ಶಿವಪೂಜೆಯಿಂದ ಆತ್ಮಬಲ ಹೆಚ್ಚಳ

ನರೇಗಲ್ಲ: ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚುತ್ತದೆ. ಧಾರ್ವಿುಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ. ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ಸಂಸ್ಕಾರದ ಸಂಕೇತಗಳಾಗಿವೆ ಎಂದು ಹಾಲಕೆರೆ ಅನ್ನದಾನೇಶ್ವರ ಮಠದ ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀಅನ್ನದಾನೇಶ್ವರ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಜರುಗಿದ ಲಿಂಗದೀಕ್ಷೆ, ಸಾಮೂಹಿಕ ಅಯ್ಯಾಚಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಸಂಸಾರ ಬಂಧನದಲ್ಲಿ ಸಿಲುಕಿ ಪಡಬಾರದ ದುಖಃಗಳನ್ನು ಅನುಭವಿಸುವ ಜೀವಿಗಳು ಆ ಸಂಸಾರಿಕ ದುಖಃಗಳಿಂದ ಮುಕ್ತಿ ಪಡೆಯಬೇಕಾದರೆ ಸಂಸ್ಕಾರ ಅತ್ಯಂತ ಅಗತ್ಯವಾಗಿದೆ. ಮನುಷ್ಯ ತಾನು ಇರುವ ಸ್ಥಿತಿಗಿಂತಲೂ ಇನ್ನಷ್ಟು ಉನ್ನತವಾದ ಸ್ಥಿತಿಯನ್ನು ತಲುಪಲು ನೀಡುವ ಪ್ರಾಯೋಗಿಕ ಪ್ರೇರಣೆಯನ್ನೇ ಸಂಸ್ಕಾರವೆಂದು ಕರೆಯುತ್ತಾರೆ. ಜಗತ್ತಿನ ಎಲ್ಲ ಧರ್ಮದಲ್ಲಿಯೂ ಇಂತಹ ಹಲವಾರು ಸಂಸ್ಕಾರಗಳನ್ನು ಕಾಣಬಹುದಾಗಿದೆ. ವೀರಶೈವ ಧರ್ಮದಲ್ಲಿ ಲಿಂಗದೀಕ್ಷೆ ಮತ್ತು ಅಯ್ಯಾಚಾರ ಸಂಸ್ಕಾರಗಳು ಅತ್ಯಂತ ಮಹತ್ವಪೂರ್ಣವಾಗಿವೆ. ಶ್ರೀಗಳು ಸದ್ಭಕ್ತರಿಗೆ ಲಿಂಗವನ್ನು ದಯಾಪಾಲಿಸಿ ದೇಹಗಳನ್ನು ಮಂತ್ರ ಸಂಸ್ಕಾರದ ಮೂಲಕ ಶುದ್ಧೀಕರಣಗೊಳಿಸಿ ಜ್ಞಾನೋಪದೇಶವನ್ನು ನೀಡಿ ಈ ಲಿಂಗವನ್ನು ನಿನ್ನ ಪ್ರಾಣಕ್ಕಿಂತ ಸಮಾನವಾಗಿ ಪ್ರೀತಿಸಿಯೆಂದು ಆದೇಶ ಮಾಡುವ ವಿಶಿಷ್ಟ ಸಂಸ್ಕಾರವೇ ದೀಕ್ಷಾ ಸಂಸ್ಕಾರವಾಗಿದೆ’ ಎಂದರು.

