ಅರಕಲಗೂಡು: ಭಾರತೀಯ ಸಾಂಸ್ಕೃತಿ, ಪರಂಪರೆಯನ್ನು ಎತ್ತಿಹಿಡಿದ ಜಕಣಾಚಾರಿ, ಶಿಲ್ಪ ಕಲೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸೋಮವಾರ ಏರ್ಪಡಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದೆಲ್ಲೆಡೆ ಭಾರತೀಯ ಶಿಲ್ಪಕಲೆ ಆಕರ್ಷಿಸುವಂತೆ ಮಾಡುವಲ್ಲಿ ವಿಶ್ವ ಕರ್ಮ ಸಮುದಾಯದ ಕಲಾ ಪ್ರಜ್ಞೆ ಮತ್ತು ಪರಿಶ್ರಮವಿದೆ. ತಾಲೂಕು ಆಡಳಿತ ಪಟ್ಟಣದ ವೃತ್ತವೊಂದಕ್ಕೆ ಜಕಣಾಚಾರ್ಯರ ಹೆಸರಿಡುವ ಮೂಲಕ ಅವರನ್ನು ನೆನಪು ಮಾಡಿಕೊಳ್ಳುವ ಕಾರ್ಯ ನಡೆಸಬೇಕು ಎಂದರು.
ಚಿತ್ರಕಲಾವಿದ ಪ್ರವೀಣ್ ಕುಮಾರ್, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್, ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ತಾಲೂಕು ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಸಂತೋಷ್, ಮಾಜಿ ಅಧ್ಯಕ್ಷ ಎಚ್.ಬಿ.ಕೃಷ್ಣ ಮಾತನಾಡಿದರು.
ವಿಶ್ವಕರ್ಮ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಪಪಂ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ, ಬಿಇಒ ದೇವರಾಜ್, ರೇಷ್ಮೆ ಇಲಾಖೆ ಸಹಾಯಕ ನಿರ್ದೆಶಕ ಸೀತಾರಾಮ್‌ಭಟ್, ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ.ಕವಿತಾ, ಸಿಡಿಪಿಒ ವೆಂಕಟೇಶ್ ಇತರರು ಉಪಸ್ಥಿತರಿದ್ದರು.