಿಯಿಂದ ಸಾವಿರದೆಂಟು ಮಣ್ಣಿನ ಶಿವಲಿಂಗಗಳಿಗೆ ಸಹಸ್ರ ಬಿಲ್ವಾರ್ಚನೆ, ಮಂಗಲಕರ ಮಹೋತ್ಸವ ನೆರವೇರಿಸಲಾಯಿತು. ಶಿವಲಿಂಗ ಪೂಜೆಯಲ್ಲಿ ಸರ್ವಜನಾಂಗದ ಧ್ಯೋತಕವಾಗಿ ಮುಸ್ಲಿಂ ದಂಪತಿ ಭಾಗವಹಿಸಿದ್ದರು.