ಅಬ್ಬಿಗೇರಿ ಹಿರೇಮಠದ ಸೋಮಶೇಖರ ಸ್ವಾಮೀಜಿ, ಕೊಟ್ಟೂರ ದೇಶಿಕರು ನೇತೃತ್ವ ವಹಿಸಿದ್ದರು. ಮಹಾತ್ಮಪ್ಪ ಬಸವರಡ್ಡೇರ, ಬೂದಪ್ಪ ಲಕ್ಕುಂಡಿ, ಅಂದಯ್ಯ ಕಳ್ಳಿಮಠ, ಮಲ್ಲಿಕಾರ್ಜುನ ಕಲ್ಲೇಶ್ಯಾಣಿ, ದೇವಪ್ಪ ಬಸವರಡ್ಡೇರ, ಯೋಗೇಶ ಅಂಗಡಿ, ಸುರೇಶ ಶಿದ್ನೇನಕೊಪ್ಪ, ಶಿವಪ್ಪ ಶಿದ್ನೇಕೊಪ್ಪ, ಬಸವರಾಜ ತಳವಾರ, ಬಸಲಿಂಗಯ್ಯ ಹಿರೇಮಠ, ಅಶೋಕ ಬಸವರಡ್ಡೇರ, ಶಿವನಗೌಡ ಯಲ್ಲರಡ್ಡಿ, ಸುರೇಶ ಯಲ್ಲರಡ್ಡಿ, ಮುದಿಯಪ್ಪ ಹೇರೂರ, ಹೋನ್ನಪ್ಪ ವೀರಘಂಟಿ, ಶಿವಯೋಗಿ ಒಂಟೇಲೆ, ಬಸವರಾಜ ಹನಮನಾಳ, ಶರಣಪ್ಪ ಮುಗಳಿ, ಅಂದಪ್ಪ ಮುಧೋಳ ಇತರರಿದ್ದರು.

ಕಷ್ಟ, ಸುಖಗಳನ್ನು ಸಮನಾಗಿ ಸ್ವೀಕರಿಸಿ

ನರೇಗಲ್ಲ: ಜೀವನದಲ್ಲಿ ಬರುವ ಕಷ್ಟ, ಸುಖಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವುಗಳನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಬೇಕು ಎಂದು ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಶ್ರೀ ಜ್ಯೋತಿರ್ಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ 8 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ. ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹ ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಮಿತ ಸಂತಾನ, ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ದಂಪತಿಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು. ತಂದೆ-ತಾಯಿ, ಅತ್ತೆ-ಮಾವ, ಗುರು-ಹಿರಿಯರಲ್ಲಿ ವಿಧೇಯತೆ ತೋರಬೇಕು, ತಾಳ್ಮೆಯಿಂದ ಆದರ್ಶಮಯ ಜೀವನಕ್ಕೆ ಅಣಿಯಾಗಬೇಕು. ಸಂಸಾರದ ಜೋಡೆತ್ತಿನ ಬಂಡಿ ಸರಾಗವಾಗಿ ಸಾಗಿದಾಗ ಮಾತ್ರ ಆ ಮನೆ ಸ್ವರ್ಗವಾಗುತ್ತದೆ’ ಎಂದರು.

ಕೊಟ್ಟೂರ ದೇಶಿಕರು ಮಾತನಾಡಿ, ಸಂಪ್ರದಾಯ, ಸಂಸ್ಕೃತಿ, ಧರ್ಮಮಾರ್ಗ ಮತ್ತು ಮಠಮಾನ್ಯಗಳ ಸತ್ಸಂಗದೊಂದಿಗೆ ಸಾತ್ವಿಕ ಜೀವನಕ್ಕೆ ಹೊಂದಿಕೊಳ್ಳಬೇಕು. ವೈಚಾರಿಕ ಚಿಂತನೆ ಮೌಲ್ಯಯುತವಾದುದು. ಜಾತಿಗಿಂತ ನೀತಿ, ಮನುಷ್ಯತ್ವ ದೊಡ್ಡದು. ಮೌಢ್ಯಗಳಿಗೆ ಕಟ್ಟು ಬೀಳದೆ ಆದರ್ಶ ಜೀವನ ನಡೆಸಬೇಕು ಎಂದರು.

Leave a Reply

Your email address will not be published. Required fields are marked *